ಬುಧವಾರ, ಆಗಸ್ಟ್ 10, 2022
24 °C
ಬಿಬಿಎಂಪಿ ಹಾಸಿಗೆ ಲಭ್ಯತೆ ಶೂನ್ಯಕ್ಕಿಳಿದಿದ್ದು ನಿಜವೇ?

ಬಿಬಿಎಂಪಿ ಹಾಸಿಗೆ: ಸುಳ್ಳು ಮಾಹಿತಿ ಟ್ವೀಟ್‌ ಮಾಡಿದರೇ ತೇಜಸ್ವಿ ಸೂರ್ಯ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸರ್ಕಾರಿ ಕೋಟಾ ಮೂಲಕ ಹಂಚಿಕೆ ಮಾಡುವ ಹಾಸಿಗೆಗಳ ಲಭ್ಯತೆ ಸಂಖ್ಯೆ ಶೂನ್ಯ ಎಂದು ಬಿಬಿಎಂಪಿ ವೆಬ್‌ಸೈಟ್‌ ಇಂದು ಮಧ್ಯಾಹ್ನ ತೋರಿಸಿತ್ತು. ಈಗ ಅದು 1504 ಹಾಸಿಗೆಗಳು ಲಭ್ಯ ಎಂದು ತೋರಿಸುತ್ತಿದೆ. ವ್ಯವಸ್ಥೆ ಸುಧಾರಣೆ ಆಗುತ್ತಿದೆ...’

ಇದು ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಾಡಿದ್ದ ಟ್ವೀಟ್‌. ಕೋವಿಡ್‌ ರೋಗಿಗಳಿಗೆ ಬಿಬಿಎಂಪಿ ಮೂಲಕ ಹಂಚಿಕೆ ಮಾಡುವ ದಂಧೆ ಬಯಲಿಗೆ ಎಳೆದ ಬಳಿಕ ವ್ಯವಸ್ಥೆ ಸುಧಾರಣೆ ಆಗಿದೆ ಎಂದು ತೋರಿಸಲು ಅವರು ಟ್ವೀಟ್‌ ಮಾಡಿದ್ದರು. ಕೋವಿಡ್‌ ರೋಗಿಗಳಿಗೆ ಸರ್ಕಾರಿ ಕೋಟಾದಲ್ಲಿ ಹಂಚಿಕೆ ಮಾಡಲು ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಆಸ್ಪತ್ರೆ, ಖಾಸಗಿ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಸರ್ಕಾರದ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಂಚಿಕೆಗೆ ಲಭ್ಯ ಇರುವ ಹಾಸಿಗೆಗಳ ವಿವರವನ್ನೂ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದರು.

ಅವರು ಬಿಬಿಎಂಪಿಯ ಹಾಸಿಗೆ ಹಂಚಿಕೆ ದಂಧೆ ಬಯಲಿಗೆಳೆದ ಬಳಿಕ ಬಿಬಿಎಂಪಿ ಪೋರ್ಟಲ್‌ನಲ್ಲಿ ಹಾಸಿಗೆ ಲಭ್ಯತೆ ಹೆಚ್ಚಳವಾಗುವ ಬದಲು ಕಡಿಮೆ ಆಗಿದೆ. ಮಂಗಳವಾರ ರಾತ್ರಿ 1,504 ಹಾಸಿಗೆಗಳು ಹಂಚಿಕೆಗೆ ಲಭ್ಯವಿದ್ದರೆ, ಮಧ್ಯಾಹ್ನದ ವೇಳೆ 2,015 ಹಾಸಿಗೆಗಳು ಹಂಚಿಕೆಗೆ ಲಭ್ಯ ಇದ್ದವು.

ವಾಸ್ತವದಲ್ಲಿ ಬಿಬಿಎಂಪಿಯು ಕೇಂದ್ರೀಕೃತ ಹಂಚಿಕೆ ವ್ಯವಸ್ಥೆಯ ತಂತ್ರಾಂಶದ ಮೂಲಕ ಹಂಚಿಕೆ ಮಾಡುವ ಹಾಸಿಗೆಗಳ ಸಂಖ್ಯೆ ಯಾವತ್ತೂ ಶೂನ್ಯಕ್ಕೆ ಇಳಿದಿಲ್ಲ. ಆದರೆ, ಐಸಿಯು, ವೆಂಟಿಲೇಟರ್‌ ಸೌಲಭ್ಯ ಇರುವ ಐಸಿಯು ಹಾಸಿಗೆಗಳ ಸಂಖ್ಯೆ ಶೂನ್ಯವಲ್ಲದಿದ್ದರೂ 10ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿದ ಉದಾಹರಣೆಗಳಿವೆ. ನಗರದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಇದೆ. ಆದರೆ, ತುರ್ತು ಅಗತ್ಯ ಇರುವುದು ಐಸಿಯು ಹಾಗೂ ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳದ್ದು. ಅವುಗಳ ಕೊರತೆ ಈಗಲೂ ತೀವ್ರವಾಗಿದೆ.

ಈ ಟ್ವೀಟ್‌ ಬಗ್ಗೆ ಪ್ರತಿಕ್ರಿಯೆ ಪಡೆಯಲು ತೇಜಸ್ವಿಸೂರ್ಯ ಅವರಿಗೆ (ಅವರು ಚುನಾವಣೆಯ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ನಮೂದಿಸಿದ್ದ ಮೊಬೈಲ್‌ ಸಂಖ್ಯೆ) ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಸಂದೇಶಕ್ಕೂ ಪ್ರತಿಕ್ರಿಯಿಸಲಿಲ್ಲ.

ಸಂಸದರ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಬಿಬಿಎಪಿಯ ಪೋರ್ಟಲ್‌ನಲ್ಲಿ ಯಾವತ್ತೂ ಒಟ್ಟು ಹಾಸಿಗೆಗಳ ಲಭ್ಯತೆ ಪ್ರಮಾಣ ಶೂನ್ಯ ಎಂದು ತೋರಿಸಿಲ್ಲ. ಆದರೆ, ಐಸಿಯು ಮತ್ತು ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳ ತೀವ್ರ ಕೊರತೆ ಇರುವುದು ನಿಜ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾಸಿಗೆ ಲಭ್ಯತೆ ಬಗ್ಗೆ ನಾನು ಆಗಾಗ ಟ್ವೀಟ್‌ ಮಾಡುತ್ತಿರುತ್ತೇನೆ. ಹಾಸಿಗೆ ಲಭ್ಯತೆ ಶೂನ್ಯಕ್ಕೆ ಇಳಿದಿತ್ತೇ ಎಂಬುದನ್ನು ಈ ಟ್ವೀಟ್‌ಗಳನ್ನು ನೋಡಿ ತಿಳಿಯಬಹುದು’ ಎಂದರು. 

ಹಾಸಿಗೆ ಲಭ್ಯತೆ ಕುರಿತು ಗೌರವ್ ಗುಪ್ತ ಅವರು ಮಂಗಳವಾರ ಮಧ್ಯಾಹ್ನ 11 ಗಂಟೆಗೆ ಮಾಡಿರುವ ಟ್ವೀಟ್‌ನಲ್ಲೂ ಒಟ್ಟು 2,015 ಹಾಸಿಗೆಗಳು ಹಂಚಿಕೆಗೆ ಲಭ್ಯ ಇವೆ ಎಂಬ ಮಾಹಿತಿ ಇತ್ತು.

‘ಈಗಲೂ ಸಿಗುತ್ತಿಲ್ಲ ಐಸಿಯು ಹಾಸಿಗೆ’

ಬಿಬಿಎಂಪಿ ಹಂಚಿಕೆ ಮಾಡುವ ಐಸಿಯು ಹಾಗೂ ವೆಂಟಿಲೇಟರ್‌ ಹಾಸಿಗೆಗಳು ಲಭಿಸದ ಕಾರಣ ತೀವ್ರ ಉಸಿರಾಟದ ಸಮಸ್ಯೆ ಹೊಂದಿರುವ ಕೋವಿಡ್‌ ರೋಗಿಗಳು ಬುಧವಾರವೂ ಸಮಸ್ಯೆ ಎದುರಿಸಿದರು.

ಎಲ್ಲಾದರೂ ಒಂದು ಐಸಿಯು ಹಾಸಿಗೆ ಒದಗಿಸಿ ಎಂದು ಕೋವಿಡ್‌ ರೋಗಿಗಳ ಬಂಧುಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಂಗಲಾಚಿದರು.

‘ಪತಿ ಲಿಂಗರಾಜು ಅವರ ರಕ್ತದ ಆಮ್ಲಜನಕದ ಮಟ್ಟ 86ಕ್ಕೆ ಇಳಿದಿದೆ. ಐಸಿಯು ಹಾಸಿಗೆಗಾಗಿ ಎಷ್ಟು ಅಲೆದರೂ ಸಿಗುತ್ತಿಲ್ಲ. ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ’ ಎಂದು ಟಿ.ದಾಸರಹಳ್ಳಿಯ ಶ್ರುತಿ ತಿಳಿಸಿದರು.

‘ಎಲ್ಲಾದರೂ ಒಂದು ಐಸಿಯು ಹಾಸಿಗೆ ವ್ಯವಸ್ಥೆ ಮಾಡಿಕೊಡಿ’ ಎಂದು ಮನವಿ ಮಾಡಿದರು.

‘ಹಾಸಿಗೆ ಒದಗಿಸಲು ನೆರವು ನೀಡುವುದಕ್ಕೂ ಭಯ’

‘ಕೋವಿಡ್‌ ವಾರ್‌ ರೂಂ ಮೂಲಕ ಹಾಸಿಗೆ ಹಂಚಿಕೆಯಲ್ಲಿ ಅವ್ಯವಹಾರ ನಡೆಯುತ್ತಿದೆ’ ಎಂದು ಆರೋಪಿಸಿದ್ದ ಸಂಸದ ತೇಜಸ್ವಿಸೂರ್ಯ, ‘ವಾರ್‌ ರೂಂ ಎಲ್ಲ ಸಿಬ್ಬಂದಿಯ ಫೋನ್‌ ಕರೆಗಳ ವಿವರ ಸಂಗ್ರಹಿಸಿ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದರು.

ಈ ಬೆಳವಣಿಗೆ ಬಳಿಕ, ತುರ್ತು ಅವಶ್ಯಕತೆ ಇರುವವರಿಗೂ ಹಾಸಿಗೆ ಒದಗಿಸಲು ನೆರವಾಗುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹಾಸಿಗೆ ಬೇಕಿದ್ದರೆ 1912 ಸಹಾಯವಾಣಿಗೆ ಕರೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ.

ತುರ್ತಾಗಿ ಐಸಿಯು ಹಾಸಿಗೆ ಅವಶ್ಯಕತೆ ಇರುವವರು ಬಿಬಿಎಂಪಿ ಸಹಾಯವಾಣಿ 1912ಗೆ ಕರೆ ಮಾಡಿದರೆ ಸಂಪರ್ಕವೇ ಸಿಗುತ್ತಿಲ್ಲ. ಐಸಿಯು ಹಾಸಿಗೆ ಒದಗಿಸಲು ಬಿಬಿಎಂಪಿ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು