ಭಾನುವಾರ, ನವೆಂಬರ್ 28, 2021
19 °C
ಗೋಡೆ ಕುಸಿತ, ಕೆಲವೆಡೆ ಕೆರೆಗಳ ಏರಿ ಒಡೆಯುವ ಆತಂಕ

ಹಲವೆಡೆ ಮುಂದುವರಿದ ವರುಣನ ಆರ್ಭಟ: ಕಟಾವಿಗೆ ಬಂದಿದ್ದ ಬೆಳೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ(ಚಿತ್ರದುರ್ಗ): ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಮತ್ತೋಡು ಹೋಬಳಿ ಗುಡ್ಡದನೇರಲಕೆರೆ ಪಂಚಾಯಿತಿಯ ತಾರೀಕೆರೆ ಗ್ರಾಮ ಜಲಾವೃತವಾಗಿದೆ.

ಈ ಗ್ರಾಮಕ್ಕೆ ಹೊಂದಿಕೊಂಡಂತೆ 500 ಎಕರೆ ವಿಸ್ತೀರ್ಣದ ಕೆರೆ ಇದ್ದು, ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಕೆರೆ ಸಂಪರ್ಕಿಸುವ ಜಿ.ಎನ್‌.ಕೆರೆ, ಸಿದ್ದಾಪುರ, ಬಾಲೇನಹಳ್ಳಿ ಹಳ್ಳಗಳು ತುಂಬಿಹರಿದವು. ಕೆರೆಕೋಡಿಯಲ್ಲಿ ನೀರು ಹೆಚ್ಚಾಗಿದ್ದರಿಂದ ಗ್ರಾಮದೊಳಗಿನ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು.

ಜಮೀನುಗಳು ಜಲಾವೃತಗೊಂಡಿದ್ದು, ಕಟಾವಿಗೆ ಬಂದಿದ್ದ ಈರುಳ್ಳಿ, ಮೆಕ್ಕೆಜೋಳ, ಹತ್ತಿ, ಟೊಮೆಟೊ, ಹೂವು ಹಾಗೂ ತರಕಾರಿಗಳಿಗೆ ಹಾನಿಯಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಯ ಗೋಡೆಗಳು ಕುಸಿದಿವೆ. ಹಳೆಯದಾದ ಈ ಕೆರೆಯ ಏರಿ ಮೂರು ಕಡೆ ಶಿಥಿಲಗೊಂಡಿದ್ದು, ಒಡೆಯುವ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ. ಚಿಕ್ಕಜಾಜೂರು, ಭರಮಸಾಗರ, ನಾಯಕನಹಟ್ಟಿಯಲ್ಲಿ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರ ಸೇರಿ ತಾಲ್ಲೂಕಿನ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದ್ದು, ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಹಸುವೊಂದು ಮೃತಪಟ್ಟಿದೆ.

ಧಾರಾಕಾರ ಮಳೆ: ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಒಂದು ತಾಸು ಸುರಿಯಿತು. ಇದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು.

ಹಳೇಬೀಡು ದ್ವಾರಸಮುದ್ರ ಕೆರೆಯಲ್ಲಿ ನೀರು ಸಂಗ್ರಹಣೆ ಒಂದು ಅಡಿ ಏರಿಕೆಯಾಗಿದೆ. ಒಳಹರಿವು ಕೂಡ ಹೆಚ್ಚಿದೆ.‌ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಸಂಜೆ ಜೋರು ಮಳೆಯಾಯಿತು.

ಮುಂದುವರೆದ ಮಳೆ (ಚಿಕ್ಕ ಮಗಳೂರು ವರದಿ): ಕಾಫಿನಾಡಿನಲ್ಲಿ ಭಾನುವಾರವೂ ಮಳೆ ಮುಂದುವರೆದಿದೆ. ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಬೆಳಿಗ್ಗೆ 11.30ರಿಂದ ಸುಮಾರು ಒಂದು ಗಂಟೆ ಕಾಲ ರಭಸವಾದ ಮಳೆ ಸುರಿದಿದೆ. ತಾಲ್ಲೂಕಿನ ಆಲ್ದೂರು, ವಸ್ತಾರೆ, ಅತ್ತಿಗುಂಡಿ, ಗಿರಿಶ್ರೇಣಿ ಭಾಗಗಳಲ್ಲಿ ಮಳೆಯಾಗಿದೆ. ಶೃಂಗೇರಿ ತಾಲ್ಲೂಕಿನಲ್ಲಿಯೂ ಮಳೆ ರಭಸವಾಗಿ ಸುರಿದಿದೆ.

ಕೊಪ್ಪಳ, ರಾಯಚೂರಿನಲ್ಲಿ ಮಳೆ
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ಭಾನುವಾರ ಮಳೆಯಾಯಿತು.

ಕೊಪ್ಪಳ ತಾಲ್ಲೂಕಿನ ಗುಳದಳ್ಳಿ, ಇರಕಲ್ಲಗಡಾ ಭಾಗದಲ್ಲಿ ಭಾನುವಾರ ಸಂಜೆ ಉತ್ತಮ ಮಳೆಯಾಯಿತು. ಗುಳದಳ್ಳಿ ಗ್ರಾಮದಲ್ಲಿ ತೋಟದಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಶನಿವಾರ ಸಂಜೆ ಸುರಿದ ಮಳೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬಸಾಪೂರ, ಹಾಲಾಪೂರ, ಜಂಗಮರಹಳ್ಳಿ ಸೇರಿ ವಿವಿಧೆಡೆ ಭತ್ತದ ಬೆಳೆ ನಾಶವಾಗಿದೆ.  

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಶನಿವಾರ ಸುರಿದ ಮಳೆಗೆ ಹಳ್ಳಕ್ಕೆ ಪ್ರವಾಹ ಬಂದು, ಗ್ರಾಮಸ್ಥ ಬುಡನ್‌ಸಾಬ್ ಅಗಸಿಮುಂದಿನ (65) ಎಂಬುವವರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಡಿಲಿಗೆ ತಂದೆ, ಮಗ ಸೇರಿ ಮೂವರ ಸಾವು
ಹುಬ್ಬಳ್ಳಿ:
ಗದಗ, ಹಾವೇರಿ, ಸಿಂದಗಿ ಸೇರಿದಂತೆ ಕೆಲವೆಡೆ ಭಾನುವಾರ ಗುಡುಗು ಸಹಿತ ಮಳೆಯಾಗಿದೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಸಿಡಿಲಿಗೆ ತಂದೆ, ಮಗ ಸೇರಿದಂತೆ ಮೂವರು ಕುರಿಗಾಹಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರಲಹಳ್ಳಿ ಗ್ರಾಮದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೊನ್ನದ ಮಲ್ಲೇಶ್ (33) ಅವರ ಮಗ ಸೊನ್ನದ ಮೈಲಾರಿ(10) ಮತ್ತು ಉಪ್ಪಾರ ಹನುಮಂತಪ್ಪ(38) ಮೃತರು.

8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌
ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.25 ಮತ್ತು 26ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಎಂಟು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಎರಡೂ ದಿನ ಯೆಲ್ಲೊ ಅಲರ್ಟ್‌ ನೀಡಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ಹಿಂಗಾರು ಪ್ರವೇಶಿಸುವ ಲಕ್ಷಣಗಳು ಕಂಡುಬಂದಿವೆ. ತಮಿಳುನಾಡಿನ ಕರಾವಳಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇದೇ 26 ರಿಂದ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಮಳೆ–ಎಲ್ಲಿ, ಎಷ್ಟು?: ಚಿಕ್ಕಬಳ್ಳಾಪುರ ಜಿಲ್ಲೆಯ ತೊಂಡೆ ಬಾವಿಯಲ್ಲಿ ಭಾನುವಾರ 8 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಅರಕಲಗೂಡು 7, ಮಾಗಡಿ, ಗೌರಿಬಿದನೂರು, ಹರಪನಹಳ್ಳಿ, ಕೊಳ್ಳೇಗಾಲ, ಕುಣಿಗಲ್ 5, ಹೊಸಕೋಟೆ, ಮಧುಗಿರಿ 4, ಸುಳ್ಯ, ಪಾವಗಡ, ಶಿರಾ, ಶ್ರೀರಂಗಪಟ್ಟಣ 3, ದಾವಣಗೆರೆ, ಕಾರವಾರ, ಗಂಗಾವತಿ, ತಿಪಟೂರು, ಚಿಂತಾಮಣಿ 2, ಹಾವೇರಿ, ನೆಲಮಂಗಲ, ಬೇಲೂರು ಹಾಗೂ ಮದ್ದೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕಲಬುರಗಿಯಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಬೀದರ್‌ನಲ್ಲಿ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು