ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದೇವ ಈಗ ಜಗತ್ತಿನ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆ

ಇನ್ಫೊಸಿಸ್‌ ಪ್ರತಿಷ್ಠಾನದ ಹೊಸ ಕಟ್ಟಡ ಸಂಕೀರ್ಣಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
Last Updated 17 ನವೆಂಬರ್ 2021, 21:40 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೊಸಿಸ್‌ ಪ್ರತಿಷ್ಠಾನವು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಿರ್ಮಿಸಿಕೊಟ್ಟಿರುವ350 ಹಾಸಿಗೆಗಳ ಹೊಸ ಕಟ್ಟಡ ಸಂಕೀರ್ಣಕ್ಕೆ ಬುಧವಾರ ಚಾಲನೆ ದೊರೆಯಿತು. ಇದರೊಂದಿಗೆ ಜಗತ್ತಿನ ಅತೀ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಿ ಜಯದೇವ ಹೊರಹೊಮ್ಮಿದೆ.

ನಗರದಲ್ಲಿನ ಆಸ್ಪತ್ರೆಯ ಹಳೆಯ ಕಟ್ಟಡವು 700 ಹಾಸಿಗೆಗಳನ್ನು ಹೊಂದಿವೆ. ಈಗ ಇಲ್ಲಿ ಒಟ್ಟು ಹಾಸಿಗೆಗಳ ಸಂಖ್ಯೆ 1,050ಕ್ಕೆ ಏರಿಕೆಯಾಗಿದೆ. ಹೃದ್ರೋಗ ಚಿಕಿತ್ಸೆಗೆ ಮೀಸಲಿರುವಗುಜರಾತ್‌ನ ಯು.ಎನ್‌.ಮೆಹ್ತಾ ಆಸ್ಪತ್ರೆಯು (ಸಾವಿರ ಹಾಸಿಗೆ) ಇಷ್ಟು ದಿನ ಜಗತ್ತಿನ ಅತಿ ದೊಡ್ಡ ಆಸ್ಪತ್ರೆಯಾಗಿತ್ತು. ಈಗ ಆ ಹಿರಿಮೆಗೆ ಜಯದೇವ ಹೃದ್ರೋಗ ಸಂಸ್ಥೆ ಭಾಜನವಾಗಿದೆ.

ನೂತನ ಕಟ್ಟಡ ಸಂಕೀರ್ಣವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕರ್ನಾಟಕವು ಪ್ರಗತಿಪರ ರಾಜ್ಯವಾಗಿದ್ದರೂ ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡಬೇಕಾಗಿದೆ. ಹಾಗಾಗಿ, ಸಮಗ್ರ ಆರೋಗ್ಯ ವಿಷನ್ (ಮುನ್ನೋಟ) ಸಿದ್ಧಪಡಿಸಲಾಗುತ್ತಿದೆ. ಈ ವರ್ಷ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮುಂದಿನ ವರ್ಷ ಕೇಂದ್ರ ಸರ್ಕಾರದ ಸಹಯೋಗದಲ್ಲಿ 250ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ’ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಹೃದ್ರೋಗ ಸಮಸ್ಯೆಗಳು ಹೆಚ್ಚಳವಾಗುತ್ತಿದೆ. ದೇಶದಲ್ಲಿ ವರದಿಯಾಗುತ್ತಿರುವ ಒಟ್ಟು ಸಾವಿನ ಪ್ರಕರಣಗಳಲ್ಲಿ ಶೇ 24 ರಷ್ಟು ಮರಣ ಪ್ರಕರಣಗಳು ಹೃದ್ರೋಗಕ್ಕೆ ಸಂಬಂಧಿಸಿದ್ದಾಗಿವೆ.ಆರೋಗ್ಯಯುತ ಜೀವನಕ್ಕೆ ಧೂಮಪಾನ, ಮದ್ಯಪಾನದಂತಹ ವ್ಯಸನದಿಂದ ದೂರವಿರಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು’ ಎಂದು ಹೇಳಿದರು.

ಎಲ್ಲರಿಗೂ ಚಿಕಿತ್ಸೆ: ಇನ್ಫೊಸಿಸ್ ‍ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ‘ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗುವುದು ಕಷ್ಟ. ಆದರೆ, ನಮ್ಮ ದೇಶದಲ್ಲಿ ಸರ್ಕಾರಿ ವ್ಯವಸ್ಥೆಯಡಿ ಎಲ್ಲರಿಗೂ ಸುಲಭವಾಗಿ ಚಿಕಿತ್ಸೆ ದೊರೆಯುತ್ತದೆ. ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೇ ಪ್ರತಿಷ್ಠಾನದ ಮೂಲಕ ನೀಡಲಾಗುತ್ತಿದೆ’ ಎಂದರು.

ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ‘ಸಮಾಜಕ್ಕೆ ಅಗತ್ಯವಿರುವ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ವಸತಿ ನೀಡಲು1996ರಲ್ಲಿ ಪ್ರತಿಷ್ಠಾನ ಪ್ರಾರಂಭಿಸಿ, ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಾಗತಿಕ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೃದ್ರೋಗ ಮರಣಗಳು ದೇಶದಲ್ಲಿ ವರದಿಯಾಗುತ್ತಿವೆ. ಹೃದಯ ಸಮಸ್ಯೆಗಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಇರುವುದು ನಮ್ಮ ಅದೃಷ್ಟ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಯುವ ಜನರಲ್ಲಿ ಹೃದಯ ಸಮಸ್ಯೆ’

‘ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6ರವರೆಗೆ ಪ್ರತಿ ಐದು ನಿಮಿಷಕ್ಕೆ ಒಬ್ಬ ರೋಗಿ ತುರ್ತು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿತ್ತು. ಇನ್ಫೊಸಿಸ್‌ ಫೌಂಡೇಷನ್‌ ಕೊಡುಗೆಯಾಗಿ ನೀಡುತ್ತಿರುವ ಈ ಆಸ್ಪತ್ರೆಯಿಂದ ಒತ್ತಡ ನಿವಾರಣೆಯಾಗಲಿದೆ. 105 ಹೃದ್ರೋಗ ತಜ್ಞರು, 50 ಶಸ್ತ್ರಚಿಕಿತ್ಸಕರು ಸಂಸ್ಥೆಯಲ್ಲಿದ್ದು, ವೈದ್ಯರ ಕೊರತೆಯಿಲ್ಲ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

‘ನಾಲ್ಕು ಅಂತಸ್ತಿನ ಹೊಸ ಕಟ್ಟಡದಲ್ಲಿ ಎರಡು ಕಾರ್ಡಿಯಾಕ್‌ ಕ್ಯಾಥ್‌ ಲ್ಯಾಬ್‌, ಎರಡು ಶಸ್ತ್ರಚಿಕಿತ್ಸೆಯ ಕೊಠಡಿಗಳು, ಒಂದು ಹೈಬ್ರಿಡ್‌ ಶಸ್ತ್ರಚಿಕಿತ್ಸೆ ಕೊಠಡಿ, 100 ಐಸಿಸಿ ಬೆಡ್‌ಗಳು, 250 ಸಾಮಾನ್ಯ ಹಾಸಿಗೆ ವ್ಯವಸ್ಥೆ ಇದೆ.20 ತಿಂಗಳಲ್ಲಿ ಕಟ್ಟಡದ ಕಾಮಗಾರಿ ಮುಗಿಸಲಾಗಿದೆ. ಸೋಮವಾರದಿಂದ ನೂತನ ಕಟ್ಟಡದಲ್ಲಿ ಸೇವೆ ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT