ಶುಕ್ರವಾರ, ಸೆಪ್ಟೆಂಬರ್ 17, 2021
21 °C
ಬಾಗಲಕೋಟೆ–ಮುಧೋಳ ಸಂಪರ್ಕ ಕಡಿತ

ಕಣ್ಣು ಹಾಯಿಸಿದಷ್ಟು ದೂರ ನೀರ ಹಾದಿ- ಊರು ಬಿಡಲು ಒಪ್ಪುತ್ತಿಲ್ಲ..

ವೆಂಕಟೇಶ್‌ ಜಿ.ಎಚ್‌ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಕುಂಭದ್ರೋಣ ಮಳೆ ನಿಂತು 40 ಗಂಟೆ ಕಳೆದ ನಂತರವೂ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಆರ್ಭಟ ಹೆಚ್ಚುತ್ತಿದೆ. 

ನದಿ ತೀರದ ಗ್ರಾಮಗಳು ಪ್ರವಾಹದ ನೀರಿನಿಂದ ಆವೃತವಾಗಿದ್ದು, ಕಣ್ಣು ಹಾಯಿಸಿದಷ್ಟು ದೂರ ನೀರ ಹಾದಿಯೇ ಗೋಚರವಾಗುತ್ತಿದೆ. ನೆತ್ತಿಯ ಮೇಲೆ ಸೂರ್ಯನ ಬಿಸಿಲು ಪ್ರಖರವಾಗಿದ್ದರೂ ಎದೆ ಎತ್ತರ ಆವರಿಸಿರುವ ನೀರ ರಾಶಿ ದಾಟಿಕೊಂಡು ಹಳ್ಳಿಗರು ಸುರಕ್ಷಿತ ಸ್ಥಳಗಳತ್ತ ತೆರಳಿದರು. ಬೋಟ್‌ಗಳ ಮೂಲಕವೂ ಜನ–ಜಾನುವಾರು ಸ್ಥಳಾಂತರಿಸಲಾಯಿತು. ಮೂರು ನದಿಗಳ ದಂಡೆಯಲ್ಲಿ ಬೆಳೆದು ನಿಂತಿರುವ ಸಾವಿರಾರು ಎಕರೆ ಕಬ್ಬು, ಗೋವಿನ ಜೋಳ, ಹೆಸರು ಹಾಗೂ ತೊಗರಿ ಬೆಳೆ ನೀರು ಪಾಲಾಗಿದೆ.

ಮುಧೋಳ ಸಮೀಪದ ಚಿಚಖಂಡಿ ಸೇತುವೆ ಘಟಪ್ರಭಾ ನದಿ ಪ್ರವಾಹದಿಂದ ಮುಳುಗಡೆ ಆಗಿದ್ದು, ಬಾಗಲಕೋಟೆ ಹಾಗೂ ಮುಧೋಳ ನಡುವಿನ ನೇರ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕೃಷ್ಣೆಯ ಪ್ರವಾಹಕ್ಕೆ ಸಿಲುಕಿ ಜಮಖಂಡಿ ತಾಲ್ಲೂಕಿನ ಮುತ್ತೂರು, ಕಂಕಣವಾಡಿ, ಕೆ.ಡಿ.ಜಂಬಗಿ, ತಮದಡ್ಡಿ, ಅಸ್ಕಿ, ಘಟಪ್ರಭೆಯ ಸೆಳವಿನ ನಡುವೆ ಮುಧೋಳ ತಾಲ್ಲೂಕಿನ ನಂದಗಾಂವ, ಮಾರಾಪುರ ಸಂಪೂರ್ಣ ನಡುಗಡ್ಡೆಯಾಗಿ ಬದಲಾಗಿವೆ. ಪ್ರವಾಹ ಬಾಧಿತ ಕುಟುಂಬಗಳನ್ನು ಸಮೀಪದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಘಟಪ್ರಭಾ ನದಿಯಲ್ಲಿ 11 ಸೇತುವೆ ಮುಳುಗಡೆಯಾಗಿವೆ. 40ಕ್ಕೂ ಹೆಚ್ಚು ಗ್ರಾಮಗಳು ತಾಲ್ಲೂಕು ಕೇಂದ್ರ ಮುಧೋಳದಿಂದ ನೇರ ಸಂಪರ್ಕ ಕಳೆದುಕೊಂಡಿವೆ. ಮುಧೋಳ ನಗರಕ್ಕೂ ಪ್ರವಾಹದ ನೀರು ನುಗ್ಗಿದೆ. ಎರಡು ಕಾಳಜಿ ಕೇಂದ್ರಗಳಲ್ಲಿ ಬಾಧಿತರಿಗೆ ಆಶ್ರಯ ನೀಡಲಾಗಿದೆ.

ಮಲಪ್ರಭಾ ನದಿ ಪ್ರವಾಹದಿಂದ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಹಾಗೂ ಗದಗ ಜಿಲ್ಲೆ ಕೊಣ್ಣೂರು ಸಂಪರ್ಕಿಸುವ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218ರ ಹಳೆಯ ಸೇತುವೆ ಮುಳುಗಡೆ ಆಗಿದೆ. ಬಾದಾಮಿ ತಾಲ್ಲೂಕಿನ ತಳಕವಾಡ, ಎಸ್.ಕೆ.ಆಲೂರು, ಹಾಗನೂರು ಗ್ರಾಮಗಳಿಗೆ ನೀರು ನುಗ್ಗಿದೆ.

ಊರು ಬಿಡಲು ಒಪ್ಪುತ್ತಿಲ್ಲ..

‘ಎಲ್ಲರೂ ಊರು ಬಿಟ್ಟರೆ ತುಡುಗು (ಕಳ್ಳತನ) ಆಗ್ತಾವ ಅಂತಾ ಕೆಲವರು ಬರೋಕೆ ಒಪ್ಪೊವಲ್ರಿ. ಅವರನ್ನ ಒಪ್ಪಿಸಾಕತ್ತೇವ್ರಿ’ ಎಂದು ಜಮಖಂಡಿ ತಾಲ್ಲೂಕಿನ ಕೆ.ಡಿ.ಜಂಬಗಿ ಗ್ರಾಮ ಪಂಚಾಯ್ತಿ ಸದಸ್ಯ ರವಿ ಐಗಳಿ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ಕೆ.ಡಿ.ಜಂಬಗಿ ಕೃಷ್ಣೆಯ ಪ್ರವಾಹದಿಂದ ನಡುಗಡ್ಡೆಯಾಗಿದೆ. ಪ್ರತಿ ಗಂಟೆಗೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಭಾನುವಾರ ಸಂಜೆಯ ವೇಳೆಗೆ ರಾಜ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಊರಿನ 300ಕ್ಕೂ ಹೆಚ್ಚು ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದರು. ’ಇನ್ನೂ ಅಷ್ಟೇ ಸಂಖ್ಯೆಯ ಜನರು ಊರಲ್ಲಿ ಇದ್ದಾರೆ. ಹೊರಗೆ ಬರಲು ಒಪ್ಪುತ್ತಿಲ್ಲ. ಮನವೊಲಿಸುತ್ತಿದ್ದೇವೆ‘ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು