ಗೋಹತ್ಯೆ: ಸದ್ಯಕ್ಕೆ ಕ್ರಮ ಇಲ್ಲ
ಬೆಂಗಳೂರು: ಗೋಹತ್ಯೆ ನಿಷೇಧ ಸಂಬಂಧ ರೂಪಿಸಲಾಗಿರುವ ನಿಯಮಾವಳಿ ಜಾರಿಗೆ ಬರುವ ತನಕ ಸುಗ್ರೀವಾಜ್ಞೆಯ ಯಾವುದೇ ಸೆಕ್ಷನ್‌ಗಳ ಅಡಿ ಕ್ರಮ ಜರುಗಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ.
‘ಸುಗ್ರೀವಾಜ್ಞೆಯಲ್ಲಿನ ಸೆಕ್ಷನ್ 5ರ ಪ್ರಕಾರ ದನಗಳ ಸಾಗಣೆಗೆ ನಿರ್ಬಂಧ ಇದೆ. ಸೆಕ್ಷನ್ 13ರ ಪ್ರಕಾರ ಕೃಷಿಗೆ ಯೋಗ್ಯವಾದ ದನಗಳನ್ನು ಸಾಗಣೆ ಮಾಡುವ ರೈತರನ್ನು ಬಂಧಿಸಲೂ ಅವಕಾಶ ಇದೆ. ಆದರೆ, ಸುಗ್ರೀವಾಜ್ಞೆ ಅಡಿಯಲ್ಲಿ ರೂಪಿಸಲಾಗಿರುವ ನಿಯಮಾವಳಿಗಳು ಇನ್ನೂ ಜಾರಿಗೆ ಬಂದಿಲ್ಲ. ಹೀಗಾಗಿ, ಸುಗ್ರೀವಾಜ್ಞೆ ಅನುಷ್ಠಾನದ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
‘ಕರಡು ನಿಯಮಾವಳಿಗಳನ್ನು ಜ.16ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಅವುಗಳು ಅಧಿಕೃತವಾಗಿ ಜಾರಿಗೆ ಬರುವ ತನಕ ಸುಗ್ರೀವಾಜ್ಞೆ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಸ್ಪಷ್ಟಪಡಿಸಿದರು.
‘ಅಡ್ವೊಕೇಟ್ ಜನರಲ್ ಸಲ್ಲಿಸಿರುವ ಭರವಸೆಯ ಕಾರಣದಿಂದ ಮಧ್ಯಂತರ ಆದೇಶ ನೀಡಬೇಕು ಎಂಬ ಮನವಿಯನ್ನು ಪರಿಗಣಿಸುವುದಿಲ್ಲ. ಅದರ ಬದಲು ಸುಗ್ರೀವಾಜ್ಞೆಯನ್ನೇ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಮುಂದುವರಿಸಲಾಗುವುದು. ಈ ಸಂಬಂಧ ಸರ್ಕಾರ ಫೆಬ್ರುವರಿ 20ರೊಳಗೆ ಆಕ್ಷೇಪಣೆ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.