ಮಂಗಳವಾರ, ಅಕ್ಟೋಬರ್ 20, 2020
26 °C

ರಾಹುಲ್‌, ಪ್ರಿಯಾಂಕರನ್ನು ವಶಕ್ಕೆ ಪಡೆದ ಪೊಲೀಸರ ನಡೆ ಖಂಡಿಸಿದ ಕುಮಾರಸ್ವಾಮಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯಾಚಾರ ಹಾಗೂ ಹತ್ಯೆಗೀಡಾದ ದಲಿತ ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಲು ಕಾಲ್ನಡಿಗೆಯಲ್ಲಿ ಹೊರಟಿದ್ದ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ದೌರ್ಜನ್ಯ ತೀವ್ರ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಭೇಟಿಗಾಗಿ ಹತ್ರಾಸ್‌ಗೆ ತೆರಳುತ್ತಿದ್ದಾಗ ಗುರುವಾರ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಅಹಿಂಸಾ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಜನ್ಮದಿನದ ಮುನ್ನ ಇಂದು ಉತ್ತರ ಪ್ರದೇಶ ಪೊಲೀಸರು ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಅಮಾನವೀಯ ವರ್ತನೆ ತೋರಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಪ್ರತಿಭಟನಾ ಅಸ್ತ್ರವನ್ನು ಹಾಡುಹಗಲೇ ದಹಿಸುವ ಯತ್ನ ಎಂದು ಅಭಿಪ್ರಾಯಪಟ್ಟಿದ್ದಾರೆ. 

ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯ ವಿರೋಧಿಗಳನ್ನು ಹಣಿಯಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ ಎಂದರೆ, ದಲಿತ ಬಾಲಕಿಯ ಪೋಷಕರನ್ನು ಹೊರಗಿಟ್ಟು ಆಕೆಯ ಶವವನ್ನು ಕತ್ತಲಲ್ಲಿ ಸುಟ್ಟಿದ್ದಾರೆ ಎಂಬುದರಲ್ಲಿ ನನಗೆ ಉತ್ಪ್ರೇಕ್ಷೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. 

ಯಾವುದೇ ಸರಕಾರ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದ ನಾಯಕರ ಕೊರಳಪಟ್ಟಿಗೆ ಕೈ ಹಾಕುತ್ತಾರೆ ಎಂದರೆ, ಉತ್ತರ ಪ್ರದೇಶ ಪೊಲೀಸರ ಹಿಂದೆ ಅಲ್ಲಿ ಅಧಿಕಾರ ಹಿಡಿದವರ "ನಿರ್ದೇಶನ" ಇಲ್ಲದಿರಲು ಸಾಧ್ಯವೇ? ಇಂತಹ ಧೋರಣೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ ಎಂದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು