ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮವಸ್ತ್ರದಲ್ಲಿ ಧಾರ್ಮಿಕ ಅಂಶ ಸಲ್ಲ: ಸರ್ಕಾರದ ಪುನುರುಚ್ಚಾರ

ಹಿಜಾಬ್‌ ಅಗತ್ಯ ಧಾರ್ಮಿಕ ಆಚರಣೆ ಅಲ್ಲ: ಸರ್ಕಾರದ ಪುನುರುಚ್ಚಾರ
Last Updated 21 ಫೆಬ್ರುವರಿ 2022, 16:05 IST
ಅಕ್ಷರ ಗಾತ್ರ

ಬೆಂಗಳೂರು: 'ಸಮವಸ್ತ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ಆಯಾ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ಇದೆ. ಆದರೆ,ಧಾರ್ಮಿಕ ಉಡುಗೆಯನ್ನು ಬಿಂಬಿಸುವ ಅಂಶವು ಸಮವಸ್ತ್ರದಲ್ಲಿ ಇರಬಾರದೆಂಬುದೇ ಸರ್ಕಾರದ ನಿಲುವು’ ಎಂದು ಹೇಳುವ ಮೂಲಕ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ನಾವದಗಿ, ‘ಇಸ್ಲಾಂನಲ್ಲಿ ಹಿಜಾಬ್‌ ಅಗತ್ಯ ಧಾರ್ಮಿಕ ಆಚರಣೆ ಅಲ್ಲ’ ಎಂಬುದನ್ನು ಪುನರುಚ್ಚರಿಸಿದ್ದಾರೆ.

ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ-ಕಾಲೇಜುಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎಲ್ಲ ರಿಟ್ ಅರ್ಜಿಗಳ ವಿಚಾರಣೆಯನ್ನು, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಸೋಮವಾರ ಮುಂದುವರಿಸಿತು.

‘ಹಿಜಾಬ್ ಧರಿಸುವುದು ಇಸ್ಲಾಮಿನ ಅಗತ್ಯ ಧಾರ್ಮಿಕ ಆಚರಣೆ ವ್ಯಾಪ್ತಿಗೆ ಒಳಪಡುವುದಿಲ್ಲ, ಹಿಜಾಬ್ ಧರಿಸುವ ಹಕ್ಕು ಸಂವಿಧಾನದ 19 (1) (ಎ) ಅಡಿಯಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ, ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ಸಂವಿಧಾನದ ರಕ್ಷಣೆಯಿಲ್ಲ, ಸಮವಸ್ತ್ರವನ್ನು ಸೂಚಿಸಲು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ಅಧಿಕಾರ ನೀಡಿರುವ ಇದೇ 5ರ ಸರ್ಕಾರಿ ಆದೇಶವು ಶಿಕ್ಷಣ ಕಾಯ್ದೆಗೆ ಹೇಗೆ ಅನುಗುಣವಾಗಿದೆ’ ಎಂಬಿತ್ಯಾದಿ ಅಂಶಗಳಿಗೆ ಸಂಬಂಧಿಸಿದಂತೆ ಪ್ರಭುಲಿಂಗ ಕೆ.ನಾವದಗಿ ತಮ್ಮ ವಾದ ಸರಣಿಯನ್ನು ಮುಂದುವರಿಸಿದರು.

‘ಅರ್ಜಿದಾರರು ಕುರಾನ್‌ ಅನ್ನು ಉಲ್ಲೇಖಿಸುತ್ತಾಹಿಜಾಬ್‌ ಅಗತ್ಯ ಧಾರ್ಮಿಕ ಆಚರಣೆ ಎಂದು ಹೇಳಿದ್ದಾರೆ. ಆದರೆ, ಅದನ್ನು ಸಾಬೀತುಪಡಿಸುವ ದಿಸೆಯಲ್ಲಿ ಅವರು ನ್ಯಾಯಾಲಯದ ಮುಂದೆಒಂದೇ ಒಂದು ಸೂಕ್ತ ದಾಖಲೆಯನ್ನೂ ಪ್ರಸ್ತುಪಡಿಸಿಲ್ಲ. ಹೀಗಾಗಿ, ಈಸಾಂವಿಧಾನಿಕ ನ್ಯಾಯಪೀಠವು ಅಗತ್ಯ ಧಾರ್ಮಿಕ ಆಚರಣೆಯ ಕಾನೂನಿಗೆ ಸಂಬಂಧಿಸಿದಂತೆ ಅರ್ಜಿದಾರರು ಒದಗಿಸಿರುವ ದಾಖಲೆಗಳನ್ನು ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.

‘ಆಹಾರ ಮತ್ತು ಉಡುಪನ್ನು ಅಗತ್ಯ ಮೂಲಭೂತ ಆಚರಣೆ ಎಂದು ಪರಿಗಣಿಸಲು ಆಗದು’ ಎಂದು ಶಿರೂರ ಮಠದ ಪ್ರಕರಣವನ್ನು ಉಲ್ಲೇಖಿಸಿದ ನಾವದಗಿ, ‘ಸಂವಿಧಾನದ 25ನೇ ವಿಧಿಯು ಧಾರ್ಮಿಕ ಆಚರಣೆಯ ರಕ್ಷಣೆಗಳ ಬಗ್ಗೆ ವಿವರಿಸುತ್ತದೆ. ಆದರೆ, ಅಗತ್ಯ ಧಾರ್ಮಿಕ ಆಚರಣೆಯ ಬಗ್ಗೆ ಹೇಳಿಲ್ಲ.ಎಲ್ಲ ಧಾರ್ಮಿಕ ಚಟುವಟಿಕೆಗಳಿಗೂ ಸಂವಿಧಾನದ ರಕ್ಷಣೆಯಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಶಬರಿಮಲೆ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ’ ಎಂದು ವಿವರಿಸಿದರು.

‘ಅನಗತ್ಯ ಮೌಢ್ಯಗಳನ್ನು ಧಾರ್ಮಿಕ ಆಚರಣೆಯ ಅಗತ್ಯ ಭಾಗವೆಂದು ಪರಿಗಣಿಸಲಾಗದು. ಮೊದಲಿಗೆ ಅಗತ್ಯ ಧಾರ್ಮಿಕ ಆಚರಣೆ ಹೇಗೆಂಬುದು ಸಾಬೀತಾಗಬೇಕು. ಇಂತಹ ಆಚರಣೆಗಳು ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿರಬಾರದು. ಇಂತಹ ವಿಷಯಗಳನ್ನು ನ್ಯಾಯಪೀಠ ಪ್ರಾಯೋಗಿಕ ವಿಧಾನದಲ್ಲಿ ಮನಗಾಣಬೇಕು.ಯಾವುದು ಅತ್ಯಗತ್ಯ ಧಾರ್ಮಿಕ ಆಚರಣೆ ಮತ್ತು ಯಾವುದು ಅಲ್ಲ ಎಂಬುದರ ಬಗ್ಗೆ ಶಬರಿಮಲೆ ಪ್ರಕರಣದ ತೀರ್ಪನ್ನು ಪರಾಂಬರಿಸಬೇಕು’ ಎಂದು ಮನವಿ ಮಾಡಿದರು.

ವಿಚಾರಣೆ ಮಧ್ಯದಲ್ಲಿ ನಾವದಗಿ ಅವರನ್ನು ನ್ಯಾಯಪೀಠ, ‘ಶಿಕ್ಷಣ ಸಂಸ್ಥೆಗಳು ಹಿಜಾಬ್‌ಗೆ ಅನುಮತಿಸಿದರೆ, ನಿಮ್ಮದೇನಾದರೂ ಆಕ್ಷೇಪಣೆಗಳಿವೆಯೇ’ ಎಂಬ ಪ್ರಶ್ನೆಗೆ, ‘ಕರ್ನಾಟಕ ಶಿಕ್ಷಣ ಕಾಯ್ದೆ–1983 ರ ಅನುಸಾರ ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯತೀತ ವಾತಾವರಣ ಇರಬೇಕು ಎಂದು ಅತ್ಯಂತ ಸ್ಪಷ್ಟವಾಗಿ ನಮೂದಿಸಲಾಗಿದೆ. ಒಂದು ವೇಳೆ ಸಂಸ್ಥೆಗಳು ಹಿಜಾಬ್‌ಗೆ ಅನುಮತಿ ನೀಡಿ, ಅದರಿಂದ ಸಮಸ್ಯೆಗಳು ಉದ್ಭವಿಸಿದಲ್ಲಿ ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.ವಿಚಾರಣೆಯನ್ನು ಮಂಗಳವಾರಕ್ಕೆ (ಫೆ.22) ಮುಂದೂಡಲಾಗಿದೆ.

‘ಧಾರ್ಮಿಕ ಅಗತ್ಯ ಆಚರಣೆ ಸಾಬೀತುಪಡಿಸಬೇಕು’

‘ಧಾರ್ಮಿಕವಾಗಿ ಅಗತ್ಯ ಆಚರಣೆ ಎಂದು ಹೇಳಬೇಕಾದರೆ ಅದನ್ನು ಸಾಬೀತುಪಡಿಸುವ ಅಂಶಗಳೂ ಮುಖ್ಯವಾಗುತ್ತವೆ.ಕುರಾನ್‌ ಪ್ರಕಾರ ಅಗತ್ಯ ಆಚರಣೆಗಳು ಎಂದು ಕೋರ್ಟ್ ಮೆಟ್ಟಿಲೇರಿದ್ದ ಈ ಹಿಂದಿನ ಪ್ರಕರಣಗಳಲ್ಲಿ ಅರ್ಜಿದಾರರು ಹೇಗೆ ವಿಫಲವಾಗಿದ್ದಾರೆ ಎಂಬುದಕ್ಕೆ ಹಲವು ನಿದರ್ಶನಗಳಿವೆ’ ಎಂದ ಅಡ್ವೊಕೇಟ್‌ ಜನರಲ್‌, ಕೆಲವು ಪೂರ್ವ ನಿದರ್ಶನಗಳನ್ನು ವಿವರಿಸಿದರು.

*ಖುರೇಷಿ ಪ್ರಕರಣದಲ್ಲಿ ಕುರಾನ್‌ ಅನ್ನು ಉಲ್ಲೇಖಿಸುತ್ತಾ, ‘ಪ್ರಾಣಿವಧೆ ಅಗತ್ಯ ಧಾರ್ಮಿಕ ಆಚರಣೆ’ ಎಂದು 1959 ರಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ನಕಾರಾತ್ಮಕ ತೀರ್ಪು ಬಂದಿತ್ತು.

* ‘ಇಸ್ಲಾಂನಲ್ಲಿ ಬಹುಪತ್ನಿತ್ವಕ್ಕೆ ರಕ್ಷಣೆ ಇದೆ‘ ಎಂದು ಹರಿಯಾಣದ ಜಾವೇದ್‌ ಪ್ರಕರಣದಲ್ಲಿ ವಾದಿಸಲಾಗಿತ್ತು. ಆದರೆ ಇದನ್ನುಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.

* ಇಸ್ಮಾಯಿಲ್‌ ಫಾರೂಖಿ (ಬಾಬರಿ ಮಸೀದಿ) ಪ್ರಕರಣದಲ್ಲಿ ಸರ್ಕಾರವು ಮಸೀದಿಯನ್ನು ವಶಪಡಿಸಿಕೊಂಡಿತ್ತು. ‘ಇಸ್ಲಾಂ ಪ್ರಕಾರ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದು ಮೂಲಭೂತ ತತ್ವವಾಗಿದೆ’ ಎಂದು ಅರ್ಜಿದಾರರು ಪ್ರಶ್ನಿಸಿದ್ದರು. ಇದನ್ನು ನ್ಯಾಯಾಲಯ ಒಪ್ಪಿರಲಿಲ್ಲ.

* ಶಾಹೀರಾ ಬಾನು ಪ್ರಕರಣ. ಇದರಲ್ಲಿ ತ್ರಿವಳಿ ತಲಾಖ್‌ ಹೇಳುವುದರ ಕುರಿತಾದ ಅಗತ್ಯತೆಯನ್ನು ನ್ಯಾಯಾಲಯ ಮಾನ್ಯ ಮಾಡಲಿಲ್ಲ.

* ‘ಬೆಂಗಳೂರಿನ ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ ವಕ್ಫ್‌ ಮಂಡಳಿಯ ಆಸ್ತಿ. ಈವಕ್ಫ್‌ ಭೂಮಿಯನ್ನು ವಿಂಡ್ಸರ್‌ ಮ್ಯಾನರ್‌ಗೆ ಭೋಗ್ಯಕ್ಕೆ ನೀಡಲಾಗಿದೆ. ಇಲ್ಲಿ ವೈನ್‌ ಮತ್ತು ಹಂದಿ ಮಾಂಸ ಮಾರಾಟ ಪೂರೈಸಲಾಗುತ್ತದೆ. ಇದು ಇಸ್ಲಾಂಗೆ ವಿರುದ್ಧ’ ಎಂದು ಆಕ್ಷೇಪಿಸಲಾಗಿತ್ತು. ಆದರೆ, ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿತ್ತು.

***

ಆಚರಣೆಯೊಂದು ‘ಅಗತ್ಯವಾಗಿ ಧಾರ್ಮಿಕವಾಗಿದ್ದರೂ’ ಅದು ‘ಧರ್ಮಕ್ಕೆ ಅಗತ್ಯವೇ’ ಎನ್ನುವುದನ್ನು ನಿರೂಪಿಸಬೇಕಿದೆ. ಹಿಜಾಬ್‌ ಧರಿಸುವುದು ಇಸ್ಲಾಮ್‌ನಲ್ಲಿ ಅಗತ್ಯ ಎಂಬುದನ್ನು ಅರ್ಜಿದಾರರು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಬೇಕು.
ಪ್ರಭುಲಿಂಗ ನಾವದಗಿ, ಅಡ್ವೊಕೇಟ್‌ ಜನರಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT