ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಜಾಬ್’ ಪ್ರಸ್ತಾಪ: ಸಬ್‌ ಕಾ ವಿನಾಶ್‌: ಪರಿಷತ್‌ನಲ್ಲಿ ಸಲೀಂ ಅಹ್ಮದ್ ಕಿಡಿ

ಕಾಂಗ್ರೆಸ್‌– ಬಿಜೆಪಿ ನಡುವೆ ವಾಗ್ವಾದ
Last Updated 17 ಮಾರ್ಚ್ 2022, 21:57 IST
ಅಕ್ಷರ ಗಾತ್ರ

ಬೆಂಗಳೂರು: ಹಿಜಾಬ್ ಕುರಿತು ಹೈಕೋರ್ಟ್ ನೀಡಿದ ತೀರ್ಪು ವಿಧಾನ ಪರಿಷತ್‌ನಲ್ಲಿ ಗುರುವಾರ ಪ್ರತಿಧ್ವನಿಸಿತು.

ಬಜೆಟ್‌ ಮೇಲಿನ ಚರ್ಚೆ ನಡುವೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ಸಿನ ಸಲೀಂ ಅಹ್ಮದ್‌, ‘ತೀರ್ಪು ಏಕೆ ಈ ರೀತಿ ಬಂತು ಎಂಬ ಬಗ್ಗೆ ಚರ್ಚೆ ನಡೆಯಬೇಕು’ ಎಂದು ಆಗ್ರಹಿಸಿದರು. ‘ಸರ್ಕಾರದ ಆದೇಶವನ್ನೇ ಕೋರ್ಟ್ ಎತ್ತಿ ಹಿಡಿದಿದೆ’ ಎಂದರು.

ಆಗ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ತೀರ್ಪು ಒಪ್ಪುತ್ತೀರಾ, ವಿರೋಧಿಸುತ್ತೀರಾ? ಎಂದು ಪ್ರಶ್ನಿಸಿದರು. ವಿರೋಧ ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಇದಕ್ಕೆ, ‘ನಮ್ಮ ನಿಲುವು ಸುಪ್ರೀಂ ಕೋರ್ಟ್‌ಗೆ ಹೇಳುತ್ತೇವೆ’ ಎಂದರು.

ಸಲೀಂ ಅವರು, ‘ಕೋರ್ಟ್ ತೀರ್ಪು ಒಪ್ಪುತ್ತೇವೆ.‌ ಈ ಘಟನೆ ಯಾಕಾಯಿತು? ಕೇಸರಿ ಶಾಲು ಪದ್ದತಿ ಮೊದಲು ಇತ್ತೇ? ವಿದ್ಯಾರ್ಥಿಗಳು ಪರಸ್ಪರ ಮುಖ ಕೊಟ್ಟು ಮಾತನಾಡದ ಸ್ಥಿತಿ ಇದೆ. ಇದಕ್ಕೆ ಸರ್ಕಾರವೇ ಕಾರಣ’ ಎಂದು ಆರೋಪಿಸಿದರು.

ಆಗ ಕೋಟ ಶ್ರೀನಿವಾಸಪೂಜಾರಿ, ‘ನೆಮ್ಮದಿಯಿಂದ ಇದ್ದ ಮಕ್ಕಳು ಇವರ ಚಿತಾವಣೆಯಿಂದ ಹಿಜಾಬ್ ಧರಿಸಿ ಹೋದರು’ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು. ಈ ವೇಳೆ ಕಾಂಗ್ರೆಸ್ – ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

‘ಕೋಮು ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಕಾನೂನು ಸುವ್ಯವಸ್ಥೆ ರಕ್ಷಿಸಲು ಸರ್ಕಾರ ವಿಫಲವಾಗಿದೆ, ಮಕ್ಕಳಲ್ಲಿ ಬೇಧ ಭಾವ ಮೂಡಿದೆ. ವಿದ್ಯಾರ್ಥಿಗಳಲ್ಲಿ ಕಂದಕ ತರುವ ಹಿಂದೂ, ಮುಸ್ಲಿಂ ಯಾವುದೇ ಸಂಘಟನೆ ಇರಲಿ ನಿಷೇಧಿಸಿ’ ಎಂದು ಆಗ್ರಹಿಸಿದರು.

‘ಶಿವಮೊಗ್ಗದ ಹರ್ಷ ಕೊಲೆಗೆ ₹ 25 ಲಕ್ಷ ಕೊಟ್ಟರು. ಗದಗದಲ್ಲಿ ಮುಸ್ಲಿಂ ವ್ಯಕ್ತಿಯ ಕೊಲೆಯಾದರೆ ಪರಿಹಾರ ಕೊಟ್ಟಿಲ್ಲ. ಏಕೆ ಈ ತಾರತಮ್ಯ.ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಇದು ಸಬ್‌ ಕಾ ವಿನಾಶ್‌’ ಎಂದು ಕಿಡಿಕಾರಿದರು.

ಈ ವೇಳೆ ಸಚಿವ ಶಂಕರಪಾಟೀಲ ಮುನೇನಕೋಪ್ಪ, ‘ಮಹದಾಯಿ ಪರವಾಗಿ ಗೋವಾದಲ್ಲಿ ಕಾಂಗ್ರೆಸ್ ನಿಂತಿದೆ. ಇಲ್ಲಿ ಯಾಕೆ ನೀವು ಹೋರಾಟ ‌ಮಾಡುತ್ತಿಲ್ಲ. ಅದರ ಬಗ್ಗೆ ಕಾಂಗ್ರೆಸ್ ನಿಲುವೇನು’ ಎಂದು ಅವರು ಪ್ರಶ್ನಿಸಿದರು.

‘ರಾಜ್ಯದ ಪರ ನಮ್ಮ ಕಾಂಗ್ರೆಸ್ ಇದೆ. ಗೋವಾ ಪರವಾಗಿ ಅಲ್ಲಿಯ ಕಾಂಗ್ರೆಸ್ ಇದೆ. ನಮ್ಮ ಯೋಜನೆ ನಮಗೆ ಜಾರಿಯಾಗಲೇ ಬೇಕು. ಇದರಲ್ಲಿ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಹಕ್ಕಿನ ನೀರು ಸಿಗಲೇ ಬೇಕು’ ಎಂದು ಸಲೀಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT