ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐ ಕಾರ್ಮಿಕರಿಂದ ಉಪವಾಸ ಸತ್ಯಾಗ್ರಹ

62 ದಿನ ಅಹೋರಾತ್ರಿ ಧರಣಿ ನಡೆಸಿದರೂ ಈಡೇರದ ಬೇಡಿಕೆ
Last Updated 31 ಜನವರಿ 2022, 17:12 IST
ಅಕ್ಷರ ಗಾತ್ರ

ಬೆಂಗಳೂರು: ‘ಐಟಿಐ ಆಡಳಿತ ಮಂಡಳಿಯು ಪ್ರಾದೇಶಿಕ ಕಾರ್ಮಿಕ ಆಯುಕ್ತರು ನೀಡಿರುವ ಸೂಚನೆ ಪಾಲಿಸಬೇಕು. ವಜಾಗೊಳಿಸಿರುವ 80 ಮಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು’ ಎಂದು ಒತ್ತಾಯಿಸಿ ಐಟಿಐ ಕಾರ್ಮಿಕರು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

‘ನಮ್ಮನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಿರುವಐಟಿಐಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಅದು 62ನೇ ದಿನಕ್ಕೆ ಕಾಲಿಟ್ಟಿದೆ. ಹೀಗಿದ್ದರೂ ಆಡಳಿತ ಮಂಡಳಿಯಿಂದ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿಲ್ಲ. ಹೀಗಾಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ’ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

‘ಐಟಿಐಲಿಮಿಟೆಡ್‌ಭಾರತದ ಮೊದಲ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ. ಸಂಘಟನೆ ಕಟ್ಟಿಕೊಂಡು ಆ ಮೂಲಕ ಕಾನೂನುಬದ್ಧ ಹಕ್ಕುಗಳಿಗೆ ಒತ್ತಾಯಿಸಿದ್ದಕ್ಕಾಗಿ ನಮ್ಮನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ಸುಮಾರು 5 ಹಾಗೂ 30 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದೇವೆ. ಹೀಗಿದ್ದರೂ ನಮ್ಮನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ’ ಎಂದು ದೂರಿದ್ದಾರೆ.

‘ಐಟಿಐಲಿಮಿಟೆಡ್‌, ಭಾರತದ ದೂರಸಂಪರ್ಕ ಹಾಗೂ ಸಂವಹನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸೂಕ್ಷ್ಮ ಹಾಗೂ ರಕ್ಷಣಾ ಸಂಬಂಧಿತ ಯೋಜನೆಗಳಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತದೆ. ವಜಾಗೊಂಡಿರುವ ಕಾರ್ಮಿಕರು ಈ ಯೋಜನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೋವಿಡ್‌ ಮೊದಲ ಅಲೆಯ ವೇಳೆ 3 ಸಾವಿರಕ್ಕೂ ಅಧಿಕ ವೆಂಟಿಲೇಟರ್‌ ಹಾಗೂ ಫೇಸ್‌ಶೀಲ್ಡ್‌ ತಯಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಸುದೀರ್ಘ ಸೇವೆ ಸಲ್ಲಿಸಿದ್ದರೂ ಅವರನ್ನು ‘ಗುತ್ತಿಗೆ ಕಾರ್ಮಿಕರು’ ಎಂದು ಬಿಂಬಿಸಲಾಗುತ್ತಿದೆ. ಅಗತ್ಯ ಮೂಲ ಸೌಕರ್ಯಗಳನ್ನು ನಿರಾಕರಿಸಲಾಗಿದೆ’ ಎಂದುಆಲ್‌ ಇಂಡಿಯಾ ಸೆಂಟ್ರಲ್ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ (ಎಐಸಿಸಿಟಿಯು) ರಾಜ್ಯ ಸಮಿತಿ ಸದಸ್ಯೆ ಮೈತ್ರೇಯಿ ಕೃಷ್ಣನ್‌ ಆರೋಪಿಸಿದ್ದಾರೆ.

‘ವಜಾಗೊಳಿಸಿರುವ ಎಲ್ಲಾ ಕಾರ್ಮಿಕರನ್ನೂ ಮರು ನೇಮಕ ಮಾಡಿಕೊಳ್ಳುವಂತೆಐಟಿಐಆಡಳಿತ ಮಂಡಳಿಗೆ ಪ್ರಾದೇಶಿಕ ಕಾರ್ಮಿಕ ಆಯುಕ್ತರು ಸೂಚನೆ ನೀಡಿದ್ದಾರೆ. ಸಂಘಟನೆ ಕಟ್ಟಿ ತಮ್ಮ ನ್ಯಾಯಬದ್ಧ ಹಕ್ಕುಗಳಿಗಾಗಿ ಹೋರಾಡುತ್ತಿರುವುದನ್ನು ಸಹಿಸದ ಆಡಳಿತ ಮಂಡಳಿ ಆಯುಕ್ತರ ಸೂಚನೆಗೂ ಮನ್ನಣೆ ನೀಡುತ್ತಿಲ್ಲ. ವಜಾಗೊಂಡಿರುವವರ ಪೈಕಿ ಬಹುತೇಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಲವು ಮಹಿಳೆಯರೂ ಇದ್ದಾರೆ. ವಜಾಗೊಂಡಿರುವವರ ಬದಲು ಹೊಸದಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಐಟಿಐ ಆಡಳಿತ ಮಂಡಳಿ ಮುಂದಾಗಿದೆ. ಇದು ಕಾನೂನು ಬಾಹಿರ ನಡೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT