ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಲ್ಲೂ ದೋಚುವ ಆಲೋಚನೆ: ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಕಳವಳ

Last Updated 18 ಮೇ 2021, 18:36 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಸೃಷ್ಟಿಸಿರುವ ಸನ್ನಿವೇಶವನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸನ್ನದ್ಧವಾಗಬೇಕಿದೆ. ಆದರೆ, ಇಂತಹ ಕಷ್ಟ ಕಾಲದಲ್ಲೂ ಎಷ್ಟು ಬಾಚುವುದು? ಎಷ್ಟು ದೋಚುವುದು? ಎಂಬುದಾಗಿ ಆಲೋಚಿಸುತ್ತಿದ್ದಾರೆ’ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಬಿಕ್ಕಟ್ಟು ಎದುರಿಸುವ ಕುರಿತಂತೆ ಜನಾಗ್ರಹ ಆಂದೋಲನ ಮಂಗಳವಾರ ಆಯೋಜಿಸಿದ್ದ ವಿವಿಧ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಮಾಜದ ಪ್ರಮುಖರ ಆನ್‌ಲೈನ್‌ ಸಭೆಯಲ್ಲಿ ‘ಕರ್ನಾಟಕ ಕೋವಿಡ್‌ ಸ್ವಯಂಸೇವಕರ ತಂಡ’ದ (ಕೆಸಿವಿಟಿ) ಹೆಲ್ಪ್‌ ಲಿಂಕ್‌ನ ‘ಬದುಕು ಉಳಿಸುವ ಧ್ಯೇಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಧರೆ ಹತ್ತಿ ಉರಿದೊಡೆ’ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಸ್ವಾಮೀಜಿ, ‘ಕೋವಿಡ್‌ನಿಂದ ವಿಶ್ವಕ್ಕೆ ಬೆಂಕಿಬಿದ್ದ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ನಿಭಾಯಿಸಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಚೆಲ್ಲಿವೆ. ಈ ಹೊತ್ತಿನಲ್ಲೂ ದೋಚಲು ಆಲೋಚಿಸುವುದಕ್ಕೆ ನಿಮಗೆ ನಾಚಿಕೆ ಆಗುವುದಿಲ್ಲವೆ ಎಂದು ನಾವು ಅವರನ್ನು ಪ್ರಶ್ನಿಸಬೇಕಿದೆ’ ಎಂದರು.

ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರು ಮತ್ತು ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರು, ಕಾರ್ಮಿಕರ ಕುಟುಂಬಗಳಿಗೆ ತಿಂಗಳಿಗೆ ₹ 5,000 ಪರಿಹಾರ ನೀಡಬೇಕು. ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ ಮತ್ತು ಉಚಿತ ಚಿಕಿತ್ಸೆ ನೀಡಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಕಡಿಮೆ ದರದಲ್ಲಿ ಒದಗಿಸಬೇಕು. ಶ್ರೀಮಂತರಿಗೆ ಶೇಕಡ 5ರಷ್ಟು ಹೆಚ್ಚಿನ ತೆರಿಗೆ ವಿಧಿಸಿ, ಆ ಹಣವನ್ನು ಕೋವಿಡ್‌ ಚಿಕಿತ್ಸೆಗೆ ಬಳಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಜನಾಗ್ರಹ ಆಂದೋಲನ ಕೈಗೊಂಡಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌, ಸಾಹಿತಿ ಬರಗೂರು ರಾಮಚಂದ್ರಪ್ಪ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಿಪಿಐ ಮುಖಂಡ ಡಾ.ಸಿದ್ದನಗೌಡ ಪಾಟೀಲ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಾವಳ್ಳಿ ಶಂಕರ್‌, ಲಕ್ಷ್ಮೀನಾರಾಯಣ ನಾಗವಾರ, ಡಿ.ಜಿ. ಸಾಗರ್‌, ಧಾರವಾಡದ ಸನಾ ಚಾರಿಟಬಲ್‌ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಅಶ್ರಫ್‌ ಅಲಿ ಬಶೀರ್‌ ಅಹಮ್ಮದ್, ವಿಜಯಪುರದ ಮಚಾದೋ ನಿರ್ದೇಶಕ ಫಾದರ್‌ ಟಿಯೋಲ್‌, ಜನಾಗ್ರಹ ಆಂದೋಲನದ ಕೆ.ಎಲ್. ಅಶೋಕ್ ಸೇರಿದಂತೆ ಹಲವರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT