ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೌಶಲ ತರಬೇತಿ ಕೊಟ್ಟು ಉದ್ಯೋಗ ನೀಡಬೇಕು’–ಸಚಿವ ಶೆಟ್ಟರ್

ಕೈಗಾರಿಕಾ ನೀತಿಯಲ್ಲಿ ಸೇರ್ಪಡೆ: ಸಚಿವ ಶೆಟ್ಟರ್ ಹೇಳಿಕೆ
Last Updated 19 ಮಾರ್ಚ್ 2021, 20:24 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಗಳು ಮತ್ತು ಅದಕ್ಕಾಗಿ ರಸ್ತೆಗಳಂತಹ ಮೂಲಸೌಕರ್ಯಗಳಿಗೆ ಜಮೀನು ಬಿಟ್ಟುಕೊಡುವ ಕುಟುಂಬಗಳ ಸದಸ್ಯರಿಗೆ ಅಗತ್ಯವಿರುವ ಕೌಶಲ ತರಬೇತಿ ನೀಡಿಯೇ ಉದ್ಯೋಗ ಕಲ್ಪಿಸಬೇಕು ಎಂಬ ಅಂಶವನ್ನು ಕೈಗಾರಿಕಾ ನೀತಿಗೆ ಸೇರಿಸಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉದ್ಯಮಗಳು ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಉದ್ಯೋಗ ನೀಡದೇ ಇದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಮ್ಮ ಉದ್ಯಮಕ್ಕೆ ಅಗತ್ಯವಿರುವ ಕೌಶಲವಿಲ್ಲ ಎಂದು ತಿರಸ್ಕರಿಸುವ ಪ್ರಶ್ನೆಯೇ ಇಲ್ಲ. ಮೊದಲಿಗೆ ಅಂತಹ ಕೌಶಲದ ತರಬೇತಿ ನೀಡಬೇಕು. ಬಳಿಕ ಉದ್ಯೋಗ ನೀಡಬೇಕು ಎಂದು ಅವರು ಹೇಳಿದರು.

‘ಸಾಕಷ್ಟು ಕಂಪನಿಗಳು ಕೌಶಲ ಇಲ್ಲ ಎಂದು ಉದ್ಯೋಗ ನೀಡುತ್ತಿಲ್ಲ. ರೈತರ ಮೇಲೆ ಬಲ ಪ್ರಯೋಗ ಮಾಡುತ್ತಿದ್ದಾರೆ. ಕೈಗಾರಿಕಾ ಟೌನ್‌ಶಿಪ್‌ಗೆ ರಸ್ತೆ ನಿರ್ಮಿಸಲು ಭೂಮಿ ಕೊಟ್ಟವರಿಗೂ ಉದ್ಯೋಗ ನೀಡುತ್ತಿಲ್ಲ’ ಎಂದು ಯತೀಂದ್ರ ಗಮನ ಸೆಳೆದರು.

ರಸ್ತೆಗೆ ಭೂಮಿ ಕೊಟ್ಟಿದ್ದರೂ ಉದ್ಯಮಗಳು ಉದ್ಯೋಗ ನೀಡಬೇಕಾಗುತ್ತದೆ. ರಸ್ತೆ ಕೂಡಾ ಕೈಗಾರಿಕಾ ವಸಾಹತುವಿನ ಒಂದು ಭಾಗವಾಗಿದ್ದು, ನಿರಾಕರಿಸಲು ಸಾಧ್ಯವಿಲ್ಲ ಎಂದು ಶೆಟ್ಟರ್‌ ಹೇಳಿದರು.

ಯಾವುದೇ ಉದ್ಯಮವಾಗಲಿ ಕೌಶಲ ಕೊಟ್ಟೇ ಉದ್ಯೋಗ ಕೊಡಬೇಕು. ಕೈಗಾರಿಕಾ ಘಟಕ ಆರಂಭ ಆಗುವುದಕ್ಕೆ ಮೊದಲೇ ತರಬೇತಿ ನೀಡಬೇಕು. ಘಟಕ ಆರಂಭಕ್ಕೆ ಮೊದಲೇ ನೇಮಕಾತಿ ಮಾಡಬೇಕು. ಈ ವಿಷಯವನ್ನು ಕೈಗಾರಿಕಾ ನೀತಿಗೆ ಸೇರಿಸಬೇಕು ಎಂದು ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಏಷ್ಯನ್‌ ‌ಪೇಂಟ್ಸ್‌ ನಿದರ್ಶನ

ಮೈಸೂರು ಜಿಲ್ಲೆಯಲ್ಲಿ ಏಷ್ಯನ್‌ ಪೇಂಟ್ಸ್‌ ಭೂಮಿ ಬಿಟ್ಟುಕೊಟ್ಟವರಿಗೆ 70 ಜನರಿಗೆ ಉದ್ಯೋಗ ಕೊಡದಿದ್ದಾಗ, ಮುಂಬೈನಿಂದ ಕಂಪನಿಯವರನ್ನು ಕರೆಸಿದೆವು. ಮಾತುಕತೆ ನಡೆಸಿದ ಬಳಿಕ, 54 ಜನರಿಗೆ ಉದ್ಯೋಗ ನೀಡಿದರು. ಉಳಿದವರಿಗೆ ಉದ್ಯೋಗ ಕೊಡಿಸಲು ಕ್ರಮ ವಹಿಸಲಾಗಿದೆ. ಯಾರೇ ಆಗಲಿ ಷರತ್ತು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT