ಬುಧವಾರ, ಮಾರ್ಚ್ 3, 2021
18 °C

ಖಳನಾಯಕನಾಗಿ ಬಿಂಬಿಸಲು ಪಿತೂರಿ: ವಿವಾದಕ್ಕೀಡಾಗುತ್ತಿರುವವನು ನಾನೇ –ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸಾರ್ವಜನಿಕರ ದೃಷ್ಟಿಯಲ್ಲಿ  ನನ್ನನ್ನು ಖಳನಾಯಕನಾಗಿ ಬಿಂಬಿಸುವ ಪಿತೂರಿ ನಡೆದಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಇಲ್ಲಿ ಹೇಳಿದರು.

ಕನಕದಾಸರ 533ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು, ‘ರಾಜಕಾರಣದಲ್ಲಿ ಸತ್ಯ ಹೇಳೋದು ಕಷ್ಟ. ಹೇಳಬೇಕಾದುದ್ದನ್ನು ನೇರವಾಗಿ, ಹಳ್ಳಿಯ ಒರಟು ಭಾಷೆಯಲ್ಲೇ ಹೇಳುವೆ. ಸತ್ಯ ಹೇಳದಿದ್ದರೆ  ಆತ್ಮದ್ರೋಹ ಮಾಡಿಕೊಂಡಂತೆ’ ಎಂದರು.

‘ನಾನು ಹೇಳಿದ ಸತ್ಯಗಳನ್ನು ತಿರುಚಿ ವಿವಾದಕ್ಕೀಡು ಮಾಡುತ್ತಿದ್ದಾರೆ. ಹೆಚ್ಚು ವಿವಾದಕ್ಕೀಡಾಗುತ್ತಿರುವವನು ನಾನೇ. ನಾನು ಹೇಳಿದ್ದನ್ನು ಮಾಧ್ಯಮದವರು ಬಣ್ಣ ಹಚ್ಚಿ ಪ್ರಸಾರ ಮಾಡುತ್ತಾರೆ. ಇದನ್ನೇ ಆರ್‌ಎಸ್‌ಎಸ್‌ನವರು ಸಾಮಾಜಿಕ ಜಾಲತಾಣದಲ್ಲಿ ರಂಗು ರಂಗಿನ ಬಣ್ಣ ತುಂಬಿ, ನನ್ನ ತೇಜೋವಧೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಏಪ್ರಿಲ್‌ ಬಳಿಕ ಕೆಳಗಿಳಿಸುತ್ತಾರೆ: ‘ಏಪ್ರಿಲ್‌ ಬಳಿಕ ಯಡಿಯೂರಪ್ಪನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ. ಆರ್‌ಎಸ್‌ಎಸ್‌ ಮೂಲಗಳಿಂದಲೇ ನನಗೆ ಖಚಿತಪಟ್ಟಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಿ.ಡಿ ಕುರಿತ ಪ್ರಶ್ನೆಗೆ, ‘ಯಡಿಯೂರಪ್ಪ ಈ ವಯಸ್ಸಲ್ಲಿ ಏನ್‌ ಮಾಡಿದ್ದಾನೋ? ಯಾರಿಗೆ ಗೊತ್ತು? ಆ ಅಸಹ್ಯ ಸಿ.ಡಿ ಬಗ್ಗೆಯೂ ತನಿಖೆ ನಡೆಸಲಿ’ ಎಂದು ಆಗ್ರಹಿಸಿದರು.

‘ಪಾದಯಾತ್ರೆಗೆ ಆರ್‌ಎಸ್‌ಎಸ್‌ ದುಡ್ಡು’: ‘ಕುರುಬರಿಗೆ ಎಸ್‌.ಟಿ ಮೀಸಲಾತಿಗೆ ಆಗ್ರಹಿಸಿ ನಡೆದಿರುವ ಪಾದಯಾತ್ರೆಗೆ ಆರ್‌ಎಸ್‌ಎಸ್‌ನವರು ದುಡ್ಡು ಕೊಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು. ‘ಮೀಸಲಾತಿ ಸಿಗಬೇಕು ಎಂಬುದಕ್ಕೆ ನನ್ನ ಸಹಮತವಿದೆ. ಕುರುಬರ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ ಮಾಡಿದ್ದೆ. ವರದಿ ಸಿದ್ಧಪಡಿಸಲು ₹ 40 ಲಕ್ಷ ಅನುದಾನ ಕೊಟ್ಟಿದ್ದೆ’ ಎಂದು ಹೇಳಿದರು.

‘ಕುಲಶಾಸ್ತ್ರ ಅಧ್ಯಯನದ ವರದಿಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಿ. ಕೇಂದ್ರ ಒಪ್ಪದಿದ್ದಾಗ ಪ್ರತಿಭಟನೆಗೆ ಇಳಿಯೋಣ. ಪವರ್‌ಫುಲ್‌ ಮಿನಿಸ್ಟ್ರು ಈಶ್ವರಪ್ಪ ಏನು ಮಾಡುತ್ತಿದ್ದಾರೆ? ರಾಜಕಾರಣಕ್ಕಾಗಿ ಸ್ವಾಮೀಜಿಗಳನ್ನೂ ನಡೆಸುತ್ತಿದ್ದಾರೆ ಅಷ್ಟೇ’ ಎಂದು ಕಿಡಿಕಾರಿದರು.

‘ಕುರುಬ ಸಮುದಾಯ ಮಾತ್ರವಲ್ಲ. ಗೊಲ್ಲ, ಕ್ಷೌರಿಕ, ಮಡಿವಾಳ ಸಮುದಾಯಕ್ಕೂ ಎಸ್‌ಟಿ ಮೀಸಲಾತಿ ಸಿಗಬೇಕು’ ಎಂದು ಪ್ರತಿಪಾದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು