ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧಗಳ ನಡುವೆ ವಿಜಯೇಂದ್ರ ಪೂಜೆ: ಡಿ.ಸಿ ವರದಿ ಮಂಡಿಸಲು ಹೈಕೋರ್ಟ್ ಸೂಚನೆ

Last Updated 11 ಜೂನ್ 2021, 1:38 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡು ದೇವಸ್ಥಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದ ಪ್ರಕರಣದ ಕುರಿತು ಮೈಸೂರು ಜಿಲ್ಲಾಧಿಕಾರಿ ನೀಡಿರುವ ವರದಿ ಮಂಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರ ಸಲ್ಲಿಸಿದ ಮೆಮೊ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆ ಆಗಿರುವುದನ್ನು ಗಮನಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ವರದಿ ಪರಿಶೀಲಿಸಿದ ಬಳಿಕ ಸೂಕ್ತ ಆದೇಶ ಹೊರಡಿಸಲಾಗುವುದು’ ಎಂದು ತಿಳಿಸಿತು.

‘ದೇವಸ್ಥಾನಕ್ಕೆ ಭೇಟಿ ನೀಡಿದ್ದರ ಬಗ್ಗೆ ವಿಜಯೇಂದ್ರ ಅವರಿಂದ ವಿವರಣೆ ಕೇಳಿ ಮೈಸೂರು ಜಿಲ್ಲಾಧಿಕಾರಿ ಮೇ 27ರಂದು ನೋಟಿಸ್ ನೀಡಿದ್ದರು. ಮೇ 29ರಂದು ವಿಜಯೇಂದ್ರ ಉತ್ತರಿಸಿದ್ದಾರೆ. ಕೋವಿಡ್‌ ಕೆಲಸದ ಮೇಲೆ ಅವರು ನಂಜನಗೂಡಿಗೆ ತೆರಳಿದ್ದರು’ ಎಂದು ಅಡ್ವೊಕೇಟ್ ಜನರಲ್ ತಿಳಿಸಿದರು.

‘ಬೇರೆ ಯಾವುದೇ ನಾಗರಿಕರಿಗೆ ದೇವಾಲಯಗಳಿಗೆ ಭೇಟಿ ನೀಡಲು ಅವಕಾಶ ಇಲ್ಲದಿರುವಾಗ ಇಂತಹ ಘಟನೆಗಳು ತಪ್ಪು ಸಂದೇಶ ರವಾನಿಸುತ್ತವೆ’ ಎಂದು ಪೀಠ ಮೌಖಿಕವಾಗಿ ಹೇಳಿತು.

ಏನಿದು ಘಟನೆ?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪತ್ನಿ ಸಮೇತರಾಗಿ ಮೇ.19ರ ಮಂಗಳವಾರ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
ಅಂದು ಬೆಳಿಗ್ಗೆ 8 ಗಂಟೆ ಹೊತ್ತಿಗೆ ದೇಗುಲಕ್ಕೆ ಬಂದಿದ್ದ ವಿಜಯೇಂದ್ರ ದಂಪತಿ, ಅರ್ಧ ಗಂಟೆ ಶ್ರೀಕಂಠೇಶ್ವರನ ಗರ್ಭಗುಡಿಯಲ್ಲಿದ್ದು, ವಿವಿಧ ಪೂಜೆ ಸಲ್ಲಿಸಿದ್ದರು ಎಂದು ಅರ್ಚಕರು ತಿಳಿಸಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋವಿಡ್‌ ಪೀಡಿತರಾಗಿದ್ದರು. ವಿಜಯೇಂದ್ರ ಸಹ ಸೋಂಕಿತರಾಗಿದ್ದರು. ತಂದೆ–ಮಗ ಇಬ್ಬರೂ ಗುಣಮುಖರಾಗಿದ್ದರಿಂದ ಶ್ರೀಕಂಠೇಶ್ವರನಿಗೆ ಹರಕೆ ತೀರಿಸಿದರು ಎಂದು ದೇಗುಲದ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದವು.

ಸ್ಥಳೀಯರ ಆಕ್ರೋಶ

ಸೋಂಕು ಮತ್ತೆ ತೀವ್ರವಾಗಿ ಹರಡಲಾರಂಭಿಸುತ್ತಿದ್ದಂತೆ ಶ್ರೀಕಂಠೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ದೈನಂದಿನ ಪೂಜೆ ಸಲ್ಲಿಸಲು ಅರ್ಚಕ ಸಮೂಹಕ್ಕಷ್ಟೇ ಅವಕಾಶವಿತ್ತು. ಆದರೆ, ಭಕ್ತರಿಗೆ ನಿರ್ಬಂಧವಿದ್ದ ಅವಧಿಯಲ್ಲೇ ವಿಜಯೇಂದ್ರ ದಂಪತಿ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ದೇಗುಲದ ಆಡಳಿತ ಮಂಡಳಿ ನಿರ್ಧಾರವನ್ನು ಟೀಕಿಸಿದ್ದರು. ಸಾಮಾಜಿಕ ಜಾಲತಾಣದಲ್ಲೂ ಟೀಕೆ ವ್ಯಕ್ತವಾಗಿದೆ.

ವಿಜಯೇಂದ್ರ ದಂಪತಿ ಪೂಜೆಗೆ ಯಡಿಯೂರಪ್ಪ ತಂಗಿಯ ಪುತ್ರ, ಮೈಮುಲ್‌ ನಾಮನಿರ್ದೇಶಿತ ಸದಸ್ಯ ಎಸ್‌.ಸಿ.ಅಶೋಕ್‌, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಎನ್‌.ಆರ್‌.ಕೃಷ್ಣಪ್ಪಗೌಡ ಸಾಥ್‌ ನೀಡಿದ್ದರು . ಈ ಸಂದರ್ಭದಲ್ಲಿ ಸ್ಥಳೀಯರು ತೆಗೆದ ಫೋಟೊಗಳನ್ನು ಡಿಲಿಟ್‌ ಮಾಡಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT