ಶುಕ್ರವಾರ, ಆಗಸ್ಟ್ 19, 2022
27 °C
ರೈತ ನಾಯಕನ ನಡೆಗೆ ಹಲವು ಸಚಿವರ ಆಕ್ರೋಶ

ಕೋಡಿಹಳ್ಳಿ ಬ್ಲ್ಯಾಕ್‌ಮೇಲ್‌ ತಂತ್ರ: ಬೊಮ್ಮಾಯಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ಬೆನ್ನಿಗೆ ನಿಂತ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಹಲವು ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೋಡಿಹಳ್ಳಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಸಾರಿಗೆ ನೌಕರರನ್ನು ದುರ್ಬಳಕೆ ಮಾಡುತ್ತಿದ್ದಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

‘ಒಬ್ಬ ವ್ಯಕ್ತಿಯ ಸ್ವಪ್ರತಿಷ್ಠೆಗೆ ಸಾರಿಗೆ ನಿಗಮಗಳ ಭವಿಷ್ಯ ಹಾಳಾಗುವುದನ್ನು ತಡೆದು ಅವುಗಳ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ’ ಎಂದೂ ಬೊಮ್ಮಾಯಿ ಹೇಳಿದ್ದಾರೆ.

‘ರೈತ ನಾಯಕರು ಎನಿಸಿಕೊಂಡಿರುವ ಈ ವ್ಯಕ್ತಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ತನಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮೂಗು ತೂರಿಸುವುದು ಎಷ್ಟು ಸಮಂಜಸ’ ಎಂದು ಜನರು ಕೇಳುತ್ತಿರುವ ಪ್ರಶ್ನೆಗೆ ಕೋಡಿಹಳ್ಳಿ ಮೊದಲು ಉತ್ತರ ನೀಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

‘ತಮ್ಮದಲ್ಲದ ಹೋರಾಟದ ಚುಕ್ಕಾಣಿ ಹಿಡಿದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರದ ವಿರುದ್ಧ ಸಾರಿಗೆ ನೌಕರರನ್ನು ಎತ್ತಿಕಟ್ಟಿದ್ದು ಅವರ ಘನತೆಗೆ ತಕ್ಕದ್ದಲ್ಲ’ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಕಿಡಿಕಾರಿದ್ದಾರೆ.

‘ಸಾರಿಗೆ ನೌಕರರನ್ನು ಎರಡು ಗುಂಪುಗಳಾಗಿ ಮಾಡಿ ರಾಜಕೀಯ ದುರುದ್ದೇಶಕ್ಕೆ ಈ ಪ್ರತಿಭಟನೆಯನ್ನು ಅವರು ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿಯವರು ಸಾರಿಗೆ ಸಚಿವರು ನೌಕರರೊಂದಿಗಿದ್ದಾರೆ. ಹೋರಾಟಗಾರರು ಎಂದೂ ಅವರಿವರ ಮಾತಿಗೆ ಕಿವಿಕೊಡಬಾರದು’ ಎಂದಿದ್ದಾರೆ.

‘ಸಾರಿಗೆ ನೌಕರರ ವಿಷಯದಲ್ಲಿ ಮೂಗು ತೂರಿಸುತ್ತಿರುವುದು ಸರಿಯಲ್ಲ. ಅವರು ಯಾರು ಇದಕ್ಕೆ ಅಡ್ಡಿ ಬರುತ್ತಿರುವುದಕ್ಕೆ? ಇದು ಎಷ್ಟು ಸರಿ? ಸರ್ಕಾರಿ ಸಾರಿಗೆ ನೌಕರರಿಗೂ ಇವರಿಗೂ ಏನು ಸಂಬಂಧ? ಇವರು ಮಧ್ಯಪ್ರವೇಶ ಮಾಡುವುದರೊಳಗೆ ಎಲ್ಲವೂ ಸರಿಯಾಗಿತ್ತು. ಅವರೇನು ಎಲ್ಲ ಕಡೆ ಗುತ್ತಿಗೆ ತೆಗೆದುಕೊಂಡಿದ್ದಾರೆಯೇ’ ಎಂದು ಸಹಕಾರ ಸಚಿವ ಎಸ್‌ಟಿ. ಸೋಮಶೇಖರ್‌ ಪ್ರಶ್ನಿಸಿದರು.

‘ಕೋಡಿಹಳ್ಳಿ ಸಾರಿಗೆ ನೌಕರರ ಒಗ್ಗಟ್ಟು ಮುರಿದು ಅದನ್ನು ಎರಡು ತಂಡವನ್ನಾಗಿಸಿ ಹೋರಾಟ ಮಾಡುತ್ತಿರುವುದು ವಿಪರ್ಯಾಸ. ರೈತ ಪರ ಹೋರಾಟ ಮಾಡಿ ಕೋಡಿಹಳ್ಳಿ ಚಂದ್ರಶೇಖರ್ ಮನೆ ಮಠಗಳನ್ನು ಕಳೆದುಕೊಂಡುಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ‘ಕೋಡಿಹಳ್ಳಿ ಈ ರೀತಿ ಸಾರಿಗೆ ನಿಗಮದ ನೌಕರರ ಹೋರಾಟಕ್ಕೂ ಕೈಹಾಕಿ, ಈ ನೌಕರರನ್ನು ಕೂಡಾ ಹಾಳು ಮಾಡಬಾರದು’ ಎಂದು ಸೂಚ್ಯವಾಗಿ ಹೇಳಿದರು.

‘ಮೊದಲು ಉತ್ತರ ನೀಡಲಿ’
‘ರೈತ ನಾಯಕರು ಎನಿಸಿ ಕೊಂಡಿರುವ ಈ ವ್ಯಕ್ತಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ತನಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮೂಗು ತೂರಿಸುವುದು ಎಷ್ಟು ಸಮಂಜಸ’ ಎಂದು ಜನರು ಕೇಳುತ್ತಿರುವ ಪ್ರಶ್ನೆಗೆ ಕೋಡಿಹಳ್ಳಿ ಮೊದಲು ಉತ್ತರ ನೀಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

‘ಕೆಲವರ ಕುಮ್ಮಕ್ಕಿನಿಂದ ಮುಷ್ಕರ’
ಆನೇಕಲ್:
‘ಸರ್ಕಾರ ಚೆನ್ನಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಕೆಲವರ ಕುಮ್ಮಕ್ಕಿನಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ವೇತನ, ಭತ್ಯೆ, ರಜೆ ಸೇರಿದಂತೆ ಸೌಲಭ್ಯ ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

’ಬಜೆಟ್‌ನ ಶೇ45ರಷ್ಟು ಸರ್ಕಾರಿ ನೌಕರರ ಸಂಬಳಕ್ಕೆ ವೆಚ್ಚವಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿ 1ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಹಲವಾರು ನಿಗಮ ಮಂಡಳಿಗಳಿವೆ. ಎಲ್ಲರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಿದರೆ ಬಜೆಟ್‌ನ ಸಂಪೂರ್ಣ ಹಣ ವೇತನಕ್ಕೆ ಖರ್ಚಾಗುತ್ತದೆ. ಗ್ರಾಮೀಣಾಭಿವೃದ್ಧಿ, ಮೂಲಸೌಲಭ್ಯಗಳಿಗೆ ಹಣವಿಲ್ಲದಂತಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

‘ಸಾರಿಗೆ ಮುಷ್ಕರದ ಹಿಂದೆ ಕಾಣದ ಶಕ್ತಿಗಳ ಷಡ್ಯಂತ್ರ’
ಬೆಂಗಳೂರು:
‘ಮುಷ್ಕರನಿರತ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು. ಅವರನ್ನು ದಿಕ್ಕು ತಪ್ಪಿಸುತ್ತಿರುವ ನಕಲಿ ನಾಯಕರಿಗೆ ತಕ್ಕ ಶಾಸ್ತಿ ಕಾದಿದೆ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಕೋಡಿಹಳ್ಳಿ ಚಂದ್ರಶೇಖರ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಯಾವುದೇ ಕಾರಣಕ್ಕೂ ಮುಷ್ಕರ ಮುಂದುವರಿಸುವುದು ಸರಿಯಲ್ಲ. ಮುಖ್ಯಮಂತ್ರಿ ಮುಂದೆಯೇ ಮುಷ್ಕರ ವಾಪಸ್‌ ಪಡೆಯುವುದಾಗಿ ಒಪ್ಪಿಕೊಂಡು ಹೋದ ಮುಖಂಡರು, ಹೊರಗೆ ಹೋದ ಸ್ವಲ್ಪ ಹೊತ್ತಿನಲ್ಲೇ ವರಸೆ ಬದಲಿಸಿದ್ದು ಯಾಕ. ಅವರ ಹಿಂದೆ ಯಾರಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

‘ಕಾಣದ ಶಕ್ತಿಗಳು ನೌಕರರನ್ನು ದಾರಿ ತಪ್ಪಿಸುತ್ತಿದೆ. ರೈತ ನಾಯಕರ ಸೋಗಿನಲ್ಲಿದ್ದವರು ಇದ್ದಕ್ಕಿದ್ದ ಹಾಗೆ ಸಾರಿಗೆ ನೌಕರರ ಮುಖಂಡರಾಗಿದ್ದು ಹೇಗೆ. ಇದರಲ್ಲಿ ಅಡಗಿರುವ ಹಿತಾಸಕ್ತಿ ಏನು. ಮುಂದೆ ಕಾರ್ಮಿಕರನ್ನು ಬಿಟ್ಟು ಹಿಂದೆ ಯಾರೆಲ್ಲ ಆಟ ಆಡುತ್ತಿದ್ದಾರೆ. ಅವರ ದುರುದ್ದೇಶವೇನಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ಸರ್ಕಾರಕ್ಕೂ ಈ ಬಗ್ಗೆ ಗೊತ್ತಿದೆ’ ಎಂದುಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಉಪ ಮುಖ್ಯಮಂತ್ರಿ ಚಾಟಿ ಬೀಸಿದರು.

‘ಮುಖ್ಯಮಂತ್ರಿಗಳು ಸಾಧ್ಯವಾಗುವ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಒಮ್ಮೆ ಹೇಳಿದರೆಂದರೆ ಬೇಡಿಕೆಗಳು ಕ್ಷಿಪ್ರಗತಿಯಲ್ಲಿ ಈಡೇರುತ್ತವೆ ಎಂಬುದು ಅನೇಕ ಸಲ ಸಾಬೀತಾಗಿದೆ’ ಎಂದರು.

‘ರಾಜ್ಯದ ಜನರು ಬಸ್‌ ಸೌಕರ್ಯವಿಲ್ಲದೆ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಈ ಬಿಕ್ಕಟ್ಟು ಮತ್ತೂ ಹೆಚ್ಚಾಗುವುದು ಬೇಡ. ಸಾರಿಗೆ ಸಿಬ್ಬಂದಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಅವುಗಳಲ್ಲಿ ಆರ್ಥಿಕ ಶಕ್ತಿಯ ಇತಿಮಿತಿಯೊಳಗೆ ಕೆಲವು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಮಾತಿಗೆ ಓಗೊಟ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಬೇಕು’ ಎಂದು ಮನವಿ ಮಾಡಿದರು.

‘ಸಾರಿಗೆ ಸಿಬ್ಬಂದಿಯ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಗಮನವಿದೆ. ಸಹಾನುಭೂತಿಯೂ ಇದೆ. ಆದರೆ, ಜನರಿಗೆ ತೊಂದರೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಇನ್ನೂ ತೊಂದರೆ ಅನುಭವಿಸುವುದನ್ನು ನೋಡಿಕೊಂಡಿರಲು ಸಾಧ್ಯವಿಲ್ಲ’ ಎಂದೂ ಉಪ ಮುಖ್ಯಮಂತ್ರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು