ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್: ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ

ತಮಿಳುನಾಡಿನ ಮುಸ್ಲಿಂ ಮುಖಂಡರೊಬ್ಬರ ವಿರುದ್ಧ ಎಫ್‌ಐಆರ್
Last Updated 19 ಮಾರ್ಚ್ 2022, 22:00 IST
ಅಕ್ಷರ ಗಾತ್ರ

ಬೆಂಗಳೂರು: ಹಿಜಾಬ್ ವಿಚಾರವಾಗಿ ತೀರ್ಪು ನೀಡಿರುವ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ಮುಸ್ಲಿಂ ಮುಖಂಡರೊಬ್ಬರ ವಿರುದ್ಧ ಇಲ್ಲಿನ ವಿಧಾನಸೌಧ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ.

‘ವಕೀಲರಾದ ಸುಧಾ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

'ತಮಿಳುನಾಡಿನ ‘ತೌಹೀದ್ ಜಮಾತ್ (ಟಿ.ಎನ್‌.ಟಿ.ಜೆ)’ ಎಂಬ ಮುಸ್ಲಿಂ ಸಂಘಟನೆ ಮುಖಂಡ ಆರ್. ರಹಮತ್‌–ಉಲ್ಲಾ ಮಾರ್ಚ್ 17ರಂದು ಮಧುರೈನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆಯೊಡ್ಡಿ ಭಾಷಣ ಮಾಡಿದ್ದರು. ಅದೇ ವಿಡಿಯೊವನ್ನು ಪ್ರಕರಣದ ಪುರಾವೆಯನ್ನಾಗಿ ಪರಿಗಣಿಸಲಾಗಿದೆ’ ಎಂದೂ ತಿಳಿಸಿದರು.

‘ತಮಿಳು ಭಾಷೆಯಲ್ಲಿ ಮಾತನಾಡಿದ್ದ ರಹಮತ್‌–ಉಲ್ಲಾ, ‘ಹಿಜಾಬ್ ತೀರ್ಪಿನ ಕಾರಣಕ್ಕಾಗಿ ನ್ಯಾಯಮೂರ್ತಿಗಳ ಕೊಲೆಯಾದರೆ, ಅವರ ಸಾವಿಗೆ ಅವರೇ ಕಾರಣರಾಗುತ್ತಾರೆ. ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಯಾರೇ ಬಂದರೂ ನಾವು ಹೆದರುವುದಿಲ್ಲ. ಅಲ್ಲಾಹುಗೆ ಮಾತ್ರ ಹೆದರುವುದು. ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ತಾಳ್ಮೆ ಕಳೆದುಕೊಂಡರೆ ನೀವು ಉಳಿಯುವುದಿಲ್ಲ’ ಎಂದಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.

ತಮಿಳುನಾಡು ಪೊಲೀಸರಿಗೆ ಮಾಹಿತಿ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು, ತಮಿಳುನಾಡು ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಮಧುರೈನಲ್ಲಿ ನಡೆದಿರುವ ಸಮಾವೇಶದ ಭಾಷಣದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.ಈ ಬಗ್ಗೆ ಹೈಕೋರ್ಟ್‌ನ ಅಧಿಕಾರಿಗಳು ಸಹ ಗಮನಕ್ಕೆ ತಂದಿದ್ದಾರೆ. ಮುಂದಿನ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT