ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಿಂದ ರಾಜ್ಯಕ್ಕೆ ಹಿಂದಿರುಗಿರುವ 2,500 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ

ಪರೀಕ್ಷೆ ಮಾಡಿಸದೇ ಬಂದಿದ್ದ 138 ಜನರೂ ಪತ್ತೆ
Last Updated 23 ಡಿಸೆಂಬರ್ 2020, 19:20 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬ್ರಿಟನ್‌ನಿಂದ ರಾಜ್ಯಕ್ಕೆ ಹಿಂದಿರುಗಿರುವ 2,500 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯಪಡೆ ಮತ್ತು ತಾಂತ್ರಿಕ ಸಲಹಾ ಸಮಿತಿಗಳ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನವೆಂಬರ್‌ 25ರಿಂದ ಡಿಸೆಂಬರ್‌ 23ರ ನಡುವಿನ ಅವಧಿಯಲ್ಲಿ 2,500 ಜನರು ಬ್ರಿಟನ್‌ನಿಂದ ರಾಜ್ಯಕ್ಕೆ ಬಂದಿದ್ದಾರೆ. ಅಲ್ಲಿ ಹೊಸ ಬಗೆಯ ಕೊರೊನಾ ವೈರಸ್‌ ಹರಡುತ್ತಿರುವ ಕಾರಣದಿಂದ ಈ ಎಲ್ಲರ ಮೇಲೂ ನಿಗಾ ಇರಿಸಲು ನಿರ್ಧರಿಸಲಾಗಿದೆ’ ಎಂದರು

138 ಮಂದಿಯೂ ಪತ್ತೆ: ಡಿ.19 ಮತ್ತು 20ರಂದು ಬ್ರಿಟನ್‌ನಿಂದ ರಾಜ್ಯಕ್ಕೆ ಬಂದಿರುವ ಪ್ರಯಾಣಿಕರ ಪೈಕಿ 138 ಜನರು ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಲಿಲ್ಲ. ಈ ಎಲ್ಲ ಪ್ರಯಾಣಿಕರನ್ನೂ ಪತ್ತೆಮಾಡಿದ್ದು, ಆರೋಗ್ಯ ಇಲಾಖೆಯ ವತಿಯಿಂದ ಅವರ ಮೂಗು ಮತ್ತು ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಸುಧಾಕರ್‌ ಮಾಹಿತಿ ನೀಡಿದರು.

ಕೋವಿಡ್‌ ದೃಢಪಟ್ಟವರ ಮಾದರಿಗಳನ್ನು ನಿಮ್ಹಾನ್ಸ್‌, ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆಯ ಕ್ಷೇತ್ರೀಯ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು. ಅಲ್ಲಿ ‘ಜೆನೆಟಿಕ್‌ ಸೀಕ್ವೆನ್ಸಿಂಗ್‌’ ವಿಧಾನದ ಮೂಲಕ ಹೊಸ ಬಗೆಯ ಕೊರೊನಾ ವೈರಸ್‌ ಕುರಿತು ಅಧ್ಯಯನ ನಡೆಸಲಾಗುವುದು ಎಂದರು.

ಪರೀಕ್ಷೆ ಮತ್ತು ಅಧ್ಯಯನದ ವೆಚ್ಚವನ್ನು ಆರೋಗ್ಯ ಇಲಾಖೆಯ ಮೂಲಕವೇ ಭರಿಸಲಾಗುವುದು. ಸಾರ್ವಜನಿಕರು ಯಾವುದೇ ವೆಚ್ಚ ಭರಿಸಬೇಕಿಲ್ಲ. ಕೋವಿಡ್‌ ಪತ್ತೆ ಪರೀಕ್ಷೆಯ ವರದಿ ಎರಡರಿಂದ ಮೂರು ದಿನಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಬ್ರಿಟನ್‌ನಿಂದ ಹಿಂದೆ ಮರಳಿರುವವರ ಆರೋಗ್ಯದ ಮೇಲೂ ಆರೋಗ್ಯ ಇಲಾಖೆಯಿಂದ ನಿಗಾ ಇರಿಸಲಾಗುವುದು. ಎರಡು ವಾರಗಳಿಂದ ಈಚೆಗೆ ಬಂದಿರುವವರ ಮೇಲೆ ಹೆಚ್ಚಿನ ನಿಗಾ ಇರಲಿದೆ. ಸೋಂಕಿನ ಲಕ್ಷಣಗಳು ಕಂಡುಬಂದಿರುವವರಿಂದ ಮಾತ್ರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುವುದು ಎಂದರು.

ತಪ್ಪು ಮಾಹಿತಿ: ‘ಬ್ರಿಟನ್‌ನಿಂದ 14,000 ಜನರು ರಾಜ್ಯಕ್ಕೆ ಬಂದಿದ್ದಾರೆ ಎಂದು ರಾಜಕೀಯ ಮುಖಂಡರೊಬ್ಬರು ಹೇಳಿದ್ದಾರೆ. ಈ ಮಾಹಿತಿ ಸತ್ಯಕ್ಕೆ ದೂರವಾದುದು. ಕೋವಿಡ್‌ಗೆ ಸಂಬಂಧಿಸಿದಂತೆ ಸೋಂಕಿತರು, ಸಾವು ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯನ್ನು ಮರೆಮಾಚುವ ಅಗತ್ಯ ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT