ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ| ಕೊರಟಗೆರೆ ರೈತರಿಗೆ ₹32 ಲಕ್ಷ ಪರಿಹಾರ ನೀಡಲು ಅಸಾಧ್ಯ: ಮಾಧುಸ್ವಾಮಿ

ಎತ್ತಿನಹೊಳೆ ಯೋಜನೆ: ಸಚಿವ ಮಾಧುಸ್ವಾಮಿ ಉತ್ತರ
Last Updated 14 ಸೆಪ್ಟೆಂಬರ್ 2021, 19:39 IST
ಅಕ್ಷರ ಗಾತ್ರ

ಬೆಂಗಳೂರು: ಎತ್ತಿನಹೊಳೆ ಯೋಜನೆಯ ಬೈರಂಗೊಡ್ಲು ಜಲಾಶಯ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಡುವ ಕೊರಟಗೆರೆ ಕ್ಷೇತ್ರದ ಭೂಮಾಲೀಕರಿಗೆ ಎಕರೆಗೆ ₹32 ಲಕ್ಷ ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಜಿ.ಪರಮೇಶ್ವರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ‘ದೊಡ್ಡಬಳ್ಳಾಪುರ ತಾಲ್ಲೂಕಿನ ಭೂಮಾಲೀಕರಿಗೆ ನೀಡುವಷ್ಟೇ ಪರಿಹಾರವನ್ನು ನಮಗೂ ನೀಡಬೇಕು ಎಂದು ಕೊರಟಗೆರೆಯ ಜನರು ಒತ್ತಾಯ ಮಾಡುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಮಾರ್ಗಸೂಚಿ ದರ ಹೆಚ್ಚು ಇದೆ. ಕೊರಟಗೆರೆಯಲ್ಲಿ ಮಾರ್ಗಸೂಚಿ ದರ ಎಕರೆಗೆ ₹8 ಲಕ್ಷ ಇದೆ. ದೊಡ್ಡಬಳ್ಳಾಪುರದವರಿಗೆ ಕೊಟ್ಟಷ್ಟೇ ಪರಿಹಾರ ಕೊಟ್ಟರೆ ಎಕರೆಗೆ ₹32 ಲಕ್ಷ ಕೊಡಬೇಕಾಗುತ್ತದೆ. ಅಷ್ಟು ಪರಿಹಾರ ಕೊಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿ.ಪರಮೇಶ್ವರ, ‘2012ರಲ್ಲಿ ಯೋಜನಾ ಮೊತ್ತ ₹12,912 ಕೋಟಿ ಇತ್ತು. ಈಗ ಯೋಜನಾ ಮೊತ್ತ ₹23,251.66 ಕೋಟಿಗೆ ಹಿಗ್ಗಿದೆ. ಏಕರೂಪದ ಭೂ ಪರಿಹಾರ ನೀಡಿದರೆ ₹319 ಕೋಟಿ ಹೆಚ್ಚುವರಿ ವೆಚ್ಚ ಆಗಲಿದೆ’ ಎಂದರು. ‘ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ನೀವು ಸಹ ಸಚಿವ ಸಂಪುಟ ಉಪಸಮಿತಿಗೆ ಅಧ್ಯಕ್ಷರಾಗಿದ್ದೀರಿ. ನಿಮ್ಮ ಕಾಲದಲ್ಲೇ ಮೊತ್ತವನ್ನು ನಿಗದಿ ಮಾಡಬಹುದಿತ್ತಲ್ಲ’ ಎಂದು ಮಾಧುಸ್ವಾಮಿ ತಿರುಗೇಟು ನೀಡಿದರು. ಈ ವೇಳೆ ಪರಮೇಶ್ವರ– ಮಾಧುಸ್ವಾಮಿ ನಡುವೆ ವಾಕ್ಸಮರ ನಡೆಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ‘ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಸದ್ಯದಲ್ಲಿಯೇ ಸಭೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ಭೂಸ್ವಾಧೀನ ಮಾಡುವಾಗ ಏಕರೂಪ ದರ ನೀಡಬೇಕು ಎಂದು ಭೂಮಾಲೀಕರು ಒತ್ತಾಯಿಸಿದ್ದರಿಂದ ಕಾಮಗಾರಿಗೆ ಅಡೆತಡೆ ಉಂಟಾಗಿದೆ. ಇತ್ತೀಚೆಗೆ ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಭೇಟಿಕೊಟ್ಟು, ಭೂಸ್ವಾಧೀನವೂ ಸೇರಿದಂತೆ ಯೋಜನೆಯ ಅಡ್ಡಿ ಆತಂಕಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ. ನೀರು ಪೂರೈಕೆ ನಾಲೆ ನಿರ್ಮಾಣಕ್ಕೆ ಭೂಸ್ವಾಧೀನ ಆಗಬೇಕಿತ್ತು. ಆದರೆ, ಹಾಸನ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿರಲಿಲ್ಲ. ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಇದೀಗ ಭೂಸ್ವಾಧೀನ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. 10–15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದರು.

‘ಬೈರಗೊಂಡ್ಲು ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು 1.50 ಟಿಎಂಸಿ ಅಡಿಯಿಂದ 2 ಟಿಎಂಸಿ ಅಡಿಗೆ ಸೀಮಿತಗೊಳಿಸಲು ಪರ್ಯಾಯ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಅದಕ್ಕೆ ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ಒಪ್ಪಿಗೆ ಪಡೆಯಲಾಗಿದೆ. ಎತ್ತಿನಹೊಳೆ ಯೋಜನೆಯನ್ನು ಅನುದಾನದ ಲಭ್ಯತೆಯ ಆಧಾರದಲ್ಲಿ 2023ರ ಅಂತ್ಯಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ’ ಎಂದು ಹೇಳಿದರು.

ಎತ್ತಿನಹೊಳೆ| ಕೊರಟಗೆರೆ ರೈತರಿಗೆ ₹32 ಲಕ್ಷ ಪರಿಹಾರ ನೀಡಲು ಅಸಾಧ್ಯ: ಮಾಧುಸ್ವಾಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT