ಮಂಡ್ಯ: ‘ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡುವುದಿಲ್ಲ. ತಾವು ಹಾಗೂ ತಮ್ಮ ಕುಟುಂಬದ ಸದಸ್ಯರನ್ನು ಬಿಟ್ಟು ಅವರಿಗೆ ಬೇರೆ ಯಾರೂ ಕಾಣಿಸುವುದಿಲ್ಲ. ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂಬುದು ಕೇವಲ ನಾಟಕ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಶುಕ್ರವಾರ ವ್ಯಂಗ್ಯವಾಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕುಮಾರಸ್ವಾಮಿ ನಾಟಕವಾಡಿಕೊಂಡೇ, ಕಣ್ಣೀರು ಹಾಕಿಕೊಂಡೇ ಜನರಿಗೆ ಮೋಸ ಮಾಡುತ್ತಾರೆ. ಈಗ ಮಾಡುತ್ತಿರುವ ಜಲಧಾರೆ ಕಾರ್ಯಕ್ರಮ ಕೂಡ ಹೊಸ ನಾಟಕ. ಅವರು ಹುಟ್ಟಿದ್ದೇ ನಾಟಕದಲ್ಲಿ, ತಾವು ಹಾಳಾಗುವುದಲ್ಲದೇ ತಮ್ಮನ್ನು ನಂಬಿದವರನ್ನೂ ಹಾಳು ಮಾಡುತ್ತಿದ್ದಾರೆ. ಎಷ್ಟೋ ನಾಯಕರು ನಂಬಿ ಅವರನ್ನು ಬೆಳೆಸಿದ್ದಾರೆ, ಆದರೆ ಕುಮಾರಸ್ವಾಮಿಯವರು ಅವರೆಲ್ಲರಿಗೂ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಕುಮಾರಸ್ವಾಮಿ ಅವರಿಗೆ ರಾಜಕೀಯ ಮಾಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಪಾಪದ ಕೆಲಸ ಇನ್ನೊಂದಿಲ್ಲ. ಬಿಜೆಪಿ ಎಂದಿಗೂ ಜೆಡಿಎಸ್ ಸಹವಾಸ ಮಾಡುವುದಿಲ್ಲ. ಜನರು ಅವರನ್ನು ತಿರಸ್ಕಾರ ಮಾಡಿದ್ದಾರೆ, ಮುಂದೆಯೂ ತಿರಸ್ಕಾರ ಮಾಡುತ್ತಾರೆ. 2023 ಅಷ್ಟೇ ಅಲ್ಲ, 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಸಂಸದೆ ಸುಮಲತಾ ಅವರಿಗೆ ಬಿಜೆಪಿ ಸೇರಬೇಕೆಂಬ ಆಸೆ ಇದೆ, ಅವರು ಒಳ್ಳೆಯ ನಾಯಕಿಯಾಗಿದ್ದು ಬಿಜೆಪಿ ಸೇರಿದರೆ ಅವರನ್ನು ಸ್ವಾಗತ ಕೋರುತ್ತೇವೆ’ ಎಂದರು.
‘ಸಮಾಜದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಕಾಂಗ್ರೆಸ್ಸಿಗರೇ ಮೂಲ ಕಾರಣಕರ್ತರಾಗಿದ್ದಾರೆ. ಅವರ ತನು–ಮನ ಎಲ್ಲವೂ ಭ್ರಷ್ಟಾಚಾರವೇ ಆಗಿದೆ. ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿರುವುದು ಕಾಂಗ್ರೆಸ್‌ಗೆ ಸಿಕ್ಕಿರುವ ಜಯವಲ್ಲ, ಸಮಾಜದಲ್ಲಿ ಕಾಂಗ್ರೆಸ್ ಮುಕ್ತವಾದಾಗ ಜನರಿಗೆ ಜಯ ಸಿಗುತ್ತದೆ. 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಮುಖಂಡರು ಆಪಾದನೆ ಮಾಡುತ್ತಿದ್ದಾರೆ, 40 ಪರ್ಸೆಂಟ್ ಸಂಸ್ಕೃತಿ ಬೆಳಸಿದವರೇ ಕಾಂಗ್ರೆಸ್ ಮುಖಂಡರಾಗಿದ್ದಾರೆ’ ಎಂದು ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.