ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಾಧಾರಿತ ಕಲಾಪಕ್ಕಾಗಿ ಆತ್ಮಾವಲೋಕನ ಸಭೆ

Last Updated 17 ಫೆಬ್ರುವರಿ 2021, 22:29 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಮಂಡಲ ಕಲಾಪದಲ್ಲಿ ಸಂಸದೀಯ ಮೌಲ್ಯಗಳ ಕುಸಿತ ತಡೆಯುವ ಉದ್ದೇಶದಿಂದ ಕಾಮನ್‌ವೆಲ್ತ್‌ ಸಂಸದೀಯ ಸಂಘದ ಸಹಭಾಗಿತ್ವದಲ್ಲಿ ಇದೇ 24ರಂದು ಆತ್ಮಾವಲೋಕನ ಸಭೆ ಆಯೋಜಿಸಲಾಗಿದೆ ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘ವಿಧಾನ ಮಂಡಲದ ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂಬುದು ಸಭೆಯ ಮುಖ್ಯ ಉದ್ದೇಶ. ವಿಧಾನಸಭೆಯ ಮಾಜಿ ಅಧ್ಯಕ್ಷರುಗಳು, ವಿಧಾನ ಪರಿಷತ್‌ನ ಮಾಜಿ ಸಭಾಪತಿಗಳು, ಪತ್ರಕರ್ತರು, ಬರಹಗಾರರು, ಚಿಂತಕರು ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗುವುದು’ ಎಂದರು.

ಇತ್ತೀಚಿನ ದಿನಗಳಲ್ಲಿ ವಿಧಾನಮಂಡಲ ಕಲಾಪದಲ್ಲಿ ಸಂಸದೀಯ ಮೌಲ್ಯಗಳ ಕುಸಿತ ಕಂಡುಬರುತ್ತಿದೆ. ಗಲಾಟೆ, ಗದ್ದಲ, ಧರಣಿ ಮತ್ತಿತರ ಕಾರಣಗಳಿಗಾಗಿ ಅಧಿವೇಶನ ಮೊಟಕುಗೊಳಿಸುತ್ತಿರುವುದು ಹೆಚ್ಚುತ್ತಿದೆ. ಮುಂದೆ ಅಂತಹ ಘಟನೆಗಳು ಮರುಕಳಿಸದಂತೆ ತಡೆಯುವ ದೃಷ್ಟಿಯಿಂದ ಆತ್ಮಾವಲೋಕನ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಕಲಾಪದಲ್ಲಿ ಸುಧಾರಣೆ ತರಲಾಗುವುದು ಎಂದು ತಿಳಿಸಿದರು.

‘ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ನಾನು ಚರ್ಚಿಸಿ ಈ ಸಭೆ ಆಯೋಜಿಸಿದ್ದೇವೆ. ಮಾಜಿ ಸ್ಪೀಕರ್‌ಗಳಾದ ಕೆ.ಆರ್‌. ಪೇಟೆ ಕೃಷ್ಣ, ಕಾಗೋಡು ತಿಮ್ಮಪ್ಪ, ಮಾಜಿ ಸಭಾಪತಿಗಳಾದ ಡಿ.ಎಚ್‌. ಶಂಕರಮೂರ್ತಿ, ಬಿ.ಎಲ್‌. ಶಂಕರ್‌, ವಿ.ಆರ್‌. ಸುದರ್ಶನ್‌, ಹೈಕೋರ್ಟ್‌ ನ್ಯಾಯಮೂರ್ತಿ ಫಣೀಂದ್ರ, ನಿವೃತ್ತ ನ್ಯಾಯಮೂರ್ತಿಗಳಾದ ಎ.ಜೆ. ಸದಾಶಿವ, ಎನ್‌. ಕುಮಾರ್‌, ಹಿರಿಯ ರಾಜಕಾರಣಿಗಳಾದ ಎಂ.ಸಿ. ನಾಣಯ್ಯ, ಪಿ.ಜಿ.ಆರ್‌. ಸಿಂಧ್ಯ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಕಾಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT