ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ

Last Updated 4 ಜುಲೈ 2022, 18:34 IST
ಅಕ್ಷರ ಗಾತ್ರ

ಮಡಿಕೇರಿ/ ಕಾರವಾರ/ ಮಂಗಳೂರು:ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದೆ.

ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಜನರಿಗೆ ಸಂಚಾರಕ್ಕಾಗಿ ಸೋಮವಾರ ಯಾಂತ್ರಿಕ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಾಗಮಂಡಲ ವ್ಯಾಪ್ತಿಯಲ್ಲಿ ಶಾಲಾ– ಕಾಲೇಜುಗಳಿಗೆ ಮಧ್ಯಾಹ್ನದ ವೇಳೆಗೆ ರಜೆ ಘೋಷಿಸಲಾಯಿತು.

ಕಾವೇರಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಪುಷ್ಪಗಿರಿ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹರದೂರು ಹೊಳೆಯೂ ಭೋರ್ಗರೆಯುತ್ತಿದೆ.ಜೋಡುಪಾಲದಿಂದ ಮಡಿಕೇರಿಯವರೆಗೆ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ಮಡಿಕೇರಿ ಹೊರವಲಯದ ಚಾಮುಂಡೇಶ್ವರಿ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಜಹಂಗೀರ್ ಪೈಸಾರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಶನಿವಾರಸಂತೆ–ಚಂಗಡಳ್ಳಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರಗಳು ಬಿದ್ದಿವೆ.

ಮಡಿಕೇರಿ–ಮಂಗಳೂರು ರಸ್ತೆಯಲ್ಲಿ ತಾಳತ್ತಮನೆ ಸಮೀಪ ಮಣ್ಣು ಕುಸಿದು ಕೆಲಕಾಲ ಸಂಚಾರಕ್ಕೆ ತಡೆಯಾಗಿತ್ತು. ಮಣ್ಣನ್ನು ತೆರವುಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಒಂದೇ ದಿನ 128 ವಿದ್ಯುತ್ ಕಂಬಗಳು ಮುರಿದಿದ್ದರೆ, 5 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ.

ಇದರಿಂದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಲಕ್ಷ್ಮಣತೀರ್ಥ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹಾರಂಗಿ ನದಿಯಿಂದ 12,700 ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯಕ್ಕೆ 12,475 ಕ್ಯುಸೆಕ್ ಒಳಹರಿವಿತ್ತು.

ಅನಮೋಡದಲ್ಲಿ ಗುಡ್ಡ ಕುಸಿತ: ವಾಹನ ಸಂಚಾರ ಸ್ಥಗಿತ: ಉತ್ತರ ಕನ್ನಡದ ಜೊಯಿಡಾ ತಾಲ್ಲೂಕಿನ ಅನಮೋಡದ ಸಮೀ‍ಪ ಗೋವಾ ಭಾಗದ ರಾಷ್ಟ್ರೀಯ ಹೆದ್ದಾರಿ ‘4 ಎ‌’ ಮೇಲೆ ಗುಡ್ಡ ಕುಸಿದಿದೆ.

ಜೊಯಿಡಾ ತಾಲ್ಲೂಕಿನ ರಾಮನಗರ ಮೂಲಕ ಗೋವಾ ರಾಜ್ಯಕ್ಕೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ– ಧಾರವಾಡದಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಸ್ಥಳಕ್ಕೆ ಗೋವಾದ ಅಗ್ನಿಶಾಮಕ ದಳದವರು, ಪೊಲೀಸರು ಭೇಟಿ ನೀಡಿದ್ದಾರೆ. ಜೆ.ಸಿ.ಬಿ ಮೂಲಕ ಮಣ್ಣನ್ನು ತೆರೆವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಹೊನ್ನಾವರದ ಹಳದಿಪುರ ಬಗಾಣಿ ಕ್ರಾಸ್‌ನಲ್ಲಿ ಸೋಮವಾರ, ಗಂಗಾಧರ ರಾಮಕೃಷ್ಣ ಶೇಟ್ ಎಂಬುವವರ ಮನೆಯ ಮೇಲೆ ದೊಡ್ಡ ಆಲದ ಮರ ಬಿದ್ದಿದೆ. ಆ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಏಳು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ವಿದ್ಯುತ್ ಕಂಬಗಳು ಮುರಿದಿವೆ.

ಗಂಗಾವಳಿ ನದಿಯಲ್ಲಿ ನೀರಿನ ಹರಿವು ಅಧಿಕವಾಗಿದ್ದು ರಾಮನಗುಳಿ– ಡೊಂಗ್ರಿ ಸೇತುವೆಯ ಬಹುಕೋಟಿ ವೆಚ್ಚದ ಕಾಮಗಾರಿ ಪುನಃ ಸ್ಥಗಿತಗೊಂಡಿದೆ.

ಈ ಸೇತುವೆಯ ನಿರ್ಮಾಣ ಸ್ಥಳದ ಸಮೀಪ ಮೇಲ್ಭಾಗದಲ್ಲಿ ಮಣ್ಣು ಮತ್ತು ಸಿಮೆಂಟ್ ಪೈಪ್ ಜೋಡಿಸಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿದೆ. 10ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ಶಿರಸಿಯಲ್ಲಿ 10.5 ಸೆ.ಮೀಗಳಷ್ಟು ಮಳೆಯಾಗಿದ್ದು ಹೊನ್ನಾವರದಲ್ಲಿ 7.5 ಸೆ.ಮೀ ಹಾಗೂ ಭಟ್ಕಳದಲ್ಲಿ 6.5ಸೆ.ಮೀ.ಮಳೆಯಾಗಿದೆ.

ಮಂಗಳೂರು ವರದಿ:ಕರಾವಳಿ ಜಿಲ್ಲೆಗಳು ಮತ್ತು ಚಿಕ್ಕಮಗಳೂರಿನ ಹಲವೆಡೆ ಸೋಮವಾರ ಧಾರಾಕಾರ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಭಾರಿ ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ಜಿಲ್ಲೆಯಲ್ಲಿ ಮೂರು ಮನೆಗಳಿಗೆ ಹಾನಿ ಉಂಟಾಗಿದೆ. 12 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೆಸ್ಕಾಂ ವ್ಯಾಪ್ತಿಯಲ್ಲಿ 71 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಒಂದು ವಿದ್ಯುತ್‌ ಪರಿವರ್ತಕ ಹಾನಿಗೊಳಗಾಗಿದೆ.

ಮಂಗಳೂರಿನಲ್ಲೂ ಬಿಟ್ಟು ಬಿಟ್ಟು ಮಳೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಕಡಲ್ಕೊರೆತದ ಅಬ್ಬರ ಕಡಿಮೆ ಆಗಿಲ್ಲ.

ಸ್ನಾನಘಟ್ಟ ಜಲಾವೃತ: ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣವಾಗಿ ಹಾಗೂ ಸಮೀಪದಲ್ಲಿರುವ ದೇವರ‌ಕಟ್ಟೆ ಭಾಗಶಃ ಮುಳುಗಡೆಯಾಗಿದೆ.

ಅಪಾಯ ಲೆಕ್ಕಿಸದೇ ಸೋಮವಾರ ಕೆಲವು ಭಕ್ತರು ಇಲ್ಲಿ ತೀರ್ಥಸ್ನಾನ ಮಾಡುತ್ತಿದ್ದರು. ಮುಂಜಾಗ್ರತಾ ಕ್ರಮವಾಗಿ ಇಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ‘ರಕ್ಷಕ ದಳ’ವನ್ನು ನಿಯೋಜಿಸಲಾಗಿದೆ. ತೀರ್ಥಸ್ನಾನಕ್ಕೆ ನೆರವಾಗುವಂತೆ ನದಿ ತೀರದಲ್ಲಿ ಹಗ್ಗ ಅಳವಡಿಸಲಾಗಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನವರಂಗ, ಸೀತಾನದಿ, ಬಚ್ಚಪ್ಪು, ಶಿವಪುರ, ಜರವತ್ತು ನದಿಗಳು ತುಂಬಿ ಹರಿಯುತ್ತಿದೆ.

ಹೆಬ್ರಿಯಲ್ಲಿ 24.3 ಸೆಂ.ಮೀ ಮಳೆ ಬಿದ್ದಿದೆ.

ಭಾರಿ ಮಳೆ ಮುನ್ಸೂಚನೆ:ಇದೇ 5, 6 ಹಾಗೂ 9ರಂದು ಕರಾವಳಿಯಾದ್ಯಂತ ಭಾರಿ ಮಳೆಯಾಗಲಿದೆ.

ಕಡಲಿನಲ್ಲಿ ಅಲೆಗಳ ಅಬ್ಬರ ಹಾಗೂ ಗಾಳಿಯ ವೇಗ ಹೆಚ್ಚಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT