ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಮಂದಿರ ಕಾಯ್ದಿರಿಸಲು ಆನ್‌ಲೈನ್ ವ್ಯವಸ್ಥೆ

ಕನ್ನಡ ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಚಾಲನೆ
Last Updated 31 ಮಾರ್ಚ್ 2022, 17:49 IST
ಅಕ್ಷರ ಗಾತ್ರ

ಬೆಂಗಳೂರು: ರವೀಂದ್ರ ಕಲಾಕ್ಷೇತ್ರ, ನಯನ ಸಭಾಂಗಣ ಸೇರಿದಂತೆ ನಗರದ ವಿವಿಧ ಸರ್ಕಾರಿ ರಂಗಮಂದಿರಗಳನ್ನು ಕಾಯ್ದಿರಿಸುವ ಆನ್‌ಲೈನ್ ವ್ಯವಸ್ಥೆಗೆ ಗುರುವಾರ ಚಾಲನೆ ದೊರೆತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ವಿ. ಸುನೀಲ್ ಕುಮಾರ್, ‘ಸರ್ಕಾರಿ ರಂಗಮಂದಿರಗಳಕಾಯ್ದಿರಿಸುವಿಕೆಯಲ್ಲಿ ಪಾರದರ್ಶಕತೆ ತರಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ರಂಗಮಂದಿರಗಳ ಕಾಯ್ದಿರಿಸುವಿಕೆಗೆ ಸಾರ್ವಜನಿಕರಿಗೆಏ.1ರಿಂದ ಅವಕಾಶ ಕಲ್ಪಿಸಲಾಗಿದೆ.ಮೇ 1ರಿಂದ ದಿನಾಂಕ ನಿಗದಿಪಡಿಸಿ, ಹಣ ಪಾವತಿಸಬಹುದು’ ಎಂದು ತಿಳಿಸಿದರು.

‘ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ ನಿರ್ಬಂಧಿಸುವ ದಂಧೆ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಇಲಾಖೆಯ ವ್ಯಾಪ್ತಿಯ ಸಭಾಂಗಣಗಳನ್ನು ಕಾಯ್ದಿರಿಸಲು ಆನ್‍ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಭಾಂಗಣಗಳನ್ನು ಕಾಯ್ದಿರಿಸುವಲ್ಲಿ ಪ್ರಭಾವಿಗಳು ಹಾಗೂ ಮಧ್ಯವರ್ತಿಗಳ ಕೈವಾಡ ಹೆಚ್ಚಿದ್ದರಿಂದ ನಿಜವಾದ ರಂಗಾಸಕ್ತರು ಹಾಗೂ ಕಲಾ ತಂಡಗಳಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದರಿಂದ ವ್ಯವಸ್ಥೆ ಬದಲಾಯಿಸಲಾಗಿದೆ’ ಎಂದರು.

‘ಸರ್ಕಾರಿ ನಿಯಮಗಳ ಅನುಸಾರ ನಿಗದಿಯಾದ ಕಾರ್ಯಕ್ರಮ ನಿಂತಲ್ಲಿ ಹಣ ಹಿಂತಿರುಗಿಸುವ ಬದಲು, ಮತ್ತೊಂದು ದಿನಾಂಕ ಆಯ್ಕೆಗೆ ಅವಕಾಶ ನೀಡಲಾಗುವುದು.ಮೂರು ದಿನಗಳಿಗಿಂತಲೂ ಹೆಚ್ಚಿನ ಅವಧಿ ಸತತವಾಗಿ ಸಭಾಂಗಣ ಕಾಯ್ದಿರಿಸುವುದಕ್ಕೆ ಇನ್ನು ಮುಂದೆ ಅವಕಾಶ ಇರುವುದಿಲ್ಲ.ಮುಂದಿನ ದಿನಗಳಲ್ಲಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲ ಜಿಲ್ಲಾ ರಂಗಮಂದಿರಗಳಿಗೂ ಈ ಆನ್‍ಲೈನ್ ವ್ಯವ್ಥೆಯನ್ನೇ ಜಾರಿಗೊಳಿಸಲಾಗುವುದು’ ಎಂದು ಹೇಳಿದರು.

ಕಲಾವಿದರ ದತ್ತಾಂಶ ಸಂಗ್ರಹ: ‘ರಾಜ್ಯದಲ್ಲಿನ ಸಾಹಿತಿ, ಕಲಾವಿದರ ಕುರಿತಾದ ನಿಖರ ಮಾಹಿತಿ ಕನ್ನಡ ಮತ್ತು ಸಂಸ್ಕೃತಿಇಲಾಖೆಯಲ್ಲಿ ಇರಲಿಲ್ಲ. ಹೀಗಾಗಿ, ಇಲಾಖೆಯಿಂದ ಕಲಾವಿದರ ದತ್ತಾಂಶ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ.ದತ್ತಾಂಶ ಸಂಗ್ರಹಣೆಯ ಜಾಲತಾಣ ಏ.1ರಂದು ತೆರೆದುಕೊಳ್ಳಲಿದೆ. ದತ್ತಾಂಶ ಕಾರ್ಯ ಪೂರ್ಣಗೊಂಡ ನಂತರ ಗುರುತಿನ ಚೀಟಿ ನೀಡಲಾಗುವುದು. ಸಾಹಿತಿ, ಕಲಾವಿದರುಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

ರಂಗ ಮಂದಿರ ಕಾಯ್ದಿರಿಸುವಿಕೆವೆಬ್‌ಸೈಟ್: www.rangamandira.karnataka.gov.in

‘ರಂಗ ಮಂದಿರಗಳು ದುಬಾರಿಯಲ್ಲ’

‘ರವೀಂದ್ರ ಕಲಾಕ್ಷೇತ್ರ, ನಯನ ಸೇರಿದಂತೆ ವಿವಿಧ ಸರ್ಕಾರಿ ರಂಗಮಂದಿರಗಳ ಬಾಡಿಗೆಯನ್ನು ತೀರಾ ಹೆಚ್ಚಳ ಮಾಡಿಲ್ಲ. ರವೀಂದ್ರ ಕಲಾಕ್ಷೇತ್ರ ಅರ್ಧ ದಿನಕ್ಕೆ ₹ 12 ಸಾವಿರ, ಪೂರ್ತಿ ದಿನಕ್ಕೆ ₹ 24 ಸಾವಿರ ನಿಗದಿ ಮಾಡಲಾಗಿದೆ. ಇದರಲ್ಲಿ ₹ 5 ಸಾವಿರ ಠೇವಣಿಯನ್ನು ವಾಪಸ್ ನೀಡಲಾಗುವುದು. ನಿಗದಿತ ದರದಲ್ಲಿಯೇ ಜಿಎಸ್‍ಟಿ, ನಿರ್ವಹಣೆ ಶುಲ್ಕ ಎಲ್ಲವೂ ಸೇರಿಕೊಳ್ಳುತ್ತದೆ. ಖಾಸಗಿ ಸಭಾಂಗಣಗಳಿಗೆ ಹೋಲಿಸಿದರೆ ನಾವು ಮಾಡಿರುವುದು ಶೇ 10ರಿಂದ ಶೇ 20 ರಷ್ಟು ಮಾತ್ರ’ ಎಂದು ಸುನೀಲ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT