ಗುರುವಾರ , ಜುಲೈ 29, 2021
27 °C

ನೀರಾವರಿ ಕಿಕ್‌ಬ್ಯಾಕ್‌ ಜೊತೆಗೇ, ಅಬಕಾರಿ ಲಂಚ ಹಗರಣವೂ ತನಿಖೆಯಾಗಲಿ: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಹಣ ಲೂಟಿ ಮಾಡುವಲ್ಲಿ ನಿರತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ನೀರಾವರಿ ಇಲಾಖೆಯ ₹20,000 ಕೋಟಿ ಯೋಜನೆಯಲ್ಲಿ ಶೇ.10 ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂಬ ಆರೋಪ ಜೀವಂತವಾಗಿರುವಾಗಲೇ ಅಬಕಾರಿ ಇಲಾಖೆಯ ಅಕ್ರಮ ಬಯಲಾಗಿದೆ. ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ₹5 ಲಕ್ಷ ಹೋಗಬೇಕು ಎಂಬ ಅಧಿಕಾರಿಗಳ ಸಂಭಾಷಣೆ ಬಹಿರಂಗವಾಗಿದೆ. ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಹಣ ಲೂಟಿ ಮಾಡುವಲ್ಲಿ ನಿರತವಾಗಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

‘ಆಡಿಯೊ ಬಹಿರಂಗವಾಗುತ್ತಲೇ ಅಬಕಾರಿ ಇಲಾಖೆಯ ಮೂವರು ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಟ್ಟಿರಬಹುದಾದವರಿಗೆ ಶಿಕ್ಷೆ ಕೊಟ್ಟ ಮೇಲೆ ತೆಗೆದುಕೊಂಡಿರಬಹುದಾದವರಿಗೆ ಶಿಕ್ಷೆ ಇಲ್ಲ ಏಕೆ? ಅಧಿಕಾರಿಗಳ ಮೇಲಿನ ಕ್ರಮ ಭ್ರಷ್ಟಾಚಾರಕ್ಕಾಗಿಯೋ ಅಥವಾ ಸರ್ಕಾರದ ಬಂಡವಾಳ ಬಯಲು ಮಾಡಿದರು ಎಂಬ ಕಾರಣಕ್ಕೋ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘2 ಸಾವಿರ ಕೋಟಿ ಕಿಕ್‌ ಬ್ಯಾಕ್‌ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಈಗಾಗಲೇ ನಾನು ಆಗ್ರಹಿಸಿದ್ದೇನೆ. ಅದರಲ್ಲಿನ ಬಿ.ಎಸ್‌.ಯಡಿಯೂರಪ್ಪ ಕುಟುಂಬದ ಪಾತ್ರದ ಬಗ್ಗೆ ತನಿಖೆಯಾಗಲಿ ಎಂದು ಹೇಳಿದ್ದೇನೆ. ಅದರ ಜೊತೆಗೆ ಅಬಕಾರಿ ಇಲಾಖೆಯಲ್ಲಿನ ಈ ಪ್ರಕರಣದ ಬಗ್ಗೆಯೂ ತನಿಖೆಯಾಗಬೇಕು. ಸರ್ಕಾರ ಈ ಪ್ರಕರಣವನ್ನು ಕೂಡಲೇ ಸೂಕ್ತ ತನಿಖಾ ಸಂಸ್ಥೆಗೆ ವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕೋವಿಡ್‌ ಮತ್ತು ಬ್ಲ್ಯಾಗ್‌ ಫಂಗಸ್‌ ಸ್ಥಿತಿಗತಿಗಳು, ಕೈಗೊಂಡ ಕ್ರಮಗಳು, ಕೊಟ್ಟ ಪರಿಹಾರ, ಅಕ್ರಮ ಆರೋಪಗಳ ಕುರಿತು ಚರ್ಚಿಸಲು ಅಧಿವೇಶನ ಕರೆಯಬೇಕೆಂದು ನಾನು ಆಗ್ರಹಿಸಿದ್ದೇನೆ. ಅದರ ಬಗ್ಗೆ ಸಿಎಂ ಈವರೆಗೆ ಮಾತನಾಡಿಲ್ಲ. ಪ್ರತಿಪಕ್ಷಗಳ ಮುಂದೆ ನಿಲ್ಲಲು ಅವರಿಗೆ ಭಯವಿದ್ದಂತೆ ಕಾಣುತ್ತಿದೆ. ಭಯವಿಲ್ಲದೇ ಹೋದರೆ ಅಧಿವೇಶನ ಕರೆಯಬೇಕು’ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ... ‘ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ₹5 ಲಕ್ಷ' ಅಧಿಕಾರಿ ಹೇಳಿಕೆ ಆಡಿಯೊ ವೈರಲ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು