ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಬಳಿಕ ಹೆಚ್ಚಿದ ಮಹಿಳಾ ದೌರ್ಜನ್ಯ ಪ್ರಕರಣಗಳು

ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲಿ 2,315 ದೂರುಗಳು ದಾಖಲು
Last Updated 5 ಮಾರ್ಚ್ 2021, 21:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಕಾಣಿಸಿಕೊಂಡ ಬಳಿಕ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ 2,315 ದೂರುಗಳು ಬಂದಿವೆ. ಅವುಗಳಲ್ಲಿ ಆಯೋಗವು 1,030 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ.

ಆಯೋಗದ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಕಾರಣ ಇಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೀಳಾ ನಾಯ್ಡು, ‘ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದಾಗಿ ಮಹಿಳೆಯರು ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆದಿದ್ದಾರೆ. ಇದರಿಂದಾಗಿ ಕೌಟುಂಬಿಕ ದೌರ್ಜನ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಸಂಬಂಧ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡಿದ್ದರು. ಸದ್ಯ 1,285 ಪ್ರಕರಣಗಳು ವಿಚಾರಣೆ ಸೇರಿದಂತೆ ವಿವಿಧ ಹಂತಗಳಲ್ಲಿವೆ. ಲಾಕ್‌ಡೌನ್ ಅವಧಿಯಲ್ಲಿ ಕೆಲ ಪ್ರಕರಣಗಳು ಬೆಳಕಿಗೆ ಬರದಿದ್ದರೂ ಮಾಧ್ಯಮಗಳ ನೆರವಿನಿಂದ 348 ದೂರುಗಳನ್ನು ಆಲಿಸಿ, ಪರಿಹಾರ ಕಲ್ಪಿಸಲಾಯಿತು. ಇ -ಮೇಲ್ ವಿಳಾಸಕ್ಕೆ 77 ದೂರು ಅರ್ಜಿಗಳು ಬಂದಿದ್ದವು. ಆ ಅರ್ಜಿಗಳಲ್ಲಿ ತಿಳಿಸಲಾಗಿದ್ದ ಸಮಸ್ಯೆಗಳಿಗೆ ಕೂಡ ಸ್ಪಂದಿಸಿದ್ದೇವೆ’ ಎಂದು ಅವರು ತಿಳಿಸಿದರು.

‘ಲಾಕ್‌ಡೌನ್ ಅವಧಿಯಲ್ಲಿ ಹಲವಾರು ಮಂದಿ ಕೆಲಸಗಳನ್ನು ಕಳೆದುಕೊಂಡರು. ಈ ಸಮಯದಲ್ಲಿ ಆರ್ಥಿಕ ಸಂಕಷ್ಟದ ಜತೆಗೆ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಕುಟುಂಬ ನಿರ್ವಹಿಸುವ ಸವಾಲುಗಳು ಕೂಡ ಅವರ ಮುಂದಿತ್ತು. ಇದರಿಂದ ಹಲವರು ಆತ್ಮಸ್ಥೈರ್ಯ ಕಳೆದುಕೊಂಡಿದ್ದರು. ಅಂತಹವರಿಗೆ ಧೈರ್ಯ ತುಂಬಿ, ಕೌನ್ಸೆಲಿಂಗ್ ಮಾಡಲಾಯಿತು. ಬಡ ಕುಟುಂಬಗಳ ಮಹಿಳೆಯರಿಗೆ ಔಷಧಗಳು, ಆಹಾರದ ಕಿಟ್‌ಗಳನ್ನು ಕೂಡ ಒದಗಿಸಿ
ದೆವು. ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಅಗತ್ಯ ಸಹಕಾರ ನೀಡಿದವು’ ಎಂದು ಅವರು ವಿವರಿಸಿದರು.

ಆ್ಯಪ್‌ ಅಭಿವೃದ್ಧಿ: ‘ದೂರು ಅರ್ಜಿಗಳನ್ನು ಇತ್ಯರ್ಥಗೊಳಿಸಲು ವಿವಿಧ ಇಲಾಖೆಗಳ ನೆರವು ಅತ್ಯಗತ್ಯ. ಅಪಹರಣ, ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಒತ್ತಾಯ ಪೂರ್ವಕವಾಗಿ ಹಿರಿಯ ನಾಗರಿಕರಿಂದ ಕುಟುಂಬದ ಸದಸ್ಯರು ಆಸ್ತಿ ಬರೆಸಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕೂಡ ನ್ಯಾಯ ಒದಗಿಸಿಕೊಡಲು ಶ್ರಮಿಸುತ್ತಿದ್ದೇವೆ. ಮರ್ಯಾದೆ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ. ಕಾಲ ಕಾಲಕ್ಕೆ ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳಿಗೆ ಸಹ ತಿದ್ದುಪಡಿಯಾಗಬೇಕು. ಮಹಿಳೆಯರ ದೂರುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT