ಭಾನುವಾರ, ನವೆಂಬರ್ 27, 2022
26 °C
ಬಾಗಲಕೋಟೆಯಲ್ಲಿ ಹಾರದ ಧ್ವಜ l ಧ್ವಜ ವಿರೂಪ –ಮೂವರ ವಶ

ರಾಜ್ಯದ ಉದ್ದಗಲಕ್ಕೂ ಸ್ವಾತಂತ್ರ್ಯ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಉದ್ದಗಲಕ್ಕೂ ಸೋಮವಾರ ಅಮೃತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮೇಳೈಸಿದ್ದು, ದೇಶಭಕ್ತಿ ಗೀತೆಗಳ ಗಾಯನ, ಪಥ ಸಂಚಲನ, ಬೃಹತ್‌ ತ್ರಿವರ್ಣ ಧ್ವಜಗಳ ಪ್ರಸ್ತುತಿ ಗಮನಸೆಳೆಯಿತು.

ಕೋಲಾರದಲ್ಲಿ ಹೆಲಿಕಾಪ್ಟರ್‌ ಬಳಸಿ ಧ್ವಜಕ್ಕೆ ಪುಷ್ಪವೃಷ್ಟಿ ಮಾಡಿದರೆ, ಹೆಚ್ಚಿನ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ಕಲಾ ತಂಡಗಳು ಮೆರುಗು ಹೆಚ್ಚಿಸಿದವು. ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು. 

ಹಾರದ ರಾಷ್ಟ್ರಧ್ವಜ (ಬಾಗಲಕೋಟೆ ವರದಿ): ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಧ್ವಜಕ್ಕೆ ಕಟ್ಟಿದ್ದ ಹಗ್ಗದ ಗಂಟು ಬಿಚ್ಚದೆ‌ ಧ್ಚಜ ಹಾರಲಿಲ್ಲ.

ಹಲವಾರು ಬಾರಿ ಹಗ್ಗ ಎಳೆದರೂ ಧ್ವಜ ಬಿಚ್ಚಲಿಲ್ಲ. ಕೊನೆಗೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಧ್ವಜಕ್ಕೆ ಕಟ್ಟಿದ್ದ ಹಗ್ಗ ಸರಿಪಡಿಸಿ ಮತ್ತೆ ಧ್ವಜ ಏರಿಸಲಾಯಿತು. ಸಚಿವರು ತಮ್ಮ ಭಾಷಣದಲ್ಲಿ ನೆಹರೂ ಸೇವೆ ಸ್ಮರಿಸಿದರು. 

ಪಥಸಂಚಲನ ಮೊಟಕು– ವಿದ್ಯಾರ್ಥಿಗಳ ಆಕ್ರೋಶ: (ಮಂಡ್ಯ ವರದಿ): ಸಚಿವ ಅಶೋಕ ಅವರ ಸೂಚನೆ ಮೇರೆಗೆ ಜಿಲ್ಲಾಡಳಿತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಥಸಂಚಲನ ಮೊಟಕುಗೊಳಿಸಲು ಸೂಚಿಸಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಯಿತು.

ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಬೇಕು ಎಂದು ಸಚಿವರು ಕಾರಣ ನೀಡಿದ್ದರು. ‘15 ದಿನದಿಂದ ತಾಲೀಮು ನಡೆಸಿದ್ದೇವೆ. ನಮ್ಮ ಶ್ರಮಕ್ಕೆ ಬೆಲೆ ಇಲ್ಲವೇ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

ಕೆರೆಯಲ್ಲಿ ರಾಷ್ಟ್ರ ಧ್ವಜಾರೋಹಣ (ಮಂಡ್ಯ ವರದಿ): ಕೆ.ಆರ್‌.ಪೇಟೆಯ ದೇವೀರಮ್ಮಣಿ ಕೆರೆ ಮಧ್ಯೆ ಗಂಗಾಪರಮೇಶ್ವರಿ ಮೀನುಗಾರಿಕೆ ಸಂಘದಿಂದ ಧ್ವಜಾರೋಹಣ ಮಾಡಲಾಯಿತು. ತಹಶೀಲ್ದಾರ್ ರೂಪಾ ತೆಪ್ಪದಲ್ಲಿ ತೆರಳಿ ವಂದನೆ ಸಲ್ಲಿಸಿದರು.

ತ್ರಿವರ್ಣ ಧ್ವಜ ವಿರೂಪ: ಮೂವರು ವಶಕ್ಕೆ
ಮಲೇಬೆನ್ನೂರು (ದಾವಣಗೆರೆ ಜಿಲ್ಲೆ): ಪಟ್ಟಣದ ಜಿಗಳಿ ವೃತ್ತದಲ್ಲಿ ಸೋಮವಾರ ತ್ರಿವರ್ಣ ಧ್ವಜವನ್ನು ವಿರೂಪಗೊಳಿಸಿ ಬೈಕ್‌ನಲ್ಲಿ ಮೆರವಣಿಗೆ ನಡೆಸಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಜಾಲತಾಣಗಳಲ್ಲಿ ಈ ಚಿತ್ರ ಹರಿದಾಡುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.  

ಕೋಲಾರ: ಬೃಹತ್ ಧ್ವಜ ಪ್ರದರ್ಶನ: ‌‌(ಕೋಲಾರ ವರದಿ): ದೇಶದಲ್ಲೇ ಅತಿ ದೊಡ್ಡದು ಎನ್ನಲಾದ 205x630 ಅಡಿ ವಿಸ್ತೀರ್ಣದ ತ್ರಿವರ್ಣಧ್ವಜವನ್ನು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರದರ್ಶಿಸಲಾಯಿತು. ಧ್ವಜಕ್ಕೆ ರಕ್ಷಣಾ ಪಡೆಯು ಹೆಲಿಕಾಪ್ಟರ್‌ ಮೂಲಕ ಎರಡು ಸುತ್ತು ಪುಷ್ಪವೃಷ್ಟಿಗರೆಯಿತು. 

ಧ್ವಜಕ್ಕೆ 12,800 ಮೀಟರ್ ಬಟ್ಟೆ ಬಳಸಿದ್ದು, 3,300 ಕೆ.ಜಿ ತೂಕ ಇದೆ. 1.29 ಲಕ್ಷ ಚದರ ಅಡಿ ವಿಸ್ತೀರ್ಣದ ಧ್ವಜದಲ್ಲಿನ ಅಶೋಕ ಚಕ್ರವೇ 3,600 ಚದರ ಅಡಿ ಇದೆ. ಏಳು ಮಂದಿ ಟೈಲರ್‌ಗಳು, 15 ಸಹಾಯಕರು ಇಬ್ಬರು ಕಲಾವಿದರ ನೆರವಿನಿಂದ ರೂಪಿಸಿದ್ದಾರೆ.

ಕ್ಲಾಕ್‌ ಟವರ್‌ನಲ್ಲಿ ಧ್ವಜಾರೋಹಣ: ಇನ್ನೊಂದೆಡೆ, ಕೆಲ ದಿನಗಳ ಹಿಂದೆ ಧ್ವಜಾರೋಹಣ ಸಂಬಂಧ ವಿವಾದಕ್ಕೆ ಕಾರಣವಾಗಿದ್ದ ಇಲ್ಲಿ ಬಿಗಿ ಭದ್ರತೆಯಲ್ಲಿ ಧ್ವಜಾರೋಹಣ ಮಾಡಲಾಯಿತು.

9 ಕಿ.ಮೀ. ಉದ್ದದ ಧ್ವಜ
ಕಲಘಟಗಿ (ಧಾರವಾಡ ಜಿಲ್ಲೆ): ಇಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ9 ಕಿ.ಮೀ. ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ಗಮನಸೆಳೆಯಿತು.

ಸಂತೋಷ ಲಾಡ್ ಪ್ರತಿಷ್ಠಾನ ಕಾರ್ಯಕ್ರಮ ಸಂಘಟಿಸಿದ್ದು, 12 ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಗೆ ಸಾಥ್‌ ನೀಡಿದರು.  

ಈ ಮೆರವಣಿಗೆಯು ಲಂಡನ್‌ನ ‘ವರ್ಲ್ಡ್ ಬುಕ್ ಆಫ್‌ ರೆಕಾರ್ಡ್ಸ್‌’ ದಾಖಲೆ ಸೇರಿದೆ. 9 ಸಾವಿರ ಮೀಟರ್‌ ಉದ್ದ, 9 ಅಡಿ ಅಗಲದ ತ್ರಿವರ್ಣ ಧ್ವಜವನ್ನು 50 ಸಾವಿರ ಜನ ಹಿಡಿದು ಸಾಗಿದರು ಎಂದು ಪ್ರತಿಷ್ಠಾನಕ್ಕೆ ನೀಡಿರುವ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.

ಎತ್ತರದ ಸ್ತಂಭದಲ್ಲಿ ಹಾರಿದ ಧ್ವಜ
ಹೊಸಪೇಟೆ (ವಿಜಯನಗರ): ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ನಿರ್ಮಿಸಿ, ತ್ರಿವರ್ಣ ಧ್ವಜಾರೋಹಣ ಮಾಡಿದ್ದು, ಈ ಮೂಲಕ ವಿಜಯನಗರ ಜಿಲ್ಲೆ ಹೊಸ ದಾಖಲೆ ಬರೆಯಿತು.

ಪ್ರವಾಸೋದ್ಯಮ ಇಲಾಖೆಯ ₹6 ಕೋಟಿ ಅನುದಾನದಲ್ಲಿ ಮುನ್ಸಿಪಲ್‌ ಮೈದಾನದಲ್ಲಿ ನಿರ್ಮಿಸಿದ್ದ 405 ಅಡಿ ಎತ್ತರದ ಸ್ತಂಭದಲ್ಲಿ 120X80 ಅಳತೆ ರಾಷ್ಟ್ರಧ್ವಜ ಹಾರಿತು.

ಬೆಳಿಗ್ಗೆ 5ಕ್ಕೆ ಪ್ರಾಯೋಗಿಕವಾಗಿ ಹಾರಿಸಿದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಚಿತ್ರದುರ್ಗದ ಜ್ಯೋತಿರಾಜ್‌ ಧ್ವಜಸ್ತಂಭದ ಒಳಗೆ 150 ಅಡಿ ಎತ್ತರ ಹೋಗಿ, ಗಂಟಿಕ್ಕಿಕೊಂಡಿದ್ದ ಹಗ್ಗ ಸರಿಪಡಿಸಿದ್ದು, ಬಳಿಕ ಧ್ವಜ ಹಾರಾಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು