ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು: ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳು ಸಿಗುವುದೇ ಅಪರೂಪ

Last Updated 5 ಜೂನ್ 2022, 10:25 IST
ಅಕ್ಷರ ಗಾತ್ರ

ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳು ಸಿಗುವುದೇ ಅಪರೂಪ

ಗ್ರಾಮ ವಾಸ್ತವ್ಯ ಒಂದು ಕಡೆಯಿರಲಿ, ಕಂದಾಯ ಇಲಾಖೆಯ ಕೆಲ ದಾಖಲಾತಿಗಳ ಅಗತ್ಯಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳ ಅಥವಾ ಪಿಡಿಒ ಅಥವಾ ಕಾರ್ಯದರ್ಶಿ ಹತ್ತಿರ ಹೋದರೆ, ಅವರೇ ಪಂಚಾಯ್ತಿಯಲ್ಲಿ ಸಿಗುವುದು ಅಪರೂಪ. ಇನ್ನು ಕೆಲ ಗ್ರಾಮ ಒನ್ ಸಿಬ್ಬಂದಿಗೆ ಏಷ್ಟೋ ದಾಖಲೆಗಳ ಬಗ್ಗೆ ಸರಿಯಾದ ಮಾಹಿತಿಯೇ ಗೊತ್ತಿಲ್ಲ. ಅವರು ಮೀಟಿಂಗ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ. ಮೂಲದಲ್ಲೇ ಇಷ್ಟು ಸಮಸ್ಯೆ ಇದೆ. ಕರೆ ಮಾಡಿದರೆ ಸೇವೆ ತಲುಪುವುದು ದೂರದ ಬೆಟ್ಟದ ಹಾಗೇ ಅಲ್ಲದೆ ಮತ್ತಿನ್ನೇನು?


–ಬಸನಗೌಡ ಪಾಟೀಲ, ಯರಗುಪ್ಪಿ, ಧಾರವಾಡ

ಕಾಟಾಚಾರಕ್ಕೆ ಗ್ರಾಮ ವಾಸ್ತವ್ಯ

ಗ್ರಾಮ ವಾಸ್ತವ್ಯವನ್ನು ಕೇವಲ ಕಾಟಾಚಾರಕ್ಕೆ ಅನುಷ್ಠಾನಕ್ಕೆ ತಂದಂತೆ ಕಾಣುತ್ತಿದೆ. ಜನರನ್ನು ಓಲೈಸಲು ಇಂತಹ ಅಗ್ಗದ ಪ್ರಚಾರ ನಡೆಸಬಾರದು. ಆಯಾ ಇಲಾಖೆಗಳ ಮೂಲಕ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಿಂದಲೇ ಬಿಸಿ ಮುಟ್ಟಿಸಿದರೆ ಸಾರ್ವಜನಿಕರಿಗೆ ಯೋಗ್ಯ ಸೇವೆಗಳು ದೊರೆಯಲಿವೆ. ಸಚಿವರೇ ಗ್ರಾಮ ವಾಸ್ತವ್ಯ ಮಾಡಿದ ಎಷ್ಟೋ ಗ್ರಾಮಗಳು ಅಭಿವೃದ್ಧಿಯಾಗಿಲ್ಲ. ಇನ್ನು ಜಿಲ್ಲಾಧಿಕಾರಿ, ತಹಶೀಲ್ದಾರರ ಗ್ರಾಮ ವಾಸ್ತವ್ಯಕ್ಕೆ ಬೆಲೆಯಿಲ್ಲ. ಈ ನಿಟ್ಟಿನಲ್ಲಿ ಡ್ರಾಮಾ ಮಾಡದೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡಾಗ ಮಾತ್ರ ಪರಿಹಾರ ಸಾಧ್ಯ.

–ಮಹಾಂತೇಶ ರಾಜಗೋಳಿ, ಬೈಲಹೊಂಗಲ, ಬೆಳಗಾವಿ

ಮಾಧ್ಯಮ ಪ್ರಚಾರಕ್ಕೆ ಸೀಮಿತ

ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೆ ಮುಖ್ಯವಾಗಿ ಬೇಕಾಗಿರೋದು ಪ್ರಚಾರ. ಮಾಧ್ಯಮಗಳ ಮುಂದೆ ಆಶ್ವಾಸನೆ ನೀಡುತ್ತಾರೆ. ಆದರೆ ಅವುಗಳ ಅನುಷ್ಠಾನ ಆಗುವುದು ನೂರಕ್ಕೆ ಒಂದೆರಡು ಅಷ್ಟೆ. ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಮಾಡಿರುವುದು ಖುಷಿಯ ವಿಷಯ. ಆದರೆ ಇತ್ತೀಚಿಗೆ ಗ್ರಾಮ ವಾಸ್ತವ್ಯಗಳು ಮಾಧ್ಯಮ ಪ್ರಚಾರಕ್ಕಷ್ಟೆ ಸೀಮಿತವಾಗಿವೆ. ಅಲ್ಲಿ ಕೊಟ್ಟು ಬಂದ ಆಶ್ವಾಸನೆಗಳಿಗೆ ಪರಿಹಾರ ಸಿಗುವುದೇ ಕಡಿಮೆ. ಇದರ ಬಗ್ಗೆ ಬೆಳಕು ಚೆಲ್ಲಿದ ‘ಪ್ರಜಾವಾಣಿ’ಗೆ ಕೋಟಿ ನಮನಗಳು. ಇನ್ನಾದರೂ ಗ್ರಾಮ ವಾಸ್ತವ್ಯ ಮಾಡಿದ್ದ ಪ್ರದೇಶಗಳಿಗೆ ಸರಿಯಾದ ಪರಿಹಾರ ಸಿಗಲಿ ಎನ್ನುವುದೇ ನನ್ನ ಆಶಯ.

–ಸಂತೋಷ್.ಪಿ.ಶೆಟ್ಟಿ, ಕಾಕ್ಸ್ ಟೌನ್, ಬೆಂಗಳೂರು

ಗ್ರಾಮ ವಾಸ್ತವ್ಯ, ಪರಿಹಾರ ಶೂನ್ಯ

ಗ್ರಾಮ ವಾಸ್ತವ್ಯವು ಗ್ರಾಮೀಣ ಜನರ ಕುಂದುಕೊರತೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಕೆಲವು ತಾತ್ಕಾಲಿಕ ಕೆಲಸಗಳನ್ನು ಬಿಟ್ಟರೆ ದಶಕಗಳಿಂದ ಬಗೆಹರಿಯದ ಸಮಸ್ಯೆಗಳಿಗೆ ಪರಿಹಾರವಿಲ್ಲ. ಪಹಣಿ ದೋಷ, ಅಕ್ರಮ ಒತ್ತುವರಿ, ಜಲ ಪ್ರಳಯದ ಭೀತಿ, ಶಿಥಿಲ ಶಾಲಾ ಕಟ್ಟಡಗಳು, ವಿಧವಾ ಪಿಂಚಣಿಗಳಂತ ಸಮಸ್ಯೆಗಳಿಗೆ ಪರಿಹಾರ ಶೂನ್ಯ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳೇ ಅಧಿಕಾರಿಗಳಾಗಿದ್ದಾರೆ. ಭ್ರಷ್ಟಾಚಾರ ಅತಿಯಾಗಿದೆ. ಸರ್ಕಾರಿ ಕಾರ್ಯಕ್ರಮಗಳು ಪ್ರಚಾರಕ್ಕೆ ಸೀಮಿತವಾಗುತ್ತಿವೆ.

–ಎಂ.ಎಚ್.ಮೊಕಾಶಿ, ವಿಜಯಪುರ

ಗ್ರಾಮ ವಾಸ್ತವ್ಯ ನೈಜ ವಾಸ್ತವ್ಯವಾಗಲಿ

ಗ್ರಾಮೀಣ ಜನರಿಗೆ, ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡ ‘ನಮ್ಮ ನಡೆ ಹಳ್ಳಿಯ ಕಡೆಗೆ’ ಯೋಜನೆಯು ನಿಜಕ್ವಾಕೂ ವಾಸ್ತವ್ಯವಾಗಿಲ್ಲ. ಜನರ ಮೂಲ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಬೇಕು. ಸಮಸ್ಯೆಗಳು ಕೇವಲ ದಾಖಲೆಗಳಾಗಬಾರದು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಅಂದಾಗ ಗ್ರಾಮ ವಾಸ್ತವ್ಯಕ್ಕೆ ನಿಜವಾದ ಅರ್ಥ ಬರುತ್ತದೆ. ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸಗಳಾಬೇಕು.

ಸುನೀಲ್, ಸಂಶೋಧನಾರ್ಥಿ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT