ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಲಾಭಕ್ಕೆ ಮುಸ್ಲಿಂ ಅಭ್ಯರ್ಥಿಗಳಿಗೆ ಎಚ್‌ಡಿಕೆ ಟಿಕೆಟ್‌: ಚಲುವರಾಯಸ್ವಾಮಿ

Last Updated 5 ಅಕ್ಟೋಬರ್ 2021, 9:09 IST
ಅಕ್ಷರ ಗಾತ್ರ

‌ಬೆಂಗಳೂರು: ‘ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಲು ಆ ಕ್ಷೇತ್ರಗಳಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕೂಡಿದರೆ ಗೊತ್ತಾಗಲ್ವಾ’ ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಬಹುದೆಂಬ ಭಯ ಕುಮಾರಸ್ವಾಮಿಗಿದೆ. ಹೀಗಾಗಿ ಈಗಿನಿಂದಲೇ ಬಿಜೆಪಿ ಜತೆ ಸೇರಿ ತಂತ್ರಗಾರಿಕೆ ಮಾಡುತ್ತಿದ್ದಾರೆ’ ಎಂದೂ ದೂರಿದರು.

‘ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನ ಬುದ್ದಿ ಕಲಿಸುತ್ತಾರೆ’ ಎಂದೂ ಹೇಳಿದರು.

‘ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕರನ್ನು ಗುರಿ ಮಾಡುತ್ತಿದ್ದಾರೆಯೇ’ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ನಾಯಕರನ್ನು ಗುರಿ ಮಾಡಿದರೆ ಅನುಕಂಪ ಸಿಗಬಹುದುದೆಂದು ಕುಮಾರಸ್ವಾಮಿ ಹಾಗೆ ಮಾತನಾಡುತ್ತಿರಬಹುದು. ನಮ್ಮನ್ನು ಗುರಿ ಮಾಡಿದರೆ ಏನಾದರೂ ಸಿಗುತ್ತಾ ಎನ್ನುವ ಕಾರ್ಯತಂತ್ರ ಅವರದ್ದು. ನಾವು ಜೆಡಿಎಸ್‌ಗೆ ಕೌಂಟರ್ ಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಕಾರ್ಯಕರ್ತರು ಎಲ್ಲ ಕಡೆ ಇದ್ದಾರೆ ನಮ್ಮದೇ ಸಂಘಟನೆ ಇದೆ’ ಎಂದರು.

ಮೊದಲು ಪರಿಹಾರ ಕೊಡಲಿ: ‘ಕಂದಾಯ ಸಚಿವ ಆರ್‌. ಅಶೋಕ ಅವರು ಪ್ರಚಾರ ಬಿಟ್ಟು, ಪ್ರಾಮಾಣಿಕವಾಗಿ ಇಲಾಖೆಯಲ್ಲಿ ಕೆಲಸ ಮಾಡಲಿ. ಕೋವಿಡ್‌ನಿಂದ ಸತ್ತವರ ಕುಟುಂಬಕ್ಕೆ ಮೊದಲು ಪರಿಹಾರ ಕೊಡಲಿ. ಅಂಕಿಅಂಶಗಳನ್ನು ಮುಚ್ಚಿಡುವುದು ಬೇಡ’ ಎಂದರು.

‘ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಸಚಿವರ ಕಾರು ಹರಿದು ಸತ್ತಿದ್ದಾರೆ. ರಾಮನ ರಾಜ್ಯವಾಗಿದ್ದ ಉತ್ತರ ಪ್ರದೇಶ ಈಗ ರಾವಣನ ರಾಜ್ಯವಾಗಿದೆ. ನಮ್ಮ ನಾಯಕಿ ಸಾಂತ್ವನ ಹೇಳಲು ಹೋದರೆ ಅವರನ್ನು ಬಂಧಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದ 34 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದರೆ, 4 ಲಕ್ಷ ಜನ ಮೃತರಾಗಿದ್ದಾರೆ ಎಂಬ ಅಂಕಿಅಂಶ ಇದೆ. ಕೋವಿಡ್‌ ಆರಂಭದಲ್ಲೇ ತಡೆಗಟ್ಟಲು ಕನಿಷ್ಠ ಪ್ರಜ್ಞೆ ಉಪಯೋಗಿಸಿಲ್ಲ. ಬಳ್ಳಾರಿಯಲ್ಲಿ ಜೆಸಿಬಿಯಲ್ಲಿ ಮೃತದೇಹಗಳನ್ನು ಎಸೆದರು. ಚಿಕಿತ್ಸೆಯಲ್ಲಿ ಸಾಕಷ್ಟು ಲೋಪದೋಷ ಆಯಿತು. ಕೋವಿಡ್‌ನಿಂದ ಸರ್ಕಾರ ದುಡ್ಡು ಮಾಡಲು ಹೊರಟಿತು. ಖರೀದಿ ಸೇರಿದಂತೆ ನಾನಾ ರೀತಿಯಿಂದ ಬಿಜೆಪಿಯವರು ಹಣ ಮಾಡಿದರು. ನಮ್ಮ ಕೆಪಿಸಿಸಿ ಅಧ್ಯಕ್ಷರು ಕೋವಿಡ್ ಸಮಯದಲ್ಲಿ ರಸ್ತೆಗೆ ಇಳಿದು ಕೆಲಸ ಮಾಡಿದರು’ ಎಂದರು.

‘ಡೆತ್ ಅಡಿಟ್ ಮಾಡಿಲ್ಲ. ಮರಣ ಪ್ರಮಾಣಪತ್ರ ಕೊಡುತ್ತಿಲ್ಲ. ಪರಿಹಾರ ಘೋಷಣೆ ಮಾಡಿದರೂ ಹಣ ತಲುಪಿಲ್ಲ. ಖಾಸಗಿ ಆಸ್ಪತ್ರೆಗಳ ಜತೆ ಶಾಮೀಲಾಗಿ ಕಿಕ್ ಬ್ಯಾಕ್ ಪಡೆದಿದ್ದಾರೆ’ ಎಂದೂ ದೂರಿದರು.

ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ‘ರಾಷ್ಟ್ರಮಟ್ಟದಲ್ಲಿ ಕೆಲವು ವಿಚಾರಗಳ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯುತ್ತಿದೆ. ಎಲ್ಲ ಪ್ರಮುಖ ನಾಯಕರನ್ನು ಕರೆಸಿ ಸೋನಿಯಾ ಗಾಂಧಿ ಮಾತನಾಡುತ್ತಿದ್ದಾರೆ. ದೆಹಲಿ ಮಟ್ಟದ ರಾಜಕಾರಣಕ್ಕೆ ಸಿದ್ದರಾಮಯ್ಯ ಹೋಗುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT