ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ 14 ಹೊಸ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ

Last Updated 15 ಆಗಸ್ಟ್ 2021, 5:20 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ರಾಜ್ಯದ ವಿವಿಧ ಜನ ಸಮುದಾಯಗಳನ್ನು ಕೇಂದ್ರೀಕರಿಸಿದ 14 ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತಾನಡಿದ ಅವರು ಅಮೃತ ಮಹೋತ್ಸವದ ನೆನಪಿಗೆ ಹೊಸ‌ ಯೋಜನೆಗಳನ್ನು ಘೋಷಿಸಿದರು.

‘ಅಮೃತ ಗ್ರಾಮ ಪಂಚಾಯಿತಿ’ ಯೋಜ‌ನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಪ್ರತಿ ಮನೆಗೆ ಶುದ್ಧವಾದ ಕುಡಿಯುವ ನೀರಿನ ಪೂರೈಕೆ, ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು.

ಅಮೃತ ಗ್ರಾಮೀಣ ವಸತಿ ಯೋಜನೆಯಡಿ 750 ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ವಸತಿರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲಾಗುವುದು. ರೈತರು, ನೇಕಾರರು ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನರ ಮತ್ತು ಮಾರಾಟ ಉತ್ತೇಜಿಸಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರಾರಂಭಿಸಲಾಗುವುದು. ಪ್ರತಿ ಸಂಸ್ಥೆಗೆ ₹30 ಲಕ್ಷದಂತೆ ಒಟ್ಟು ₹225 ಕೋಟಿ ಮೂಲ ಬಂಡವಾಳವನ್ನು ಸರ್ಕಾರದಿಂದ ಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಅಮೃತ ನಿರ್ಮಲ ನಗರ ಯೋಜನೆಯಡಿ 75 ನಗರ ಸ್ಥಳೀಯ ಸಂಸ್ಥೆಗಳಲ್ಲು ಸ್ವಚ್ಛತೆ ಕಾಪಾಡಲು ಮತ್ತು ಸೌಂದರ್ಯ ವೃದ್ಧಿಗೆ ತಲಾ ₹ 1 ಕೋಟಿ ಒದಗಿಸಲಾಗುವುದು. ಅಮೃತ ಶಾಲಾ ಸೌಲಭ್ಯ ಯೋಜನೆಯಡಿ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ನಿರ್ಮಾಣಕ್ಕೆ ತಲಾ ₹10 ಲಕ್ಷದಂತೆ ಒಟ್ಟು ₹75 ಕೋಟಿ‌ ನೀಡಲಾಗುವುದು ಎಂದರು.

ಅಮೃತ ಅಂಗನವಾಡಿ ಕೇಂದ್ರಗಳ ನಿರ್ಮಾಣ ಯೋಜನೆಯಡಿ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ತಲಾ ₹ 1 ಲಕ್ಷ ಒದಗಿಸಲಾಗುತ್ತದೆ. 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸಲಾಗುವುದು‌ ಇದಕ್ಕಾಗಿ ಪ್ರತಿ ಗುಂಪಿಗೆ ತಲಾ ₹ 1 ಲಕ್ಷದಂತೆ ಒಟ್ಟು ₹75 ಕೋಟಿ ಮೂಲಧನ ಒದಗಿಸಲಾಗುವುದು ಎಂದು ಘೋಷಿಸಿದರು.

ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆಯಡಿ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ತಲಾ ₹20 ಲಕ್ಷದಂತೆ ₹150 ಕೋಟಿ ವೆಚ್ಚ ಮಾಡಲಾಗುವುದು. 75,000 ಯುವಕ ಯುವತಿಯರಿಗೆ ಅಮೃತ ಕೌಶಲ ತರಬೇತಿ ಯೋಜನೆ ಅಡಿಯಲ್ಲಿ ತರಬೇತಿ ನೀಡಲಾಗುವುದು. ಈ ಯೋಜನೆಗೆ ₹112 ಕೋಟಿ ವೆಚ್ಚವಾಗಲಿದೆ ಎಂದರು.

ಅಮೃತ ಕ್ರೀಡಾ ಪ್ರೋತ್ಸಾಹ ಯೋಜನೆಯಡಿ 76 ಕ್ರೀಡಾಪಟುಗಳನ್ನು ದತ್ತು ಪಡೆದುಕೊಂಡು ತರಬೇತಿ ನೀಡಲಾಗುವುದು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ 75 ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುವುದು. ಬೆಂಗಳೂರಿನ 75 ಕೊಳೆಗೇರಿಗಳ ಸುಧಾರಣೆ ಮತ್ತು 75 ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT