ಬುಧವಾರ, ಜುಲೈ 28, 2021
26 °C

ನಿಷ್ಕ್ರಿಯ ಪದಾಧಿಕಾರಿಗಳ ಬದಲಾವಣೆ: ಜೆಡಿಎಸ್ ಮುಖಂಡರಿಗೆ ಎಚ್‌ಡಿಕೆ ಎಚ್ಚರಿಕೆ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯೂ ಸೇರಿದಂತೆ ನಿರ್ಣಾಯಕ ಹೋರಾಟಕ್ಕೆ ಪಕ್ಷ ಸಜ್ಜಾಗುತ್ತಿದೆ. ನಿಷ್ಕ್ರಿಯವಾಗಿರುವ ಎಲ್ಲ ಪದಾಧಿಕಾರಿಗಳನ್ನೂ ಬದಲಾವಣೆ ಮಾಡಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪಕ್ಷ ಸಂಘಟನೆ ಕುರಿತು ಸತತ ಮೂರು ದಿನಗಳಿಂದ ಜಿಲ್ಲಾವಾರು ಮುಖಂಡರ ಸಭೆ ನಡೆಸುತ್ತಿರುವ ಅವರು, ಜೆಡಿಎಸ್‌ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಶನಿವಾರ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ– ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮುಖಂಡರ ಸಭೆ ನಡೆಸಿದರು.

ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸೆಮಿ ಫೈನಲ್‌ ಇದ್ದ ಹಾಗೆ. ನಂತರ ನಾವು ವಿಧಾನಸಭಾ ಚುನಾವಣೆಗೆ ಸಿದ್ಧರಾಗಬೇಕಿದೆ. ಕೇವಲ ‘ವಿಸಿಟಿಂಗ್‌ ಕಾರ್ಡ್‌’ಗಾಗಿ ಪದಾಧಿಕಾರಿಗಳು ನಮಗೆ ಬೇಡ. ಅಂತಹವರನ್ನು ಪದಾಧಿಕಾರಿಗಳ ಪಟ್ಟಿಯಿಂದ ಕಿತ್ತು ಹಾಕುತ್ತೇವೆ’ ಎಂದರು.

ಕನ್ನಡಿಗರ ಸರ್ಕಾರವನ್ನು ಕನ್ನಡಿಗರೇ ನಡೆಸಬೇಕು ಎಂಬ ಧ್ಯೇಯದೊಂದಿಗೆ ಜೆಡಿಎಸ್‌ ಚುನಾವಣಾ ಹೋರಾಟಕ್ಕೆ ಸಜ್ಜಾಗುತ್ತಿದೆ. ಬಿಬಿಎಂಪಿ ಚುನಾವಣೆಗೂ ಸಿದ್ಧತೆಗಳು ಆರಂಭವಾಗಿವೆ. ದೂರದೃಷ್ಟಿಯುಳ್ಳ ಐದು ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುವುದು ಎಂದು ಹೇಳಿದರು.

ಉಪ ಚುನಾವಣೆಗಳಲ್ಲಿ ಜೆಡಿಎಸ್‌ ಒಂದು ಸ್ಥಾನವನ್ನೂ ಗಳಿಸಿಲ್ಲ. ಅದನ್ನೇ ಮುಂದಿಟ್ಟುಕೊಂಡು ಜೆಡಿಎಸ್‌ ಕತೆ ಮುಗಿದಿದೆ ಎಂದು ಪ್ರಚಾರ ಮಾಡಿದರು. ಆದರೆ, ನಿಷ್ಠಾವಂತ ಕಾರ್ಯಕರ್ತರು ಪಕ್ಷ ಸಂಘಟಿಸಲು ಮುಂದಾಗಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುವುದು ಎಂದರು.

ಮಾತು ನಿಜವಾಯ್ತು: ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ರಾಜ್ಯಕ್ಕೆ ಬಂದಿರುವುದು ಮೇಕೆದಾಟು ಅಥವಾ ಮಹದಾಯಿ ಯೋಜನೆಗಳ ಕುರಿತು ಚರ್ಚಿಸಲು ಅಲ್ಲ ಎಂದು ತಾವು ಹೇಳಿದ್ದ ಮಾತು ನಿಜವಾಗಿದೆ. ಕೇಂದ್ರ ಸಚಿವರೇ ದೆಹಲಿಯಲ್ಲಿ ಅದನ್ನು ಖಚಿತಪಡಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

‘ಅಕ್ರಮ ಗಣಿಗಾರಿಕೆ ನಿಲ್ಲಲಿ’

‘ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನೂ ಸರ್ಕಾರ ನಿಲ್ಲಿಸಬೇಕು. ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ನಾನು ಮತ್ತು ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತೇವೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು