ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿತಪ್ಪಿಸುವ ‘ಸಿದ್ದ’ಕಲೆ ಅವರಿಗೆ ಸಿದ್ಧಿಸಿದೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಚಾಟಿ

Last Updated 25 ಸೆಪ್ಟೆಂಬರ್ 2021, 15:46 IST
ಅಕ್ಷರ ಗಾತ್ರ

ಬೆಂಗಳೂರು: ಜಾತಿಗಣತಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ನಡುವೆ ಮತ್ತೊಂದು ಸುತ್ತಿನ ವಾಗ್ವಾದ ಆರಂಭವಾಗಿದೆ.

‘ಕುಮಾರಸ್ವಾಮಿ ಅವರು ಜಾತಿ ಗಣತಿ ವರದಿಯನ್ನು ಸ್ವೀಕರಿಸಲಿಲ್ಲ. ಜಾತಿ ಗಣತಿ ಬಿಡುಗಡೆಗೆ ಅಂದಿನ ಸಚಿವ ಪುಟ್ಟರಂಗಶೆಟ್ಟಿ ಪ್ರಯತ್ನ ಮಾಡಿದ್ದರು. ಆದರೆ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಲಿಲ್ಲ. ಪುಟ್ಟರಂಗಶೆಟ್ಟಿಯವರನ್ನು ಕುಮಾರಸ್ವಾಮಿ ಹೆದರಿಸಿ ಬಿಟ್ಟಿದ್ದರು. ಇದನ್ನು ನಾನು ಹೇಳಿದರೆ ಕುಮಾರಸ್ವಾಮಿಗೆ ಕೋಪ ಬರುತ್ತೆ. ಸಿದ್ದರಾಮಯ್ಯ ಕೂತ್ಕೊಂಡು ಬರೆಸಿಬಿಟ್ಟಿದ್ದಾನೆ ಎನ್ನುತ್ತಾರೆ,’ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಹೇಳಿದ್ದರು.

ಸಿದ್ದರಾಮಯ್ಯ ಅವರ ಹೇಳಿಕೆ ಹಿನ್ನೆಲೆಯಲ್ಲಿ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಎಚ್‌.ಡಿ ಕುಮಾರಸ್ವಾಮಿ, ‘ಸುಳ್ಳನ್ನು ಪದೇಪದೆ ಹೇಳುತ್ತಾ ಜನರನ್ನು ದಾರಿತಪ್ಪಿಸುವ ʼಸಿದ್ದಕಲೆʼ ಅವರಿಗೆ ಚನ್ನಾಗಿ ಸಿದ್ಧಿಸಿದೆ ಎಂಬುದನ್ನು ನಾನು ಬಲ್ಲೆ. ‘ನಿತ್ಯವೂ ʼಸುಳ್ಳಿನ ಜಪʼ ಮಾಡುವುದೇ ಅವರಿಗೆ ನಿತ್ಯ ಕಾಯಕ. ಇದು ಸತ್ಯಕ್ಕೆ ಮತ್ತು ರಾಜ್ಯಕ್ಕೆ ಎಸಗುವ ಅಪಚಾರ ಹಾಗೂ ಶಾಂತ ಸಮಾಜವನ್ನು ಒಡೆಯುವ ಹುನ್ನಾರ,’ ಎಂದು ಎಚ್‌.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

‘ನಾನು ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಕಾಂತರಾಜು ಅವರ ವರದಿಯ ಬಗ್ಗೆ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ ಮತ್ತೂ ಚರ್ಚೆ ಮಾಡುವ ಧೈರ್ಯವನ್ನೇಕೆ ತೋರಲಿಲ್ಲ? ಹೀಗಾಗಿ ಕೋಪದ ಪ್ರಶ್ನೆ ಎಲ್ಲಿಂದ ಬರುತ್ತದೆ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ವರದಿಯಲ್ಲಿ ಸಹಿಯೇ ಇಲ್ಲ ಎಂದು ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಹೇಳಿಬಿಟ್ಟಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು, ಈಗ ಪ್ರತಿಪಕ್ಷ ನಾಯಕರೂ ಆಗಿರುವ ʼರಾಜಕೀಯ ಪಂಡಿತʼರಿಗೆ ಹೇಳಿಕೆ ನೀಡುವ ಮುನ್ನ ಆ ಬಗ್ಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು,’ ಎಂದು ಅವರು ಹೇಳಿದ್ದಾರೆ.

‘ಜಾತಿ ಗಣತಿ ವರದಿ ಬಗ್ಗೆ ಇಷ್ಟೆಲ್ಲ ಪ್ರೀತಿ-ಕಾಳಜಿ ತೋರುವ ಈ ಮಹಾನುಭಾವರು, ನಿನ್ನೆಯವರೆಗೂ ನಡೆದ ವಿಧಾನಮಂಡಲ ಕಲಾಪದಲ್ಲಿ ಏಕೆ ಆ ವಿಚಾರ ಪ್ರಸ್ತಾಪ ಮಾಡಲಿಲ್ಲ? ತಮ್ಮ ಪಕ್ಷದಲ್ಲೇ ತಮಗೆ ಬೀಳುತ್ತಿರುವ ಒಳ ಏಟುಗಳ ಹೊಡೆತ ತಾಳಲಾಗದೆ, ಅದೆಲ್ಲವನ್ನೂ ಮುಚ್ಚಿಟ್ಟುಕೊಳ್ಳಲು ಬಹಿರಂಗವಾಗಿ ಬೊಬ್ಬೆ ಹೊಡೆಯವುದು ಹತಾಶೆ ಮತ್ತು ರಾಜಕೀಯ ಅವಕಾಶವಾದಿತನವಷ್ಟೇ,‘ ಎಂದಿದ್ದಾರೆ.

‘ಇಂತಹ ಪ್ರಮುಖ ವರದಿಯನ್ನು ಸಲ್ಲಿಸಬೇಕಾದ್ದು ಮುಖ್ಯಮಂತ್ರಿಗಳಿಗೇ ವಿನಾ ಸಚಿವರಿಗಲ್ಲ. ಸುದೀರ್ಘ ರಾಜಕೀಯ ಅನುಭವ, ಸಂಸದೀಯ ಚೆರಿತ್ರೆ ಇದ್ದರಷ್ಟೇ ಸಾಲದು, ಕೊಂಚ ಸಾಮಾನ್ಯ ಜ್ಞಾನವೂ ಇರಲಿ. ಪದೇಪದೆ ʼಸಿದ್ದಹಸ್ತಿಕೆʼ ತೋರುವ ಪ್ರಯತ್ನ ಬೇಡ,‘ ಎಂದು ಸಲಹೆ ನೀಡಿದ್ದಾರೆ.

‘ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಮುನ್ನ ತಮ್ಮ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸಲಿ. ಸಮಾಜದ ಶಾಂತಿಗೆ ಕೊಳ್ಳಿ ಇಡುವ ದುಸ್ಸಾಹಸಕ್ಕೆ ಕೈಹಾಕಿದರೆ ಜನರೇ ಉತ್ತರ ಕೊಡುತ್ತಾರೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ವಿಕೃತ ಆನಂದ ಅನುಭವಿಸುವುದು ಹೇಯ. ಮುಗ್ಧ ಜನರಲ್ಲಿ ಜಾತಿಯ ವಿಷಬೀಜ ಭಿತ್ತುವುದು ರಾಜಕೀಯ ನಿಕೃಷ್ಟತೆಯ ಪರಮಾವಧಿ,‘ ಎಂದು ಅವರು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT