ಅಂತರರಾಜ್ಯ ಪ್ರಯಾಣ ನಿಷೇಧಿಸಿಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ
ಬೆಂಗಳೂರು: ‘ಕರ್ನಾಟಕ ಮತ್ತು ಕೇರಳ ನಡುವಿನ ಅಂತರರಾಜ್ಯ ಪ್ರಯಾಣವನ್ನು ನಿಷೇಧಿಸಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಅಲ್ಲಿಂದ ಇಲ್ಲಿಗೆ ಬರುವವರು ಕಡ್ಡಾಯವಾಗಿ 72 ಗಂಟೆಗೂ ಹಳೆಯದಲ್ಲದ ಕೋವಿಡ್ ಆರ್ಟಿ–ಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ‘ಕರ್ನಾಟಕ ಸರ್ಕಾರವು ಕಠಿಣವಾದ ನಿರ್ಬಂಧವನ್ನು ವಿಧಿಸಿದ ಪರಿಣಾಮ ಇಲ್ಲಿಂದ ಅಲ್ಲಿಗೆ ತೆರಳುವ ವಿದ್ಯಾರ್ಥಿಗಳು, ರೋಗಿಗಳು ಹಾಗೂ ಅಗತ್ಯ ಸರಕುಗಳನ್ನು ಸಾಗಿಸುವ ವಾಹನಗಳು ಗಡಿಯಲ್ಲಿ ಸಮಸ್ಯೆ ಎದುರಿಸುತ್ತಿವೆ. ಅಂತರರಾಜ್ಯ ಪ್ರಯಾಣಕ್ಕೆ ನಿರ್ಬಂಧ ಹೇರಿರುವುದು ಕೇಂದ್ರ ಸರ್ಕಾರದ ಸೂಚನೆಗೆ ವಿರುದ್ಧವಾಗಿದೆ. ಈ ಸಂಬಂಧ ತಾವು ಮಧ್ಯಪ್ರವೇಶಿಸಿ, ಸಮಸ್ಯೆ ಬಗೆಹರಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸುಧಾಕರ್, ಹೋಟೆಲ್, ರೆಸಾರ್ಟ್, ಹಾಸ್ಟೆಲ್, ಹೋಂ ಸ್ಟೇಗಳು ಸೇರಿದಂತೆ ವಿವಿಧೆಡೆ ಕೇರಳದಿಂದ ಹಿಂದಿರುಗುವವರಿಗೆ ಪ್ರವೇಶ ನೀಡುವ ಮುನ್ನ ಕೋವಿಡ್ ನೆಗೆಟಿವ್ ವರದಿಯನ್ನು ಖಾತರಿಪಡಿಸಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಪ್ರಯಾಣಕ್ಕೂ ಮೊದಲಿನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್ ಆರ್ಟಿ–ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿದ್ದಲ್ಲಿ ಸಮಸ್ಯೆಯಾಗದು ಎಂದು ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿ ಸಹಿತ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.