ಗುರುವಾರ , ಮಾರ್ಚ್ 23, 2023
28 °C
ಕೋವಿಡ್‌: ನೆಲ ಕಚ್ಚಿದ ಹೋಟೆಲ್‌ ಉದ್ಯಮ l ಒಂದೂವರೆ ವರ್ಷ ಕಳೆದರೂ ಹಳಿಗೆ ಬಾರದ ಬದುಕು

ಬದುಕು ಬೀದಿಗೆ ತಂದ ಕೋವಿಡ್‌: ಹೋಟೆಲ್‌ ಕಾರ್ಮಿಕ, ಮಾಲೀಕ ಇಬ್ಬರೂ ಕಂಗಾಲು

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನ ಹೊಡೆತಕ್ಕೆ ಸಿಲುಕಿ ರಾಜ್ಯ ಹೋಟೆಲ್‌ ಉದ್ಯಮ ನಲುಗಿಹೋಗಿದೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದರೆ, ಸಾವಿರಾರು ಹೋಟೆಲ್‌ ಮಾಲೀಕರು ನಷ್ಟದ ಭಾರ ತಾಳಲಾರದೇ ತಾವು ಕಟ್ಟಿದ ಸಂಸ್ಥೆಗಳ ಬಾಗಿಲು ಮುಚ್ಚಿ ನೇಪಥ್ಯಕ್ಕೆ ಸೇರಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ಹೋಟೆಲ್‌ ಕಾರ್ಮಿಕರು ಮತ್ತು ಮಾಲೀಕರು ಇಬ್ಬರ ನೆಮ್ಮದಿಯನ್ನೂ ಏಕಕಾಲಕ್ಕೆ ಕಿತ್ತುಕೊಂಡಿದೆ.

ರಾಜ್ಯದ ವಿವಿಧೆಡೆಯ ಪಬ್‌ಗಳು ಮತ್ತು ಕೆಲವು ಐಷಾರಾಮಿ ರೆಸ್ಟೋರೆಂಟ್‌ಗಳು ಇನ್ನೂ ಬಾಗಿಲು ತೆರೆದಿಲ್ಲ. ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲೂ ಸಮಯದ ಮಿತಿ, ರಾತ್ರಿ ಕರ್ಫ್ಯೂ ಮತ್ತಿತರ ಕಾರಣಗಳಿಂದ ವಹಿವಾಟು ಕುಸಿದಿದೆ. ವಸತಿ ವ್ಯವಸ್ಥೆ ಇರುವ ಐಷಾರಾಮಿ ಹೋಟೆಲ್‌ಗಳತ್ತ ಗ್ರಾಹಕರು ಪೂರ್ಣ ಪ್ರಮಾಣದಲ್ಲಿ ಮುಖ ಮಾಡಿಲ್ಲ. ಈ ಎಲ್ಲವೂ ಹೋಟೆಲ್‌ ಉದ್ಯಮದ ಭವಿಷ್ಯವನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿವೆ.

ರಾಜ್ಯದ ಜನರಷ್ಟೇ ಅಲ್ಲ, ಒಡಿಶಾ, ಬಿಹಾರ, ಅಸ್ಸಾಂ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳ ಜನರು ಕರ್ನಾಟಕದ ಹೋಟೆಲ್‌ ಉದ್ಯಮದಲ್ಲಿ ದುಡಿಯುತ್ತಿದ್ದರು. ನೇಪಾಳದಿಂದಲೂ ಇಲ್ಲಿಗೆ ನುರಿತ ಬಾಣಸಿಗರು, ಸಹಾಯಕರು ಬರುತ್ತಿದ್ದರು. ಈಗ ಇರುವ ಕಾರ್ಮಿಕರಿಗೇ ಕೈತುಂಬಾ ಕೆಲಸ ನೀಡಲಾಗದ ಸ್ಥಿತಿಗೆ ಹೋಟೆಲ್‌ ಮಾಲೀಕರು ತಲುಪಿದ್ದಾರೆ.

ಕೋವಿಡ್‌ ಮೊದಲ ಅಲೆ ಆರಂಭವಾಗುತ್ತಿದ್ದಂತೆ ಸ್ವಗ್ರಾಮಗಳಿಗೆ ಮರಳಿದ ಹೋಟೆಲ್‌ ಕಾರ್ಮಿಕರ ಪೈಕಿ ಅರ್ಧದಷ್ಟು ಮಂದಿ ಇನ್ನೂ ಮರಳಿಲ್ಲ. ಹೋಟೆಲ್‌ಗಳು ಆರಂಭವಾಗಿದ್ದರೂ ಹೆಚ್ಚು ವೇತನ ಬಯಸುವ ಕಾರ್ಮಿಕರಿಗೆ ಮತ್ತೆ ಉದ್ಯೋಗ ನೀಡುವ ಸ್ಥಿತಿಯಲ್ಲಿ ಮಾಲೀಕರು ಉಳಿದಿಲ್ಲ. ಹೀಗಾಗಿ ಈ ಉದ್ಯಮವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಸಾವಿರಾರು ಮಂದಿ ಈಗ ದುಡಿಮೆಯ ಆಸರೆಯೇ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಿಕ್ಕು ತೋಚದಂತಹ ಸ್ಥಿತಿ

‘ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಹೋಟೆಲ್‌ ಸಮೂಹವೊಂದರಲ್ಲಿ ಮಾರುಕಟ್ಟೆ ವಿಭಾಗದ ಸಹ ನಿರ್ದೇಶಕನ ಹುದ್ದೆಯಲ್ಲಿದ್ದೆ. ಸಣ್ಣ ನೌಕರಿಯಿಂದ ಹಂತ ಹಂತವಾಗಿ ಮೇಲಕ್ಕೆ ಹೋಗಿದ್ದೆ. ತಿಂಗಳಿಗೆ ವೇತನ ಮತ್ತು ಭತ್ಯೆ ಸೇರಿ ₹ 1ಲಕ್ಷ ಸಿಗುತ್ತಿತ್ತು. ಆದರೆ, 2020ರ ಲಾಕ್‌ಡೌನ್‌ ಬಳಿಕ ಒಂದು ದಿನ ಕೆಲಸದಿಂದ ಕಿತ್ತು ಹಾಕಿದರು. ನನ್ನಂತೆಯೇ ಹೋಟೆಲ್‌ ಉದ್ಯಮದಲ್ಲಿದ್ದ ಹತ್ತಾರು ಸಾವಿರ ಮಂದಿ ಈ ರೀತಿಯಲ್ಲೇ ಉದ್ಯೋಗ ಕಳೆದುಕೊಂಡರು’ ಎಂದು ಕೋವಿಡ್‌ ಸೃಷ್ಟಿಸಿದ ಸಂಕಷ್ಟವನ್ನು ಬಿಚ್ಚಿಡುತ್ತಾರೆ ತೀರ್ಥಹಳ್ಳಿ ತಾಲ್ಲೂಕಿನ ಸಣ್ಣ ಹಳ್ಳಿಯೊಂದರ ಯುವಕ ಎಚ್‌.ಜಿ. ಸಂತೋಷ್‌ ಕುಮಾರ್‌.

‘ಲಕ್ಷ ರೂಪಾಯಿ ಸಂಬಳದ ಕೆಲಸ ಹೋದ ಬಳಿಕ ಎಲ್ಲಿಯೂ ಕೆಲಸ ಸಿಗಲಿಲ್ಲ. ಕಾರಿನ ಸಾಲ, ಮನೆ ನಿರ್ವ
ಹಣೆ ಸೇರಿದಂತೆ ದುಬಾರಿ ಖರ್ಚು ಇತ್ತು. ಮುಂದೇನು ಎಂಬುದು ಅರಿಯದಂತೆ ಆಗಿತ್ತು. ಗೂಡ್ಸ್‌ ಆಟೊ ಖರೀದಿಸಿ ಕೋಳಿ ಮೊಟ್ಟೆ ವ್ಯಾಪಾರ ಆರಂಭಿಸಿ, ಅದರಲ್ಲೇ ನಿಧಾನಕ್ಕೆ ಸುಧಾರಿಸಿಕೊಳ್ಳುತ್ತಿದ್ದೇನೆ’ ಎಂದು ನೋವು ನುಂಗಿಕೊಂಡೇ
ಹೇಳಿದರು.

ಇದು ಒಬ್ಬಿಬ್ಬರ ಕತೆಯಲ್ಲ. ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲಿ ಇಂತಹ ಹತ್ತಾರು ಮಂದಿ ಕಾಣಸಿಗುತ್ತಾರೆ. ಕೆಲವರು ಪರ್ಯಾಯ ಉದ್ಯೋಗ ಕಂಡುಕೊಂಡಿದ್ದರೆ, ಬಹುಪಾಲು ಮಂದಿ ಈಗಲೂ ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ಮೊದಲ ಲಾಕ್‌
ಡೌನ್‌ ಮುಗಿದ ಬಳಿಕ ಮತ್ತೆ ನಗರಗಳಿಗೆ ಮರಳಿದ್ದ ಕೆಲವರು, 2021ರ ಲಾಕ್‌ಡೌ
ನ್‌ನಲ್ಲಿ ಮತ್ತೆ ನೌಕರಿ ಕಳೆದುಕೊಂಡಿದ್ದಾರೆ. ಅವರ ಬದುಕು ಮತ್ತೆ ಹಳಿಗೆ ಬರಲಾರದಂತಹ ಸ್ಥಿತಿಗೆ ತಲುಪಿದೆ.

ನಷ್ಟದ ಸುಳಿಯಲ್ಲಿ ಮಾಲೀಕರು

‘ರಾಜ್ಯದಲ್ಲಿ ನೋಂದಾಯಿತ ಹೋಟೆ ಲ್‌ಗಳು, ನೋಂದಣಿ ಆಗದ ಉದ್ದಿಮೆ ಗಳು, ಸಣ್ಣ ಹೋಟೆಲ್‌ಗಳನ್ನೂ ಗಣನೆಗೆ ತೆಗೆದುಕೊಂಡರೆ 50 ಲಕ್ಷಕ್ಕೂ ಹೆಚ್ಚು ಮಂದಿ ಹೋಟೆಲ್‌ ಉದ್ಯಮದಲ್ಲಿನ ದುಡಿಮೆಯನ್ನೇ ನೆಚ್ಚಿಕೊಂಡಿದ್ದಾರೆ. ಕೋವಿಡ್‌ನಿಂದ ಹೋಟೆಲ್‌ ಮುಚ್ಚುವ ಸ್ಥಿತಿ ಬಂದಿರುವಾಗ ಕಾರ್ಮಿಕರ ಗೋಳು ಕೇಳಲು ಯಾರಿದ್ದಾರೆ’ ಎಂದು ಹೇಳು ತ್ತಾರೆ ಕರ್ನಾಟಕ ಕಾರ್ಮಿಕ ಪರಿಷತ್‌ನ ಹೋಟೆಲ್‌ ವಿಭಾಗದ ಅಧ್ಯಕ್ಷರೂ ಆಗಿರುವ ಚಂದ್ರಶೇಖರ್‌ ಶೆಟ್ಟಿ.

‘ಹೋಟೆಲ್‌ ಉದ್ಯಮ ತೀವ್ರವಾದ ಬಿಕ್ಕಟ್ಟಿನಲ್ಲಿದೆ. ಬೆಂಗಳೂರು ನಗರದಲ್ಲೇ 1,000ಕ್ಕೂ ಹೆಚ್ಚು ಹೋಟೆಲ್‌ಗಳು ಬಂದ್‌ ಆಗಿವೆ. ಇನ್ನೂ 500 ಹೋಟೆಲ್‌ಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಬಹುತೇಕ ಹೋಟೆಲ್‌ಗಳ ವಹಿವಾಟು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡ 50ರಷ್ಟನ್ನೂ ಮುಟ್ಟಿಲ್ಲ. ಹೋಟೆಲ್‌ ಮಾಲೀಕರಿಗಾಗಲಿ, ಕಾರ್ಮಿಕರಿಗಾಗಲಿ ಸರ್ಕಾರದಿಂದ ಬಿಡಿಗಾಸಿನ ನೆರವೂ ಸಿಕ್ಕಿಲ್ಲ’ ಎನ್ನುತ್ತಾರೆ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌.

ನೆಲಕ್ಕೆ ಬಿದ್ದಾಗ ಕೈ ಹಿಡಿಯುವವರಿಲ್ಲ

‘ವರ್ಷಗಳ ಕಾಲ ಪರಿಶ್ರಮ ವಹಿಸಿ ಕಟ್ಟಿದ ನಮ್ಮ ಉದ್ಯಮಗಳು ಕೋವಿಡ್‌ ಕಾರಣದಿಂದ ನೆಲ ಕಚ್ಚಿವೆ. ಕಾರ್ಮಿಕರ ಸಂಖ್ಯೆಯನ್ನು 500ರಿಂದ 220ಕ್ಕೆ ಇಳಿಸಿದ್ದೇವೆ. ಇಂತಹ ಸ್ಥಿತಿಯಲ್ಲಿ ನೆಲಕ್ಕೆ ಬಿದ್ದ ಉದ್ಯಮಿಗಳನ್ನು ಕೈಹಿಡಿಯಲು ಸರ್ಕಾರ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ’ ಎಂದು ನೋವು ತೋಡಿಕೊಳ್ಳುತ್ತಾರೆ ಉಡುಪಿ ರುಚಿ ಸಮೂಹದ ಅಧ್ಯಕ್ಷ ಶೇಷಾದ್ರಿ ರಾವ್‌ ಆರ್‌. ಸಾಹೇಬ್‌.

‘ಕೋವಿಡ್‌ನಿಂದ ವಹಿವಾಟು ಗಣನೀಯವಾಗಿ ಕುಸಿದಿದೆ. ಆದರೆ, ಬಾಡಿಗೆ, ತೆರಿಗೆ, ವಿದ್ಯುತ್‌ ಶುಲ್ಕ, ವೇತನ ಯಾವುದೂ ಕಡಿಮೆಯಾಗಿಲ್ಲ. ತೆರಿಗೆಯನ್ನು ಸುಲಭ ಕಂತುಗಳಲ್ಲಿ ಪಾವತಿಸುವುದಕ್ಕೆ ಮತ್ತು ಸಾಲ ಮರುಪಾವತಿಗಾಗಿ ಆಸ್ತಿ ಮಾರುವ ಉದ್ಯಮಿಗಳ ಮೇಲೆ ಮೇಲುತೆರಿಗೆ ವಿಧಿಸಬಾರದು ಎಂಬ ನಮ್ಮ ಆಗ್ರಹಕ್ಕೆ ಯಾರೊಬ್ಬರೂ ಕಿವಿಗೊಡುತ್ತಿಲ್ಲ’ ಎಂಬುದು ಅವರ ಬೇಸರ.

‘ಅನ್ನದಾತರು ಅನಾಥ’

‘ಹೋಟೆಲ್‌ ಉದ್ಯಮ ಹಳೆಯ ಕಾರಿನಂತಾಗಿದೆ. ಮುಚ್ಚಿಹೋದ ಹೋಟೆಲ್‌ಗಳನ್ನು ಕೊಳ್ಳುವವರೂ ಇಲ್ಲ. ಹೋಟೆಲ್‌ ಮಾಲೀಕರೇ ನಷ್ಟದ ಸುಳಿಯಲ್ಲಿ ಸಿಲುಕಿ ನರಳುತ್ತಿರುವುದರಿಂದ ಅನ್ನದಾತರೇ ಅನಾಥರಾದಂತಹ ಸ್ಥಿತಿ ನಿರ್ಮಾಣವಾಗಿದೆ’  ಎನ್ನುತ್ತಾರೆ ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಬಾರ್‌.

‘ಕೋವಿಡ್‌ ನಿಯಂತ್ರಣದ ಹೆಸರಿನಲ್ಲಿ ಹೆಚ್ಚು ಸಮಸ್ಯೆ ಅನುಭವಿಸಿದ್ದೇ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಮಾಲೀಕರು ಹಾಗೂ ಕಾರ್ಮಿಕರು. ಈಗಲೂ ರಾತ್ರಿ ಕರ್ಫ್ಯೂ ಹೆಸರಿನಲ್ಲಿ ಹೋಟೆಲ್‌ ಉದ್ಯಮಕ್ಕೆ ಅಡಚಣೆ ಮಾಡಲಾಗುತ್ತಿದೆ. ಅತ್ತ ನೆರವೂ ಇಲ್ಲ, ಇತ್ತ ಸುಗಮ ವಹಿವಾಟಿಗೆ ಅವಕಾಶವೂ ಇಲ್ಲ. ಇದೇ ಸ್ಥಿತಿ ಮುಂದುವರಿದರೆ ಇನ್ನಷ್ಟು ಹೋಟೆಲ್‌ಗಳು ಮುಚ್ಚುತ್ತವೆ’ ಎಂದರು.

***

ಎಲ್ಲ ಹಂತದ ಹೋಟೆಲ್‌ಗಳಲ್ಲಿ ಶೇಕಡ 40ರಷ್ಟು ಕಾರ್ಮಿಕರನ್ನು ಕಿತ್ತು ಹಾಕಲಾಗಿದೆ. ಉಳಿಸಿಕೊಂಡ ನೌಕರರ ವೇತನವನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.
– ಎಚ್‌.ಜಿ. ಸಂತೋಷ್‌ ಕುಮಾರ್‌, ಉದ್ಯೋಗ ಕಳೆದುಕೊಂಡ ಯುವಕ

ಕೋವಿಡ್‌ನಿಂದ ಬಾರ್‌ ಮತ್ತು ರೆಸ್ಟೋರೆಂಟ್‌ಗಳ ವಹಿವಾಟೂ ಕುಸಿದಿದೆ. ಕೆಲವೆಡೆ ಶುಲ್ಕ ಪಾವತಿಸಲಾಗದೇ ಸನ್ನದು ನವೀಕರಿಸದ ಮದ್ಯದಂಗಡಿ ಮಾಲೀಕರು ಇದ್ದಾರೆ.‌
– ಗೋವಿಂದರಾಜ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮದ್ಯ ಮಾರಾಟಗಾರರ ಒಕ್ಕೂಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು