ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ನಲುಗಿದ ಜನಜೀವನ

Last Updated 2 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಳೆ ಆರ್ಭಟಿಸಿದೆ. ಬಹುತೇಕ ಕಡೆ ರಸ್ತೆ, ಕೃಷಿ ಜಮೀನು ಜಲಾವೃತವಾದರೆ, ಇನ್ನೂ ಕೆಲ ಕಡೆ ಮನೆಗಳಲ್ಲಿ ನೀರು ನುಗ್ಗಿತ್ತು.

ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಯಿತು. ಸಿರವಾರ ತಾಲ್ಲೂಕಿನ ಕವಿತಾಳ ಹೋಬಳಿ ವ್ಯಾಪ್ತಿಯ ಹಾಳಾಪುರದ ಹಳ್ಳಕ್ಕೆ ನಿರ್ಮಿಸಿದ್ದ ಹೊಸ ಸೇತುವೆ ಹಾನಿಗೊಂಡಿದೆ. ಕರಿಯಪ್ಪ ತಾತಾ ಜಾತ್ರೆ ಪ್ರಯುಕ್ತ ನಿರ್ಮಿಸಿದ್ದ ಅಂಗಡಿಗಳಿಗೆ ನೀರು ನುಗ್ಗಿದೆ. ಬಾಗಲವಾಡ ಗ್ರಾಮದಲ್ಲಿ ಗುಡಿಸಲುಗಳಿಗೆ ಮಳೆ ನೀರು ನುಗ್ಗಿ ದವಸ ಧಾನ್ಯ, ಹೊದಿಕೆಗಳು ಹಾನಿಯಾಗಿವೆ.

ಗಂಗಾವತಿ ತಾಲ್ಲೂಕಿನ ಸಾಣಾಪುರ ಭಾಗದಲ್ಲಿ ಭತ್ತ ಮತ್ತು ಬಾಳೆ ತೋಟಕ್ಕೆ ನೀರು ನುಗ್ಗಿದೆ. ಹನುಮನಹಳ್ಳಿ, ಜಂಗ್ಲಿ, ಚಿಕ್ಕರಾಂಪುರ, ಬಸವನದುರ್ಗ, ಹೊಸಳ್ಳಿ ಗ್ರಾಮಗಳ ಭತ್ತದ ನಾಟಿ ಬೆಳೆಗಳು ಜಲಾವೃತವಾಗಿವೆ.

ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ, ವಡಗೇರಾ, ಗುರುಮಠಕಲ್, ಯಾದಗಿರಿ, ನಾರಾಯ
ಣಪುರ, ಕೆಂಭಾವಿ ಮತ್ತು ಯರಗೋಳದಲ್ಲಿ ರಭಸದ ಮಳೆಯಾಗಿದೆ. ಶಹಾಪುರ ತಾಲ್ಲೂಕಿನ ಇಟಗಾ ಎಸ್ ಗ್ರಾಮದ ಪುರಾತನ ಪರಮಾನಂದೇಶ್ವರ ದೇವ

ಸ್ಥಾನದ ಗೋಪುರ ಕುಸಿದು ಬಿದ್ದಿದೆ. ಹುಣಸಗಿ ತಾಲ್ಲೂಕಿನ ರಾಜನಕೊಳ್ಳುರು- ಪರತುನಾಯಕ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗ್ರಾಮಗಳ ವ್ಯಾಪ್ತಿಯಲ್ಲಿನ ಎರಡು ಸಾವಿರ ಎಕರೆ ಪ್ರದೇಶದಲ್ಲಿ ನೀರು ನುಗ್ಗಿದೆ. ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಶ್ರೀಪತಿ ಜಮಾದಾರ ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಆಳಂದ ತಾಲ್ಲೂಕಿನ ಬಿಲಗುಂದಾ-ದೇಗಾಂವ ಗ್ರಾಮದ ಸೇತುವೆ ಕುಸಿದು, ಸಂಚಾರ ಕಡಿತಗೊಂಡಿದೆ. ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದ ಮನೆಗಳಿಗೆ ಹಳ್ಳದ ನೀರು ನುಗ್ಗಿದೆ. ಜಮೀನುಗಳು ಜಲಾವೃತವಾಗಿವೆ.

ಉತ್ತರ ಕನ್ನಡದ ಭಟ್ಕಳ, ವಿಜಯನಗರ, ವಿಜಯಪುರ, ಗದಗ, ಬಾಗಲಕೋಟೆಯಲ್ಲಿ ನೂರಾರು ಎಕರೆ ಬೆಳೆ ಹಾನಿಗೀಡಾಗಿದೆ. ಹತ್ತಾರು ಮನೆಗಳು ನೆಲಕ್ಕುರುಳಿವೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕು ಮಳೆಗೆ ತತ್ತರಿಸಿ ಹೋಗಿದೆ. ಸೋಮವಾರ ತಡರಾತ್ರಿ ಒಂದು ಗಂಟೆಯಿಂದ ನಿರಂತರವಾಗಿ ಸುರಿದ ಮಳೆಯು ಹಿಂದೆಂದೂ ಕಂಡರಿಯ

ದಂಥ ಪ್ರವಾಹ ಸೃಷ್ಟಿಸಿತು. ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದಲ್ಲಿ ಚಿರೆಕಲ್ಲು ಮಿಶ್ರಿತ ಮಣ್ಣು ಕುಸಿದು, ಮನೆ ಸಂಪೂರ್ಣ ನಾಶವಾಗಿದೆ.

ಚೌಥನಿ ನದಿಯು ಉಕ್ಕಿ ಹರಿದು ಪಟ್ಟಣದ ರಸ್ತೆಗಳಲ್ಲಿ ಆಳೆತ್ತರದ ನೀರು ಹರಿಯಿತು. ಮಳೆಯ ಊಹೆಯೂ ಇಲ್ಲದೇ ಮನೆಯಲ್ಲಿ ನಿದ್ರಿಸುತ್ತಿದ್ದಜನ ಕಣ್ಣುಬಿಡುವಷ್ಟರಲ್ಲಿ ನೀರು ಮನೆಯೊಳಗೆ ನುಗ್ಗಿತ್ತು.

ಹಲವು ಕಡೆ ಸ್ಥಳೀಯರೇ ಹಗ್ಗವನ್ನುಬಳಸಿ ಹಲವರನ್ನು ರಕ್ಷಿಸಿದರು. ಅಗ್ನಿಶಾಮಕ ದಳದವರು ಮೂಡಭಟ್ಕಳ,ಚೌಥನಿ ಹಾಗೂ ಪುರವರ್ಗ ಪ್ರದೇಶಗಳಲ್ಲಿ ದೋಣಿ ಮೂಲಕ ಕಾರ್ಯಾಚರಣೆ ನಡೆಸಿ ಹಲವರನ್ನು ಸುರಕ್ಷಿತ ‍ಪ್ರದೇಶಕ್ಕೆ ಕರೆತಂದರು.

ಮೀನುಗಾರರ ನೂರಾರು ದೋಣಿಗಳು ನೀರು ಪಾಲಾದವು. ಪ್ರವಾಹದ ರಭಸಕ್ಕೆ ಅದೆಷ್ಟೋ ಆಕಳು, ಕರು,
ನಾಯಿ, ಕೋಳಿ ಮುಂತಾದ ಸಾಕುಪ್ರಾಣಿಗಳು ಕೊಚ್ಚಿಕೊಂಡು ಹೋದವು.

ಮಣ್ಕುಳಿ, ಪುರವರ್ಗ, ಹೆಬಳೆ, ದಿ ನ್ಯೂ ಇಂಗ್ಲಿಷ್ ಸ್ಕೂಲ್, ಚೌಥನಿ, ಶಿರಾಲಿ ಹಾಗೂ ಮುಂಡಳ್ಳಿ ಭಾಗಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶಿರೂರು ಕರಾವಳಿಯಲ್ಲಿ 20ಕ್ಕೂ ಹೆಚ್ಚು ನಾಡದೋಣಿಗಳು ಕಡಲ ಪಾಲಾಗಿವೆ.

ಮಾರ್ಗ ಬದಲಾವಣೆ

ಮಂಡ್ಯ: ಬೆಂಗಳೂರು–ಮೈಸೂರು ನಡುವಿನ ಸಂಪರ್ಕ ಬಂದ್‌ ಆಗಿದ್ದು, ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ಮದ್ದೂರಿನಲ್ಲೇ ತಡೆಯಲಾಗುತ್ತಿದೆ. ಭಾರತೀನಗರ ಮೂಲಕ ಮಂಡ್ಯ ತಲುಪುತ್ತಿವೆ. ಮೈಸೂರು ಕಡೆಯಿಂದ ಬರುವ ವಾಹನಗಳು ಮಂಡ್ಯದ ಗುತ್ತಲು ರಸ್ತೆ, ಭಾರತೀನಗರ ಮೂಲಕ ಮದ್ದೂರು ತಲುಪುತ್ತಿವೆ.

ವಾಹನ, ರೈಲು ಸಂಚಾರ ಅಸ್ತವ್ಯಸ್ತ

ದಕ್ಷಿಣ ಮತ್ತು ಉತ್ತರ ಭಾರತ ಬೆಸೆಯುವ ಪ್ರಮುಖ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 66, ಭಟ್ಕಳದಲ್ಲಿ ಸಂಪೂರ್ಣ ಮುಳುಗಡೆಯಾಯಿತು. ಮೂಡಭಟ್ಕಳ ಪುರವರ್ಗ ಪ್ರದೇಶದಲ್ಲಿ ಗೋಪಿನಾಥ ನದಿ ಉಕ್ಕಿ ಹರಿಯಿತು.

ವೆಂಕಟಾಪುರದ ಹುಲ್ಲುಕ್ಕಿ ಬಳಿ ರೈಲ್ವೆ ಹಳಿಯ ಸ್ಲೀಪರ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದವು. ಒಂದೆರಡು ಕಡೆ ಹಳಿಗಳ ಮೇಲೆ ಗುಡ್ಡದ ಮಣ್ಣು, ಕಲ್ಲುಗಳೂ ಬಿದ್ದವು. ಹಾಗಾಗಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರವು ಅಸ್ತವ್ಯಸ್ತವಾಯಿತು. ಬೆಂಗಳೂರು– ಕಾರವಾರ, ಪುಣೆ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ಸಮೀಪದ ನಿಲ್ದಾಣಗಳಲ್ಲಿ ತಾಸುಗಟ್ಟಲೆ ನಿಲುಗಡೆ ಮಾಡಲಾಗಿತ್ತು. ಸಂಜೆ 5.30ರ ಸುಮಾರಿಗೆ ದುರಸ್ತಿ ಮಾಡಿ, ರೈಲು ಸಂಚಾರ ಪುನರಾರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT