ಶನಿವಾರ, ಆಗಸ್ಟ್ 13, 2022
26 °C

ಮಹಾರಾಷ್ಟ್ರ ಬಂಡಾಯಕ್ಕೆ ಬಿಜೆಪಿಯೇ ಹಿಂದಿನ ಸೀಟಿನ ಚಾಲಕ: ಎಚ್‌.ಕೆ.ಪಾಟೀಲ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಮಹಾರಾಷ್ಟ್ರದ ಬಂಡಾಯದ ಹಿಂದೆ ಬಿಜೆಪಿ ಇದೆ. ಬಿಜೆಪಿಯೇ ಅದರ ಹಿಂದಿನ ಸೀಟಿನ ಚಾಲಕ’ ಎಂದು ಶಾಸಕ ಎಚ್‌.ಕೆ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಬಿಜೆಪಿಯವರು ಈ ಹಿಂದೆ ಕರ್ನಾಟಕದಲ್ಲಿ 17 ಮಂದಿ ಶಾಸಕರ ರಾಜೀನಾಮೆ ಕೊಡಿಸಿ, ಸಮ್ಮಿಶ್ರ ಸರ್ಕಾರ ಬೀಳಿಸಿದರು. ಅಪರೇಷನ್ ಕಮಲದ ಮುಂದಿನ ಭಾಗವಾಗಿ ಮಹಾರಾಷ್ಟ್ರದಲ್ಲಿ ಇಡೀ ಪಕ್ಷವನ್ನೇ ಒಡೆಯಲು ಬಿಜೆಪಿ ಮುಂದಾಗಿದೆ’ ಎಂದು ಅವರು ಆರೋಪ ಮಾಡಿದರು.

‘ದೇಶದ ಜನರನ್ನು ಭಯದ ನೆರಳಿನಲ್ಲಿ ಇಟ್ಟು ರಾಜ್ಯಭಾರ ನಡೆಸಲು ಸಾಧ್ಯವಿಲ್ಲ. ಜನರು ಶಿವಸೇನೆಯ ಜತೆಗಿದ್ದಾರೆ. ಇಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವ ಬಿಜೆಪಿಗೆ ಬರುವ ದಿನಗಳಲ್ಲಿ ಜನರೇ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್‍ನ 44 ಶಾಸಕರು ಒಗ್ಗಟ್ಟಾಗಿದ್ದೇವೆ. ಸರ್ವಾನುಮತದಿಂದ ಮಹಾ ವಿಕಾಸ ಅಘಾಡಿಯನ್ನು ಬೆಂಬಲಿಸಲು ನಿರ್ಣಯಿಸಿದ್ದೇವೆ’ ಎಂದು ಹೇಳಿದರು.

‘ಪ್ರವಾಹದ ಕಾರಣದಿಂದ ಅಸ್ಸಾಂನಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಆದರೆ, ಅಸ್ಸಾಂ ಮುಖ್ಯಮಂತ್ರಿ ನೆರೆ ಸಂತ್ರಸ್ತರನ್ನು ಭೇಟಿಯಾಗಿಲ್ಲ. ಬದಲಾಗಿ, ಬಂಡಾಯ ಶಾಸಕರ ಜತೆಗೆ ಕೇಕ್ ಕತ್ತರಿಸಲು ಬರುತ್ತಾರೆ. ಜನರು ದಡ್ಡರಲ್ಲ, ಎಲ್ಲವನ್ನೂ ನೋಡುತ್ತಿದ್ದು, ತಕ್ಕ ಪಾಠ ಕಲಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಸತ್ಯದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತುವವರಿಗೆ, ತಮ್ಮ ಪಕ್ಷ ಅಥವಾ ಸರ್ಕಾರದ ವಿರುದ್ಧ ಇರುವವರನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರದ ಇಡಿಯಿಂದ ನೋಟಿಸ್ ಕೊಡಿಸುವುದನ್ನು ಸಾಮಾನ್ಯ ಮಾಡಿಕೊಂಡಿದೆ’ ಎಂದು ಅವರು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.