ಮಂಗಳವಾರ, ಜನವರಿ 19, 2021
21 °C

‘ವಿದ್ಯಾಗಮ’ ಪುನರ್‌ ಆರಂಭ ಸಾಧ್ಯವೇ: ಹೈಕೋರ್ಟ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಕಾರಣದಿಂದ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸಲು ಜಾರಿಗೆ ತಂದಿದ್ದ ‘ವಿದ್ಯಾಗಮ’ ಯೋಜನೆ  ಪುನರಾರಂಭಿಸಬಹುದೇ ಎಂಬ ಬಗ್ಗೆ ಹತ್ತು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬಡ ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕಾಗಿ ಲ್ಯಾಪ್‌ಟಾಪ್ ಸೇರಿ ಅಗತ್ಯ ಸಲಕರಣೆ ಒದಗಿಸಲು ಕೋರಿ ವಕೀಲ ಎ.ಎ.ಸಂಜೀವ್ ನರೇನ್ ಸಲ್ಲಿಸಿದ್ದ ಸಾರ್ವಜನಿಕ  ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಮತ್ತು ಎನ್.ಎಸ್. ಸಂಜಯ್‌ಗೌಡ ಅವರಿದ್ದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿತು.

‘ಕೋವಿಡ್‌ ಕಾರಣದಿಂದ ಸರ್ಕಾರದ ಬೊಕ್ಕಸ ಬರಿದಾಗಿದೆ. ಲ್ಯಾ‍ಪ್‌ಟಾಪ್ ವಿತರಣೆ ಕಷ್ಟ. ಕೋವಿಡ್‌ ಪ್ರಕರಣ ಹೆಚ್ಚಾಗಿದ್ದರಿಂದ ವಿದ್ಯಾಗಮ ಯೋಜನೆ ಸ್ಥಗಿತಗೊಳಿಸಲಾಗಿದೆ. ಚಂದನ ವಾಹಿನಿ ಮೂಲಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದೆ’ ಎಂದು ಸರ್ಕಾರದ ಪರ ವಕೀಲರು ವಿವರಿಸಿದರು.

ಸರ್ಕಾರಿ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ‘ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಾಂತ್ರಿಕ ಸೌಕರ್ಯ ಹೊಂದಿರದ ಮಕ್ಕಳಿಗೆ ಶಿಕ್ಷಣ ನೀಡಲು ರೂಪಿಸಿರುವ ವಿದ್ಯಾಗಮ ಯೋಜನೆಯನ್ನು ಪುನಾರಾಂಭಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ’ ಎಂದು ಸೂಚಿಸಿತು.‘ಬಡ ವಿದ್ಯಾರ್ಥಿಗಳಿಗೆ ಲ್ಯಾ‍ಪ್‌ಟಾಪ್ ಒದಗಿಸಲು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್‌) ಪಡೆಯಬಹುದು’ ಎಂಬ ಸಲಹೆಯನ್ನು ಪೀಠ ನೀಡಿತು. ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು