ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ: ಸುಮಲತಾ ಭೇಟಿ ಬಳಿಕ ಮುರುಗೇಶ್‌ ನಿರಾಣಿ

Last Updated 12 ಜುಲೈ 2021, 20:12 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದರೆ ಅಂತಹವರನ್ನು ಅಮಾನತುಗೊಳಿಸಲಾಗುವುದು. ಗಣಿ ನಡೆಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

ಸೋಮವಾರ ತಮ್ಮ ನಿವಾಸದಲ್ಲಿ ಸಂಸದೆ ಸುಮಲತಾ ಅಂಬರೀಷ್‌ ಅವರ ಭೇಟಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಇದೇ ವಾರ ಮಂಡ್ಯ ಜಿಲ್ಲೆಯ ಗಣಿಗಾರಿಕೆ ನಡೆಯುವ ಪ್ರದೇಶಗಳಿಗೆ ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಮತ್ತು ಮಾಧ್ಯಮದವರ ಜತೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಈ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದರೆ ಸ್ಥಳದಲ್ಲೇ ಅಮಾನತು ಮಾಡುತ್ತೇನೆ' ಎಂದರು.

‘ಫೆಬ್ರುವರಿ 22 ರಂದು ಮಂಡ್ಯ ಜಿಲ್ಲೆಯ ಗಣಿಗಾರಿಕೆ ಪ್ರದೇಶಗಳಿಗೆ ಸಂಸದರು ಮತ್ತು ಜನಪ್ರತಿನಿಧಿಗಳ ಜತೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಕಳೆದ ಮೂರು ತಿಂಗಳಿಂದ ಕೆ.ಆರ್‌.ಎಸ್‌ ಅಣೆಕಟ್ಟಿನ ಸುತ್ತಮುತ್ತ 15 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟಿಲ್ಲ' ಎಂದು ಸ್ಪಷ್ಟಪಡಿಸಿದರು.

‘ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತದೆ ಎಂದು ಸಂಸದರು ಗಮನಕ್ಕೆ ತಂದ ಕೂಡಲೇ ಖುದ್ದು ನಾನೇ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಆತಂಕ ಬೇಡ’ ಎಂದು ನಿರಾಣಿ ಹೇಳಿದರು.

‘ಮಂಡ್ಯ ಜಿಲ್ಲೆಯಲ್ಲಿ ಒಟ್ಟು 38 ಗಣಿಗಾರಿಕೆಗಳನ್ನು ನಿಲ್ಲಿಸಿದ್ದೇವೆ. ಜಿಲ್ಲಾಡಳಿತ ಹಾಗೂ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನೀಡಿರುವ ವರದಿ ಪ್ರಕಾರ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಗಣಿಗಾರಿಕೆ ನಡೆಯುತ್ತಿಲ್ಲ’ ಎಂದರು.

ಪುಣೆಯಲ್ಲಿ ಕೇಂದ್ರ ಜಲ ಮತ್ತು ಇಂಧನ ಸಂಶೋಧನಾ ಸಂಸ್ಥೆಯ ಮೂಲಕ ಕೆಆರ್‌ಎಸ್‌ ಅಣೆಕಟ್ಟಿನ ಸುತ್ತಮುತ್ತಲೂ ಪ್ರಾಯೋಗಿಕವಾಗಿ ಸ್ಫೋಟಕ ವಸ್ತುಗಳನ್ನು ಬಳಸುವ ಕುರಿತು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಎಷ್ಟು ಪ್ರಮಾಣದಲ್ಲಿ ಸ್ಫೋಟಕಗಳನ್ನು ಬಳಕೆ ಮಾಡಬಹುದು. ಇದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

‘ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡುವುದಿಲ್ಲ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT