ಬುಧವಾರ, ಅಕ್ಟೋಬರ್ 20, 2021
29 °C
ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ ಪ್ರಕರಣ

ಎಸ್‌ಐಟಿ ವರದಿ ಸಲ್ಲಿಸುವ ಕೋರಿಕೆ ಪರಿಗಣನೆ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಷರತ್ತುಬದ್ಧ ಅನುಮತಿ ನೀಡಬೇಕು ಎಂಬ ಕೋರಿಕೆ ಪರಿಗಣಿಸಲಾಗುವುದು ಹೈಕೋರ್ಟ್ ಶುಕ್ರವಾರ ಹೇಳಿದೆ.

‘ವಿಶೇಷ ತನಿಖಾ ತಂಡ(ಎಸ್ಐಟಿ) ಈಗಾಗಲೇ ತನಿಖೆ ಪೂರ್ಣಗೊಳಿಸಿದ್ದು, ಸಂಬಂಧಿಸಿದ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅನುಮತಿ ನೀಡಬೇಕು’ ಎಂದು ಅಡ್ವೋಕೇಟ್ ಜನರಲ್(ಎ.ಜಿ) ಪ್ರಭುಲಿಂಗ ಕೆ. ನಾವಡಗಿ ಕೋರಿದರು. ನ್ಯಾಯಾಲಯದ ಅನುಮತಿ ಇಲ್ಲದೆ ವರದಿ ಸಲ್ಲಿಸಬಾರದು ಎಂದು ಈ ಹಿಂದಿನ ಆದೇಶದಲ್ಲಿ ಪೀಠ ತಿಳಿಸಿತ್ತು.

ಸಂತ್ರಸ್ತೆ ಪರ ಹಾಜರಾಗಿದ್ದ ವಕೀಲೆ ಇಂದಿರಾ ಜೈಸಿಂಗ್ ಅವರು ಎ.ಜಿ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು. ‘ಎಸ್‌ಐಟಿ ರಚನೆಯ ಸಿಂಧುತ್ವವನ್ನೇ ಸಂತ್ರಸ್ತೆ ಪ್ರಶ್ನಿಸಿದ್ದಾರೆ. ರಮೇಶ ಜಾರಕಿಹೊಳಿ ಮನವಿ ಮತ್ತು ಗೃಹ ಸಚಿವರ ಪತ್ರ ಆಧರಿಸಿ ಬೆಂಗಳೂರು ಪೊಲೀಸ್ ಕಮಿಷನರ್ ಅವರು ಎಸ್‌ಐಟಿ ರಚಿಸಿ ಆದೇಶಿಸಿದ್ದಾರೆ. ಸಿಆರ್‌ಪಿಸಿಯಲ್ಲಿ ಇದಕ್ಕೆ ಅವಕಾಶ ಇಲ್ಲ’ ಎಂದು ವಾದಿಸಿದರು.

ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ, ‘ಎ.ಜಿ ಸಲ್ಲಿಸಿರುವ ಕೋರಿಕೆಯನ್ನು ಪರಿಗಣಿಸಲಾಗುವುದು’ ಎಂದು ತಿಳಿಸಿತು. ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿತು.

2021ರ ಮಾರ್ಚ್ 10ರಂದು ಗೃಹ ಸಚಿವರು ಬರೆದಿದ್ದ ಪತ್ರ ಆಧರಿಸಿ 11ರಂದು ಎಸ್‌ಐಟಿ ರಚಿಸಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದರು. ಈ ಪ್ರಕರಣದ ತನಿಖೆಯನ್ನು ಬೇರೆ ಸಂಸ್ಥೆಯಿಂದ ನಡೆಸಬೇಕು. ಎಸ್‌ಐಟಿ ನ್ಯಾಯಸಮ್ಮತ ತನಿಖೆ ನಡೆಸಿಲ್ಲ ಎಂಬುದು ಸಂತ್ರಸ್ತೆಯ ಆಕ್ಷೇಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.