ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಪೀಠದ ಅಂಗಳಕ್ಕೆ ಹಿಜಾಬ್ ವಿವಾದ: ಇಂದು ಮಧ್ಯಾಹ್ನವೇ ವಿಚಾರಣೆ ಆರಂಭ

ಮೂವರು ನ್ಯಾಯಮೂರ್ತಿಗಳ ಪೀಠ
Last Updated 9 ಫೆಬ್ರುವರಿ 2022, 20:40 IST
ಅಕ್ಷರ ಗಾತ್ರ

ಬೆಂಗಳೂರು: ಹಿಜಾಬ್‌ಗೆ (ಶಿರವಸ್ತ್ರ) ಸಂಬಂಧಿಸಿದಂತೆ ದಾಖಲಿಸಲಾಗಿರುವ ರಿಟ್‌ ಅರ್ಜಿಗಳನ್ನು ಮುಖ್ಯ ನ್ಯಾಯ ಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದಲ್ಲಿ, ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ಮಹಿಳಾ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ಅವರನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೂರ್ಣಪೀಠ ಗುರುವಾರ ಮಧ್ಯಾಹ್ನ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಈ ಕುರಿತಾದ ಏಳು ರಿಟ್‌ ಹಾಗೂ ಎರಡು ಮಧ್ಯಂತರ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರದಿಂದ ವಿಚಾರಣೆಗೆ ಕೈಗೆತ್ತಿ ಕೊಂಡಿತ್ತು. ಬುಧವಾರ ಮಧ್ಯಾಹ್ನ ಎರಡನೇ ದಿನದ ವಿಚಾರಣೆಗೆ ನಿಗದಿಪಡಿಸಲಾಗಿತ್ತು.ನಿಗದಿಯಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌, ‘ಈ ಪ್ರಕರಣವು ಸಾಂವಿಧಾನಿಕವಾದ ಸಾಕಷ್ಟು ಸೂಕ್ಷ್ಮ ಅಂಶಗಳನ್ನು ಒಳ ಗೊಂಡಿರುವ ಕಾರಣ ಇವುಗಳ ವಿಚಾರಣೆ ವಿಸ್ತೃತ ನ್ಯಾಯಪೀಠದಲ್ಲೇ ನಡೆಯುವುದು ಒಳಿತು. ಈ ಬಗ್ಗೆ ತಮ್ಮ ಅಭಿಪ್ರಾಯವೇನು‘ ಎಂದು ಅರ್ಜಿದಾರರ ಪರ ವಕೀಲರು ಮತ್ತು ಸರ್ಕಾರದ ಪರ ಅಡ್ವೊಕೇಟ್ ಜನರಲ್ ಅವರನ್ನು ಕೇಳಿದರು.

‘ಇದರಲ್ಲಿ ಧಾರ್ಮಿಕ ಮತ್ತು ವೈಯಕ್ತಿಕ ಕಾನೂನುಗಳ ಸಂಗತಿಗಳೂ ಅಡಕವಾಗಿವೆ. ಹೀಗಾಗಿ, ಇಂಥ ವಿಷಯಗಳಲ್ಲಿ ಜಿಜ್ಞಾಸೆ ಉದ್ಭವಿಸಿದಾಗ ಸಾಮಾನ್ಯವಾಗಿ ವಿಸ್ತೃತ ಪೀಠಗಳನ್ನು ರಚಿಸಲಾಗಿದೆ. ಇವುಗಳ ಫಲಿತಾಂಶ ಹೆಚ್ಚು ಸ್ವೀಕಾರಾರ್ಹವಾಗಿರುತ್ತವೆ. ಆದಾಗ್ಯೂ, ವಿಸ್ತೃತ ಪೀಠವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದೇನೂ ಭಾವಿಸಬೇಡಿ. ಈ ವಿಸ್ತೃತ ಪೀಠದಲ್ಲಿ ನಾನೂ ಭಾಗವಾಗಿ ಇರುವುದಾದರೆ ನಿಮ್ಮ ಅಭಿಪ್ರಾಯ ವೇನು’ ಎಂದು ಪ್ರಶ್ನಿಸಿತು. ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಸಜನ್ ಪೂವಯ್ಯ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಂಜಯ ಹೆಗ್ಡೆ, ‘ವಿಸ್ತೃತ ಪೀಠದ ನಿರ್ಧಾರ ನ್ಯಾಯಾಲಯದ ಕೈಯಲ್ಲಿದೆ’ ಎಂದು ಹೇಳಿದರಾದರೂ ಅಂತಿಮವಾಗಿ ವಿಸ್ತೃತ ಪೀಠಕ್ಕೆ ಒಪ್ಪಿಸುವ ನ್ಯಾಯಪೀಠದ ನಿರ್ಧಾರಕ್ಕೆ ತಲೆಬಾಗಿದರು.ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ‘ತಾವೇ ವಿಚಾರಣೆ ನಡೆಸಿ. ಈ ನ್ಯಾಯಪೀಠದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ‘ ಎಂದರು. ಕಡೆಗೆ ಸಮ್ಮತಿ ಸೂಚಿಸಿದರು.

ಮಧ್ಯಂತರ ಆದೇಶಕ್ಕೆ ನಕಾರ
‘ಹಿಜಾಬ್ ವಿಷಯವಾಗಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತಿದ್ದಾರೆ. ಶಾಲೆ, ಕಾಲೇಜುಗಳ ಪಾಠ–ಪ್ರವಚನ ಸ್ಥಗಿತಗೊಂಡಿದೆ. ಇನ್ನೆರಡು ತಿಂಗಳಿಗೆ ಶೈಕ್ಷಣಿಕ ವರ್ಷ ಮುಕ್ತಾಯವಾಗಲಿದೆ. ಈ ಹಂತದಲ್ಲಿ ಅವರು ತೊಂದರೆಗೆ ಒಳಗಾದರೆ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ಇದೇ ನ್ಯಾಯಪೀಠ ಮಧ್ಯಂತರ ಪರಿಹಾರ ನೀಡಿ ಆದೇಶಿಸಬೇಕು‘ ಎಂದು ಅರ್ಜಿದಾರರ ಪರ ವಕೀಲ ಮೊಹಮದ್ ತಾಹಿರ್ ಕೋರಿದರು. ಈ ಮನವಿಗೆ ಯಾವುದೇ ಆದೇಶ ನೀಡಲು ನಿರಾಕರಿಸಿದ ನ್ಯಾಯಪೀಠ, ‘ಈ ಅರ್ಜಿಗಳು ಸಾಂವಿಧಾನಿಕ ವಿಸ್ತೃತ ಪೀಠದಲ್ಲೇ ವಿಚಾರಣೆಗೆ ನಡೆಯುವುದು ಒಳಿತು. ಹೀಗಾಗಿ ಈ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳು ತಮ್ಮ ವಿವೇಚನೆಯ ಅನುಸಾರ ಕ್ರಮ ಕೈಗೊಳ್ಳಲು ಕೋರುತ್ತಿದ್ದೇನೆ ಮತ್ತು ಇವತ್ತೇ ಈ ಅರ್ಜಿಗಳ ಎಲ್ಲ ದಸ್ತಾವೇಜನ್ನು ಮುಖ್ಯ ನ್ಯಾಯಮೂರ್ತಿಗಳ ಟೇಬಲ್ ಮುಂದೆ ಪ್ರಸ್ತುತಪಡಿಸಲು ನ್ಯಾಯಾಂಗ ವಿಭಾಗದ ರಿಜಿಸ್ಟ್ರಾರ್ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿ ವಿಚಾರಣೆಯನ್ನು ಬರ್ಖಾಸ್ತುಗೊಳಿಸಿತು.

ಕಲ್ಲು ತೂರಾಟ ಪ್ರಕರಣ: 24 ಜನರ ಬಂಧನ
ಬೆಂಗಳೂರು: ಹಿಜಾಬ್–ಕೇಸರಿ ಶಾಲು ಪರ–ವಿರೋಧದ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯ ರಬಕವಿ– ಬನಹಟ್ಟಿಯಲ್ಲಿ 15, ಶಿವಮೊಗ್ಗದಲ್ಲಿ 9 ಮಂದಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬನಹಟ್ಟಿಯಲ್ಲಿ ಪ್ರೌಢಶಾಲೆಯ ಅತಿಥಿ ಶಿಕ್ಷಕ ಮಂಜುನಾಥ ನಾಯಕ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರತ್ಯೇಕ ಪ್ರಕರಣದಲ್ಲಿ ಐವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT