ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಕುಶಲ ಅಭಿವೃದ್ಧಿ ನಿಗಮ: ವ್ಯವಸ್ಥಾಪಕ ನಿರ್ದೇಶಕಿ– ಅಧ್ಯಕ್ಷರ ಪತ್ರ ಸಮರ

ಪರಸ್ಪರ ಆರೋಪ: ಮುಖ್ಯ ಕಾರ್ಯದರ್ಶಿಗೆ ದೂರು
Last Updated 2 ಜೂನ್ 2022, 3:38 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ನಡುವೆ ‘ಪತ್ರ ಸಮರ’ ಆರಂಭವಾಗಿದೆ. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯ ಆರೋಪದಡಿ ಇಬ್ಬರೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.

ಇಬ್ಬರ ಮಧ್ಯೆ ಹಲವು ದಿನಗಳಿಂದ ಶೀತಲ ಸಮರ ನಡೆಯುತ್ತಿತ್ತು. ಕಾರ್ಯನಿರ್ವಹಣೆಗೆ ಸಹಕಾರ ನೀಡದ ಆರೋಪದಡಿ ನಿಗಮದ ಅಧ್ಯಕ್ಷರು ವ್ಯವಸ್ಥಾಪಕ ನಿರ್ದೇಶಕರಿಗೆ 76 ನೋಟಿಸ್‌ ನೀಡಿದ್ದರು. ಯಾವುದಕ್ಕೂ ಅವರು ಉತ್ತರ ನೀಡಿರಲಿಲ್ಲ. ನಿಗಮದ ಕೇಂದ್ರ ಕಚೇರಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ರೆಕಾರ್ಡಿಂಗ್‌ ಇರುವ ಡಿವಿಆರ್‌ನಲ್ಲಿ ಮಾಹಿತಿ ತಿರುಚಿರುವ ಆರೋಪದ ಮೇಲೆ ರೂಪಾ ಅವರು ರಾಘವೇಂದ್ರ ಶೆಟ್ಟಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.

ಭ್ರಷ್ಟಾಚಾರದ ಆರೋಪ: ಮಂಗಳವಾರ (ಮೇ 31) ಮುಖ್ಯ ಕಾರ್ಯದರ್ಶಿಯವರಿಗೆ ಆರು ಪುಟಗಳ ಪತ್ರ ಬರೆದಿರುವ ರಾಘವೇಂದ್ರ ಶೆಟ್ಟಿ, ‘ರೂಪಾ ನಿಗಮದಲ್ಲಿ ₹ 6 ಕೋಟಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆಸಿ ದ್ದಾರೆ’ ಎಂದು ಆರೋಪಿಸಿದ್ದರು. ನಿಗಮದ ಕಡತಗಳನ್ನು ನೀಡುವಂತೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ ಎಂದು ದೂರಿದ್ದರು.

‘ಶೋ ರೂಂನಲ್ಲಿ ಕ್ಯಾಶಿಯರ್‌ ಹುದ್ದೆಯಲ್ಲಿದ್ದ ಶ್ರೀಧರ್‌ ಎಂಬ ನೌಕರನನ್ನು ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ನೇಮಿಸಿಕೊಂಡು ಅವರ ಮೂಲಕ ಅವ್ಯವಹಾರ ನಡೆಸುತ್ತಿದ್ದಾರೆ. ನಿಗಮದ ಮೂರು ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ರೂಪಾ ಹಾಗೂ ಅವರ ಕುಟುಂಬದವರು ಬಳಸುತ್ತಿದ್ದಾರೆ. ವೈಯಕ್ತಿಕ ಕೆಲಸಕ್ಕೆ ಹೋದಾಗಲೂ ನಿಗಮದಿಂದ ಲಕ್ಷಾಂತರ ರೂಪಾಯಿ ವಿಮಾನ ಪ್ರಯಾಣ ವೆಚ್ಚ, ಹೋಟೆಲ್‌ ವೆಚ್ಚವನ್ನು ಭರಿಸಲಾಗಿದೆ. ಅವರ ಮನೆಗೆಲಸದ ಸಿಬ್ಬಂದಿಗೂ ನಿಗಮದಿಂದಲೇ ವೇತನ ನೀಡಲಾಗುತ್ತಿದೆ. ವ್ಯವಸ್ಥಾಪಕ ನಿರ್ದೇಶಕರ ಸ್ನೇಹಿತರಿಗೆ ನಿಗಮದ ಮಳಿಗೆಗಳಲ್ಲಿ ಶೇಕಡ 30ರಷ್ಟು ರಿಯಾಯ್ತಿ ನೀಡಲಾಗುತ್ತಿ. ಈ ಎಲ್ಲ ವಿಷಯಗಳ ಬಗ್ಗೆಯೂ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದ್ದರು.

‘ರೂಪಾ ವಾರದಲ್ಲಿ ಎರಡು ದಿನ ಮಾತ್ರ ಕಚೇರಿಗೆ ಬರುತ್ತಾರೆ. ಉಳಿದ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯ ದಾಖಲೆ ನನ್ನ ಬಳಿ ಇದೆ’ ಎಂದು ದೂರಿನಲ್ಲಿ ತಿಳಿಸಿದ್ದರು.

ಎಂ.ಡಿಯಿಂದ ಪ್ರತಿ ದೂರು: ರಾಘವೇಂದ್ರ ಶೆಟ್ಟಿ ವಿರುದ್ಧ ಬುಧವಾರ ಪ್ರತಿ ದೂರು ಸಲ್ಲಿಸಿರುವ ರೂಪಾ, ‘ನಿಗಮದ ಅಧ್ಯಕ್ಷರು ಅಧಿಕಾರ ಇಲ್ಲದಿದ್ದರೂ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪನಡೆಸುತ್ತಿದ್ದಾರೆ. ₹ 25 ಕೋಟಿ ಅಕ್ರಮ ನಡೆಸಿ ಪ್ರಧಾನ ವ್ಯವಸ್ಥಾಪಕ ವಜಾಗೊಂಡಿರುವ ಕಿಶೋರ್‌ ಕುಮಾರ್‌ ಎಂಬುವವರನ್ನು ಮರಳಿ ಅದೇ ಹುದ್ದೆಗೆ ನೇಮಕ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ₹ 5 ಕೋಟಿ ಹಣದ ವ್ಯವಹಾರದ ಮಾತುಕತೆ ನಡೆದಿ ರುವ ಮಾಹಿತಿ ಇದೆ’ ಎಂದು ಆರೋಪಿಸಿದ್ದಾರೆ.

‘ನಿಗಮದ ಅಧ್ಯಕ್ಷರಿಗೆ ನೀಡಿದ್ದ ಕಾರನ್ನು ಅವರೇ ಅಪಘಾತ ಮಾಡಿ, ಚಾಲಕನ ಮೇಲೆ ಹೊರಿಸಿದ್ದರು. ಕಾರಿನ ದುರಸ್ತಿಗೆ ₹10.84 ಲಕ್ಷ ವೆಚ್ಚವಾಗಿದೆ. ಅಧ್ಯಕ್ಷರ ಕಚೇರಿ ಸಿಬ್ಬಂದಿಯ ಹಾಜರಾತಿ ವಿವರ ಒದಗಿಸದೇ ಮಾಸಿಕ ₹5 ಲಕ್ಷದಷ್ಟು ವೇತನ ಮತ್ತು ಇತರ ವೆಚ್ಚ ಪಡೆಯಲಾಗುತ್ತಿದೆ. ನಿಗಮದ ಅಧಿಕಾರಿಗಳಿಂದ ಬಲವಂತವಾಗಿ ಊಟ ತರಿಸಿಕೊಂಡು ಬಳಸಿದ್ದಾರೆ. ಮಹಿಳಾ ಆಪ್ತ ಸಹಾಯಕಿಯೇ ಬೇಕು ಎಂಬ ಬೇಡಿಕೆಯನ್ನು ಅಧ್ಯಕ್ಷರು ಇರಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನಿಖೆಗೆ ಆಗ್ರಹ
‘ಬೇಳೂರು ರಾಘವೇಂದ್ರ ಶೆಟ್ಟಿ ತಮ್ಮ ಹೆಸರಿನ ಮುಂದೆ ‘ಡಾಕ್ಟರ್‌’ ಎಂದೇ ಬಳಸುವಂತೆ ಒತ್ತಾಯಿಸುತ್ತಿದ್ದಾರೆ. ಅವರು ಈ ಪದವಿ ಎಲ್ಲಿಂದ ಪಡೆದರು ಎಂಬುದರ ಕುರಿತು ತನಿಖೆ ನಡೆಸಬೇಕು. ಅವರ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಶ್ರೀಕಾಂತ ಚೌರಿ ಎಂಬಾತ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಬಂಧಿತನಾಗಿದ್ದಾನೆ. ರಾಘವೇಂದ್ರ ಶೆಟ್ಟಿ ಕೂಡ ಈ ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಡಿ. ರೂಪಾ ಮುಖ್ಯ ಕಾರ್ಯದರ್ಶಿಯವರನ್ನು ಒತ್ತಾಯಿಸಿದ್ದಾರೆ.

ಅಧ್ಯಕ್ಷರಿಗೆ ನೋಟಿಸ್‌
ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆಗಳಿಂದ ಹಣ ಪಾವತಿಸದೇ ವಿವಿಧ ವಸ್ತುಗಳನ್ನು ತೆಗೆದುಕೊಂಡು ಹೋಗಿರುವ ಆರೋಪದಡಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರಿಗೆ ಬುಧವಾರ ನೋಟಿಸ್‌ ನೀಡಿರುವ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ, ಈ ಬಾಬ್ತು ₹ 3.10 ಲಕ್ಷ ಪಾವತಿಸುವಂತೆ ಸೂಚಿಸಿದ್ದಾರೆ.

*
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಅವರು ಭ್ರಷ್ಟಾಚಾರ ನಡೆಸುತ್ತಿರುವುದಕ್ಕೆ ನನ್ನ ಬಳಿ ದಾಖಲೆಗಳಿವೆ. ಈ ಕುರಿತು ನಾನು ದೂರು ನೀಡಿದ ಬಳಿಕ ಅವರು ಸುಳ್ಳು ದೂರು ನೀಡಿದ್ದಾರೆ.
-ಬೇಳೂರು ರಾಘವೇಂದ್ರ ಶೆಟ್ಟಿ

*
ನಿಗಮದ ಅಧ್ಯಕ್ಷ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಹಣ ಮಾಡಲು ರಾಘವೇಂದ್ರ ಶೆಟ್ಟಿ <br/>ಯತ್ನಿಸುತ್ತಿದ್ದಾರೆ ಎಂದು ಮುಖ್ಯ ಕಾರ್ಯ ದರ್ಶಿಯವರಿಗೆ ದೂರು ನೀಡಿದ್ದೇನೆ,
-ಡಿ. ರೂಪಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT