ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಗಿರಣಿಗಳಲ್ಲೂ ಅಕ್ರಮ ನಡೆದಿಲ್ಲ: ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘ

ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಸ್ಪಷ್ಟನೆ
Last Updated 6 ಆಗಸ್ಟ್ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆ (ಎಂಎಸ್‌ಪಿ) ಅಡಿಯಲ್ಲಿ ಖರೀದಿಸಿದ್ದ ಭತ್ತವನ್ನು ದಾಸ್ತಾನು ಇರಿಸಿದ್ದ ಎಲ್ಲ ಅಕ್ಕಿ ಗಿರಣಿಗಳಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಕೆಲವೇ ಗಿರಣಿಗಳಲ್ಲಿ ನಡೆದಿರುವ ಅಕ್ರಮದ ಆಧಾರದಲ್ಲಿ ಸಾರ್ವತ್ರಿಕವಾಗಿ ಆರೋಪ ಮಾಡಲಾಗದು ಎಂದು ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘ ಹೇಳಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ರಾಜ್ಯ ಮಟ್ಟದ ತನಿಖಾ ದಳವು ಎಂಎಸ್‌ಪಿ ಭತ್ತ ಖರೀದಿ, ಹಲ್ಲಿಂಗ್‌ ಮತ್ತು ಅಕ್ಕಿ ಸಾಗಣೆ ಸಂಬಂಧ ತನಿಖೆ ನಡೆಸುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಘದ ಅಧ್ಯಕ್ಷ ಎಂ.ಎಸ್‌. ರಮೇಶ್‌, ‘ಸರ್ಕಾರ ಖರೀದಿ ಮಾಡಿಕೊಟ್ಟ ಭತ್ತವನ್ನು ಹಲ್ಲಿಂಗ್‌ ಮಾಡಿ ಅಕ್ಕಿ ಪೂರೈಸುವ ಕೆಲಸವನ್ನು ಹೆಚ್ಚಿನ ಅಕ್ಕಿ ಗಿರಣಿಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ನಿರ್ವಹಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪಾಂಡವಪುರದ ಎಂ.ಆರ್‌. ರೈಸ್‌ ಮಿಲ್‌ ಸೇರಿದಂತೆ ಕೆಲವು ಗಿರಣಿಗಳಲ್ಲಿ ಭತ್ತ ಅಥವಾ ಅಕ್ಕಿ ಸಾಗಣೆ ನಡೆದಿರಬಹುದು. ಆದರೆ, ಎಲ್ಲ ಗಿರಣಿಗಳಲ್ಲೂ ಆ ರೀತಿಯ ಚಟುವಟಿಕೆ ನಡೆದಿಲ್ಲ. ಅಕ್ಕಿ ಸಾಗಣೆಯಲ್ಲಿ ಗಿರಣಿ ಮಾಲೀಕರಿಗೆ ಯಾವುದೇ ಪಾತ್ರವೂ ಇರುವುದಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಸಾಗಣೆ ಗುತ್ತಿಗೆದಾರರು ಅಕ್ಕಿ ಸಾಗಣೆಗೆ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಎಂಎಸ್‌ಪಿ ಭತ್ತ ಖರೀದಿಗೂ ಮೊದಲು ಸರ್ಕಾರದ ಜತೆ ಮಾಡಿಕೊಂಡಿರುವ ಒಪ್ಪಂದದ ಅನುಸಾರ ಗಿರಣಿಗಳು ನಡೆದುಕೊಳ್ಳುತ್ತಿವೆ. ಈಗ ಹೆಚ್ಚುವರಿ ಷರತ್ತುಗಳನ್ನು ವಿಧಿಸುತ್ತಿರುವುದು ಸರಿಯಲ್ಲ. ಗಿರಣಿ ಮಾಲೀಕರು ತಮ್ಮ ಆಸ್ತಿಯನ್ನು ಅಡಮಾನವಿರಿಸಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಕ್ರಮ ಕಂಡುಬಂದಲ್ಲಿ ಆಸ್ತಿಯನ್ನು ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರಕ್ಕೆ ಇರುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT