ಶನಿವಾರ, ಜುಲೈ 2, 2022
27 °C
ನನ್ನ ಕಂಡರೆ ಅವರಿಗೆ ಭಯ – ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹೇಳಿಕೆ

‘ನನ್ನ ಬಂಧಿಸಲು ಸಿದ್ದರಾಮಯ್ಯ ಯತ್ನಿಸಿದ್ದರು’: ಕುಮಾರಸ್ವಾಮಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸಿದ್ದರಾಮಯ್ಯ ಸಿ.ಎಂ ಆಗಿದ್ದಾಗ ಹನ್ನೆರಡು ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣದಲ್ಲಿ ನನ್ನನ್ನು ಬಂಧಿಸಲು ಯೋಜಿಸಿದ್ದರು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ  ಆರೋಪಿಸಿದರು.

‘ಅವರೊಬ್ಬ ಸುಳ್ಳಿನ ರಾಮಯ್ಯ. ಅವರಿಗೆ ನನ್ನ ಭಯ ಕಾಡುತ್ತಿದೆ. ಎಲ್ಲಿ ನಾನು ಅಧಿಕಾರಕ್ಕೆ ಬಂದು ಬಿಡುತ್ತೇನೋ ಎಂದು ಆತಂಕದಲ್ಲಿದ್ದಾರೆ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಕೆ.ಎಸ್‌.ಈಶ್ವರಪ್ಪ ಕುರಿತು ಮೃದು ಧೋರಣೆ ಇಲ್ಲ. ಸಾಕ್ಷ್ಯಾಧಾರಗಳಿದ್ದರೆ ಬಂಧಿಸಿ. ಬಂಧಿಸಿದ ಬಳಿಕ ನ್ಯಾಯಾಲಯ ನಿರಪರಾಧಿ ಎಂದರೆ ಏನು ಮಾಡುವುದು? ಎಲ್ಲದರಲ್ಲೂ ರಾಜಕೀಯ ಬೇಡ’ ಎಂದರು.

‘ಬಿಜೆಪಿ ಸರ್ಕಾರಕ್ಕೆ ನಾನು ಸರ್ಟಿಫಿಕೇಟ್ ಕೊಟ್ಟಿದ್ದೇನೆ ಎನ್ನುವ ಕಾಂಗ್ರೆಸ್ಸಿಗರ ನಾಲಿಗೆಯಲ್ಲಿ ಮೂಳೆ ಇದೆಯಾ’ ಎಂದು ಪ್ರಶ್ನಿಸಿದರು. ‌

ಶಿವಲಿಂಗೇಗೌಡ ವಿರುದ್ಧ ಅಸಮಾಧಾನಹಾಸನ ವರದಿ: ಇಲ್ಲಿ ‘ಜನತಾ ಜಲಧಾರೆ’ ಸಮಾವೇಶಕ್ಕೆ ಗೈರುಹಾಜರಾಗಿದ್ದ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬೇಸರ ಹೊರಹಾಕಿದರು.

ಕುಮಾರಸ್ವಾಮಿ ಅವರು, ‘ಪಕ್ಷದಲ್ಲಿದ್ದುಕೊಂಡು ಕುತ್ತಿಗೆ ಕೊಯ್ಯಬೇಡಿ. ಬೆನ್ನಿಗೆ ಚೂರಿ ಹಾಕುವ ರಾಜಕಾರಣ ಮಾಡಬಾರದು. ಯಾರಿಗೂ ನಾನು ರಾಜಿ ಆಗೋಲ್ಲ’ ಎಂದು ವಾಗ್ದಾಳಿ ನಡೆಸಿದರು.

ನಡುವೆಯೇ ಅವರಿಂದ ಮೈಕ್ ಪಡೆದು ಮಾತನಾಡಿದ ದೇವೇಗೌಡರು, ‘ನಾನು ತೆಂಗಿಗೆ ಪರಿಹಾರ ವಿಚಾರವಾಗಿ ಧರಣಿ ಮಾಡ್ತೀನಿ, ಮೂರು ದಿನಬಿಟ್ಟು ಬಂದು ಏಳಿಸಿ. ಕುಮಾರಸ್ವಾಮಿಗೆ ಹೇಳಿ ಏನಾದ್ರೂ ಪರಿಹಾರ ಕೊಡಿಸಿ ಅಂದ್ರು. ಅಬ್ಬಾ ಎಂತಾ ಡ್ರಾಮಾ..’ ಎಂದು ವ್ಯಂಗ್ಯವಾಡಿದರು.

ಸಮಾವೇಶಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಸಹ ಗೈರಾಗಿದ್ದರು. ‘ಸಮಾವೇಶ ತಡವಾದ ಕಾರಣ ನಾಯಕರಿಗೆ ತಿಳಿಸಿಯೇ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದೆ’ ಎಂದು ಎ.ಟಿ.ರಾಮಸ್ವಾಮಿ ತಿಳಿಸಿದರು. 

ಈ ಘಟನೆಯಿಂದ, ಶಿವಲಿಂಗೇಗೌಡರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ. 

 

ಗೌಡರು ಫೋನ್ ಮಾಡಲು ಹೇಳಿದರು: ಬೊಮ್ಮಾಯಿ

ತುಮಕೂರು: ‘ಬೆಂಗಳೂರಿಗೆ ಯಾವಾಗ ಬರುತ್ತೀರಿ. ಬಂದಾಗ ಫೋನ್ ಮಾಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಇದರಲ್ಲಿ ವಿಶೇಷವಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದೇವೇಗೌಡರು ಹೇಳಿದ್ದ ಮಾತಿಗೆ ಈ ಸ್ಪಷ್ಟನೆ ನೀಡಿದರು.

‘ದೇವೇಗೌಡರು ಹಿರಿಯರು. ಅವರ ಮಾರ್ಗದರ್ಶನ ಯಾವಾಗಲೂ ಇದ್ದೇ ಇರುತ್ತೆ’ ಎಂದರು.

ಬಿಜೆಪಿ ಬಗ್ಗೆ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮೃದು ಧೋರಣೆ ಕುರಿತು ‘ಸಾಫ್ಟೂ ಇಲ್ಲ, ಕಾರ್ನರೂ ಇಲ್ಲ. ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ’ ಎಂದು ತಿಳಿಸಿದರು.

‘ಎಚ್‌ಡಿಕೆಯಿಂದಲೇ ದ್ವೇಷದ ರಾಜಕಾರಣ’

ತುಮಕೂರು: ‘ನನ್ನದು ಸ್ನೇಹದ ರಾಜಕಾರಣ. ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ನನ್ನನ್ನು ಬಂಧಿಸಲು ಸಿದ್ದರಾಮಯ್ಯ ಪ್ರಯತ್ನಿಸಿದ್ದರು’ ಎಂಬ ಕುಮಾರಸ್ವಾಮಿ ಆರೋಪಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ನನ್ನನ್ನು ಕಂಡರೆ ಸಿದ್ದರಾಮಯ್ಯನವರಿಗೆ ಭಯ’ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಸಿದ್ದರಾಮಯ್ಯ ‘ನಾನು ರಾಜಕೀಯಕ್ಕೆ ಬಂದಾಗ ಇವನ್ಯಾರು ಎಂಬುದೇ ಗೊತ್ತಿರಲಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಪಿಎಸ್‌ಐ ನೇಮಕಾತಿಗೆ ನಡೆದ ಅಕ್ರಮದಲ್ಲಿ ಭಾಗಿಯಾಗಿರುವ ಕಿಂಗ್‌ಪಿನ್ ದಿವ್ಯಾ ಹಾಗೂ ಅವರ ಗಂಡ ಬಿಜೆಪಿಯವರು. ಹಾಗಾಗಿ ಬಿಜೆಪಿ ನಾಯಕರು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು