ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಕುಂಬಿ ಅಭಯಾರಣ್ಯದಲ್ಲಿ ಅಕ್ರಮ ಗಣಿಗಾರಿಕೆ: ಕಂಡೂ ಕಾಣದಂತೆ ಕುಳಿತ ಅಧಿಕಾರಿಗಳು

ಆತಂಕದಲ್ಲಿ ವನ್ಯಜೀವಿಗಳು
Last Updated 2 ಜೂನ್ 2022, 19:30 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಕಣಕುಂಬಿ ಅರಣ್ಯ ವ್ಯಾಪ್ತಿಯ ಸಂರಕ್ಷಿತ ಅಭಯಾರಣ್ಯದಲ್ಲಿ ಮ್ಯಾಂಗನೀಸ್‌ ಅದಿರು ಹಾಗೂ ಇತರ ಖನಿಜಗಳ ಗಣಿಕಾರಿಕೆ ನಡೆದಿದ್ದು, ವನ್ಯಜೀವಿಗಳಿಗೆ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.

ದಟ್ಟ ಅರಣ್ಯದಿಂದ ಸುತ್ತುವರಿದ ಅಮಟೆ, ತೋರಾಳಿ, ಕಾಲಮನಿ, ದೇವಾಚಿಹಟ್ಟಿ ಗ್ರಾಮಗಳ ಸುತ್ತ ಹಲವು ತಿಂಗಳಿಂದ ಗಣಿಗಾರಿಕೆ ನಡೆದಿದೆ. ಇದನ್ನು ನಿಲ್ಲಿಸಬೇಕು ಎಂದು ಸಾಕಷ್ಟು ಬಾರಿ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡದರೂ ಅಧಿಕಾರಿಗಳು ಕಿವಿಗೊಟ್ಟಿಲ್ಲ ಎನ್ನುವುದು ಪರಿಸರವಾದಿಗಳು ದೂರು.

ದೊಡ್ಡ ಯಂತ್ರಗಳಿಂದ ಕೃಷಿ ಭೂಮಿಯನ್ನು ಅಗೆದು ಕೆಳಭಾಗದಲ್ಲಿ ಸಿಗುವ ಮ್ಯಾಂಗನೀಸ್‌ ಮತ್ತಿತರ ಖನಿಜ ಸತ್ವವುಳ್ಳ ಮಣ್ಣನ್ನು ಸಾಗಿಸುವ ದಂಧೆ ಅವ್ಯಾಹತವಾಗಿ ನಡೆದಿದೆ. ರಾತ್ರಿ 10ರ ನಂತರ ಯಂತ್ರಗಳನ್ನು ಬಳಸಿ ಭೂಮಿ ಅಗೆಯಲಾಗುತ್ತಿದೆ. ಸತ್ವಯುತ ಮಣ್ಣನ್ನು ಟಿಪ್ಪರ್ ಮತ್ತು ಲಾರಿಗಳಲ್ಲಿ ತುಂಬಿ ನಿರಂತರವಾಗಿ ಸಾಗಿಸಲಾತ್ತಿದೆ. ಆದರೆ, ಹಗಲಿನಲ್ಲಿ ಗಣಿಗಾರಿಕೆಯ ಅನುಮಾನ ಬರದಂತೆ ಎಲ್ಲ ಕೆಲಸಗಳನ್ನು ನಿಲ್ಲಿಸಲಾಗುತ್ತದೆ.

‘ಭಾರಿ ವಾಹನಗಳು ಹಾಗೂ ಯಂತ್ರಗಳ ಸದ್ದು ಪ್ರಾಣಿ, ಪಕ್ಷಿಗಳನ್ನು ಬೆಚ್ಚಿ ಬೀಳಿಸಿದೆ. ಗ್ರಾಮದ ಸುತ್ತ ಶಬ್ದ ಮಾಲಿನ್ಯ ಉಂಟಾಗಿ, ಜನ ನಿದ್ದೆಗೆಡುವಂತಾಗಿದೆ. ಲಾರಿಗಳ ಓಡಾಟದಿಂದ ರಸ್ತೆಗಳು ಎಲ್ಲೆಂದರಲ್ಲಿ ಬಿರುಕು ಬಿಟ್ಟಿವೆ’ ಎಂದು ಗ್ರಾಮಸ್ಥರು ದೂರಿದರು.

‘ಕೆಲ ತಿಂಗಳ ಹಿಂದೆ ಅಮಟೆ ಗ್ರಾಮದಿಂದ ಐದು ಕಿ.ಮೀ ದೂರದ ತೋರಾಳಿ ಗ್ರಾಮದ ಬಳಿ, ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರು ಗಣಿಗಾರಿಕೆ ಆರಂಭಿಸಿದ್ದಾರೆ. ಈವರೆಗೆ ಅಪಾರ ಪ್ರಮಾಣದ ಮ್ಯಾಂಗನೀಸ್ ಅದಿರನ್ನು ಗೋವಾ ಮೂಲಕ ವಿದೇಶಕ್ಕೆ ಸಾಗಿಸಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಮೌನವಾಗಿದ್ದಾರೆ. ಸ್ಥಳೀಯರು ಕೂಡ ಪ್ರತಿಭಟಿಸುವ ಗೋಜಿಗೆ ಹೋಗಿಲ್ಲ’ ಎನ್ನುವುದು ಪರಿಸರ ಪ್ರಿಯರ ಅನಿಸಿಕೆ.

‘ವಿಷಯವನ್ನು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರರ ಗಮನಕ್ಕೆ ತರಲಾಗಿದೆ. ಆದರೂ ಗಣಿಗಾರಿಕೆ ನಿಂತಿಲ್ಲ’ ಎಂದು ತೋರಾಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಮಾಹಿತಿ ನೀಡಿದರು.

‘ಗಣಿ ಕೆಲಸಕ್ಕೆ ಆಯಾ ಗ್ರಾಮದ ಯುವಕರನ್ನೇ ಬಳಸಿಕೊಳ್ಳುವುದು, ಸ್ಥಳೀಯರ ಟ್ರ್ಯಾಕ್ಟರ್‌ಗಳನ್ನೇ ಬಾಡಿಗೆಗೆ ಪಡೆಯುವುದು ಈ ದಂಧೆಕೋರರು ಮಾಡಿದ ತಂತ್ರ. ಕೆಲಸ ಸಿಕ್ಕರೆ ಸಾಕು ಎಂದು ಯುವಕರು ಕೂಡ ಯಾವುದಕ್ಕೂ ಚಕಾರ ಎತ್ತುತ್ತಿಲ್ಲ’ ಎನ್ನುವುದು ಅವರ ಹೇಳಿಕೆ.

‘ಅಮಟೆ ಸುತ್ತಮುತ್ತ ಗುರುವಾರ ಕೂಡ ಗಣಿಗಾರಿಕೆ ನಡೆದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಹಾಗೂ ವಿಶೇಷ ತನಿಖಾ ದಳದವರೂ ಇದನ್ನು ಕಣ್ಣೆತ್ತಿ ನೋಡಲು ಸಿದ್ಧರಿಲ್ಲ. ಸಹಜವಾಗಿಯೇ ಇದು ಎಲ್ಲರ ಮೇಲೂ ಅನುಮಾನ ಮೂಡುವಂತೆ ಮಾಡಿದೆ’ ಎನ್ನುವುದು ಪರಿಸರವಾದಿಗಳ ಆರೋಪ.

ವರದಿ ನೀಡಲು ತಹಶೀಲ್ದಾರ್‌ ಸೂಚನೆ

‘ಖಾನಾಪುರ ತಾಲ್ಲೂಕಿನ ಅಮಟೆ ಗ್ರಾಮದ ಸರ್ವೆ ನಂಬರ್‌ 12 ಮತ್ತು 27ರಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗೆ ಸೂಚಿಸಿದ್ದೇನೆ’ ಎಂದು ತಹಶೀಲ್ದಾರ್‌ ಪ್ರವೀಣ ಜೈನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಗಣಿಗಾರಿಕೆ ನಡೆದಿರಲಿಲ್ಲ. ಭೂ ವಿಜ್ಞಾನಿಗಳಿಂದ ಇದುವರೆಗೆ ನನಗೆ ವರದಿಯೂ ಬಂದಿಲ್ಲ. ವರದಿ ಬಂದ ಕೂಡಲೇ ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT