ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನಕಲಿ ಸಹೋದರನ ಬಂಧನ!

Last Updated 27 ಆಗಸ್ಟ್ 2020, 10:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸಹೋದರನೆಂದು ಸುಳ್ಳು ಹೇಳಿ ಪ್ರಭಾವ ಬೀರಲು ಮುಂದಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯ ನಿವಾಸಿ ಬಸವರಾಜು ಬಂಧಿತ ಆರೋಪಿ. ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿ ತನ್ನ ಸಹೋದರ, ಗೌರಿಬಿದನೂರು ತಾಲ್ಲೂಕಿನ ತರಿದಾಳು ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ರವಿಪ್ರಕಾಶ್ ಅವರಿಗೆ ಸಂಬಂಧಿಸಿದ ಕೆಲಸವೊಂದರ ವಿಚಾರವಾಗಿ ಮಾತನಾಡಲು ಮಂಚೇನಹಳ್ಳಿ ಪೊಲೀಸ್ ಠಾಣೆ ಎಸ್ಐ ಲಕ್ಷ್ಮೀನಾರಾಯಣ ಅವರಿಗೆ ಇತ್ತೀಚೆಗೆ ಕರೆ ಮಾಡಿ, ತಾನು ಗೃಹ ಸಚಿವರ ಸಹೋದರ ಮಹೇಶ್ ಬೊಮ್ಮಾಯಿ ಎಂದು ಪರಿಚಯಿಸಿಕೊಂಡು ರವಿಪ್ರಕಾಶ್ ಅವರ ಕೆಲಸ ಬೇಗ ಮಾಡಿ ಕೊಡುವಂತೆ ಒತ್ತಡ ಹಾಕಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೇ ಠಾಣೆಯ ದೂರವಾಣಿಗೆ ಕರೆ ಮಾಡಿ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಎಂದೂ ಪರಿಚಯಿಸಿಕೊಂಡು ತಮ್ಮ ಸಂಬಂಧಿ ಶಿಕ್ಷಕನ ಕೆಲಸ ಬೇಗ ಮಾಡಬೇಕು ಎಂದು ಸೂಚಿಸಿದ್ದ ಎಂದು ಪೊಲೀಸರು ತಿಳಿಸಿದರು.

ಬುಧವಾರ ಶಿಕ್ಷಕ ರವಿಪ್ರಕಾಶ್ ಅವರ ಜತೆ ವಕೀಲನ ವೇಷದಲ್ಲಿ ಠಾಣೆಗೆ ಬಂದ ಆರೋಪಿ ತಾನು ಗೃಹ ಸಚಿವರ ಕಾನೂನು ಸಲಹೆಗಾರ ಎಂದು ಹೇಳಿಕೊಂಡಿದ್ದ.

ಎಸ್ಐ ಲಕ್ಷ್ಮೀನಾರಾಯಣ ಅವರು ಬಸವರಾಜು ನಡವಳಿಕೆಯಿಂದ ಅನುಮಾನಗೊಂಡು ವಕೀಲರ ಗುರುತಿನ ಚೀಟಿ ಬಗ್ಗೆ ವಿಚಾರಿಸಿದಾಗ ಆರೋಪಿ ಉತ್ತರಿಸಲು ತಡಬಡಿಸಿದ್ದ ಎನ್ನಲಾಗಿದೆ.

ಬಳಿಕ ಪೂರ್ವಾಪರ ವಿಚಾರಿಸಿದಾಗ ಆರೋಪಿ‌ ಪ್ರಭಾವಿಗಳು, ರಾಜಕಾರಣಿಗಳ ಹೆಸರು ಹೇಳಿದರೆ ಬೇಗ ಕೆಲಸ ಬೇಗ ಆಗುತ್ತದೆ ಎಂಬ ಕಾರಣಕ್ಕೆ ಸುಳ್ಳು ಹೇಳಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಆರೋಪಿ ವಿರುದ್ಧ ಮಂಚೇನಹಳ್ಳಿ ಠಾಣೆ ಪೊಲೀಸರು ವಂಚನೆ (ಐಪಿಸಿ 419, 420) ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT