ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಬದಲಾಗದಿದ್ದರೆ ಪರ್ಯಾಯ ಕಟ್ಟುತ್ತೇವೆ: ಪುರುಷೋತ್ತಮ ಬಿಳಿಮಲೆ

ಮಹೇಶ್‌ ಜೋಶಿ ಕೋಮುವಾದಿ–ಟೀಕೆ
Last Updated 7 ಜನವರಿ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ಅನುದಾನದ ಕಾರಣ ಮುಂದಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಸರ್ಕಾರದ ಆಣತಿಯಂತೆ ಕೆಲಸ ಮಾಡುತ್ತಿದೆ. ಅದು ಸ್ವಾಯತ್ತ ಸಾಹಿತ್ಯ ಸಂಘಟನೆಯಾಗಿ ಬದಲಾಗದಿದ್ದರೆ ಪರ್ಯಾಯ ಸಂಸ್ಥೆ ಕಟ್ಟಲಾಗುವುದು ಎಂದು ಲೇಖಕ ಹಾಗೂ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ವರ್ಷಗಳಿಂದ ಇತ್ತೀಚೆಗೆ ಕರ್ನಾಟಕದ ಸ್ವಾಯತ್ತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಮೂಲ ಸ್ವರೂಪ ಹಾಗೂ ಧ್ಯೇಯಗಳಿಂದ ದೂರ ಸರಿಯುತ್ತಿವೆ. ಅವುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಮುಂಚೂಣಿಯಲ್ಲಿದೆ. ಸರ್ವಜನರ ಪ್ರಾತಿನಿಧಿಕ ಸಂಸ್ಥೆಗಳಾಗಿದ್ದ ಇವು ಈಗ ಆಡಳಿತಶಾಹಿಯ ಭಾಗದಂತೆ ವರ್ತಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಕೋಮುವಾದಿಯಾಗಿದ್ದಾರೆ. ಸಂಸ್ಥೆಯ ಸ್ವಾಯತ್ತತೆಗಿಂತಲೂ ಪರಿಷತ್ತಿನ ಅಧ್ಯಕ್ಷರ ಸ್ಥಾನ ಸಚಿವ ಪದವಿಗೆ ಸಮನಾದುದು ಎಂಬುದನ್ನು ಪ್ರಚಾರ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಕರ್ನಾಟಕದ ಏಕೀಕರಣವೂ ಸೇರಿದಂತೆ ಕನ್ನಡ, ಕನ್ನಡಿಗರು ಮತ್ತು ಕರ್ನಾಟಕದ ಪರವಾಗಿ ಕೆಲಸ ಮಾಡಿದ ಇತಿಹಾಸವಿರುವ ಸಾಹಿತ್ಯ ಪರಿಷತ್ತನ್ನು ಜೋಶಿ ದುಸ್ಥಿತಿಗೆ ತಳ್ಳಿದ್ದಾರೆ ಎಂದು ದೂರಿದರು.

ದಲಿತರು ಮತ್ತು ಮುಸ್ಲಿಮರನ್ನು ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ದೂರವಿಡಲಾಗಿದೆ. ಅದಕ್ಕೆ ತಕ್ಷಣದ ಪ್ರತಿಕ್ರಿಯೆಯಾಗಿ ಜನಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಬೃಹತ್‌ ಸಮ್ಮೇಳನ ನಡೆಸಲಾಗುವುದು. ನಂತರ ಪ್ರತಿ ಜಿಲ್ಲೆಯಲ್ಲೂ ಸಮ್ಮೇಳನ ಆಯೋಜಿಸಲಾಗುವುದು. ಸಾಹಿತ್ಯ ಪರಿಷತ್ತು ತನ್ನ ಧೋರಣೆ ಬದಲಿಸದಿದ್ದರೆ ಪರ್ಯಾಯ ಸಂಸ್ಥೆ ಕಟ್ಟುವ ಕುರಿತು ತೀರ್ಮಾನಿಸಲಾಗುವುದು ಎಂದರು.

ಕರ್ನಾಟಕದ ಅನೇಕ ಭಾಷೆಗಳು ಅವಸಾನದ ಅಂಚಿನಲ್ಲಿವೆ. ತುಳು, ಕೊಡವ ಮತ್ತು ಬಂಜಾರ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆಯೂ ಬಾಕಿ ಇದೆ. ಈ ಯಾವ ವಿಚಾರಗಳ ಬಗ್ಗೆಯೂ ಸಾಹಿತ್ಯ ಪರಿಷತ್ತು ಧ್ವನಿ ಎತ್ತುತ್ತಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಬೇಕಿದ್ದ ಸಾಹಿತ್ಯ ಪರಿಷತ್ತು ಪತನಮುಖಿ ಸಂಸ್ಕೃತಿಯಲ್ಲಿ ಸಾಗುತ್ತಿದೆ ಎಂದು ಟೀಕಿಸಿದರು.

ಜನಸಾಹಿತ್ಯ ಸಮ್ಮೇಳನದ ಸಂಘಟನಾ ಸಮಿತಿಯ ಬೈರಪ್ಪ ಹರೀಶ್‌ ಕುಮಾರ್‌, ಮುನೀರ್‌ ಕಾಟಿಪಳ್ಳ, ನಜ್ಮಾ ನಝೀರ್‌ ಚಿಕ್ಕನೇರಳೆ ಮತ್ತು ವಿಜಯಾಕುಮಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT