ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಹಂಪ. ನಾಗರಾಜಯ್ಯ ಅಧ್ಯಯನದ ಫಲ: ವಿಮರ್ಶಕ ಸಿ.ಎನ್‌.ರಾಮಚಂದ್ರನ್‌

ಕನ್ನಡ ಸಾಹಿತ್ಯ ಆರಂಭದ ಕಾಲಘಟ್ಟ ಮರುನಿಗದಿ
Last Updated 9 ಜುಲೈ 2022, 11:21 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಚರಿತ್ರೆಯ ಆರಂಭದ ಕಾಲಘಟ್ಟವನ್ನು ಮೂರು ಶತಮಾನಗಳು ಹಿಂದಕ್ಕೆ ಗುರುತಿಸಿದ ಕೀರ್ತಿ ಸಾಹಿತಿ ಹಂಪ. ನಾಗರಾಜಯ್ಯ ಅವರಿಗೆ ಸಲ್ಲುತ್ತದೆ ಎಂದು ವಿಮರ್ಶಕ ಸಿ.ಎನ್‌.ರಾಮಚಂದ್ರನ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಂಪನಾ ಅವರ ‘ಸ್ಪೆಕ್ಟ್ರಮ್‌ ಆಫ್‌ ಕ್ಲಾಸಿಕಲ್‌ ಲಿಟರೇಜರ್‌ ಇನ್‌ ಕರ್ನಾಟಕ’ ಇಂಗ್ಲಿಷ್‌ ಕೃತಿಯ ಪ್ರಥಮ ಸಂಪುಟ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇದುವರೆಗೂ 9ನೇ ಶತಮಾನವನ್ನು ಕನ್ನಡ ಸಾಹಿತ್ಯ ಚರಿತ್ರೆಯ ಆರಂಭ ಎಂದು ಗುರುತಿಸಲಾಗಿತ್ತು. ಕವಿರಾಜ ಮಾರ್ಗವೇ ಕನ್ನಡದ ಮೊದಲ ಕೃತಿ ಎಂದು ನಂಬಿದ್ದೆವು. ಹಂಪನಾ ಅವರು ಆಳ ಅಧ್ಯಯನ, ಅನುವಾದದ ಮೂಲಕ ಕನ್ನಡ ಸಾಹಿತ್ಯ ಚರಿತ್ರೆ ಆರಂಭವನ್ನು 6ನೇ ಶತಮಾನವೆಂದು ಖಚಿತಪಡಿಸಿದ್ದಾರೆ ಎಂದು ಕೃತಿಯ ಅಧ್ಯಯಗಳನ್ನು ಪ್ರಸ್ತುತಪಡಿಸಿದರು.

ಅವರು ಗುರುತಿಸಿದ ಕಾಲಘಟ್ಟವನ್ನು ವಿಶಿಷ್ಟವಾದ ವ್ಯಾಖ್ಯಾನಗಳ ಟೀಕಾಕಾರರ ಕಾಲವೆಂದು ತೀರ್ಮಾನಕ್ಕೆ ಬಂದಿದ್ದಾರೆ. ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆಯನ್ನು ಆರಾಧನಾ ಕರ್ನಾಟಕಾ ಟೀಕಾ ಎಂದು, ಅದರ ಕತೃ ಶಿವಾಕೋಟಾಚಾರ್ಯರಲ್ಲ ಬ್ರಾಜಿಷ್ಣು ಎಂದು ವಿಶ್ಲೇಷಿಸಿದ್ದಾರೆ. ಇಂತಹ ಅಧ್ಯಯನದ ಕೃತಿಗಳಲ್ಲಿ ಕಥನ ಪ್ರಭೇದ. ಆರಾಧನಾ ಕಥನ ಕೋಶ ಸೇರಿದಂತೆ ಹಲವು ಬಂದು ಹೋಗಿವೆ. ಆದರೆ, ಹಂಪನಾ ಅವರ ಐದು ಸಂಪುಟಗಳು ಕನ್ನಡ ಅಥವಾ ಇತರೆ ಇಂಗ್ಲಿಷ್ ಭಾಷಾಂತರದಲ್ಲಿ ಇದುವರೆಗೂ ಬಂದಿರಲಿಲ್ಲ ಎಂದು ವಿಶ್ಲೇಷಿಸಿದರು.

ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ, ‘ಸ್ಪೆಕ್ಟ್ರಮ್‌ ಆಫ್‌ ಕ್ಲಾಸಿಕಲ್‌ ಲಿಟರೇಜರ್‌ ಇನ್‌ ಕರ್ನಾಟಕ’ ಸಂಪುಟಗಳು
ಕನ್ನಡ ಅಷ್ಟೆ ಅಲ್ಲ, ಯೂರೋಪ್ ಸೇರಿದಂತೆ ಇತರೆ ಸಾಹಿತ್ಯ ಕ್ಷೇತ್ರದ ವಿದ್ವತ್ ಪರಂಪರೆಗೂ ಮಹತ್ವದ್ದಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಹುಭಾಷಿಕ ತಿಳಿವಳಿಕೆ ಬಳಸಿಕೊಂಡು ಕೃತಿ ರಚನೆ ಮಾಡಲಾಗಿದೆ. ಕನ್ನಡ ಸಾಹಿತ್ಯಕ್ಕೆ ಜೈನ್ಯ ಪರಂಪರೆ ಕೊಡುಗೆ, ಪ್ರಭತ್ವದ ಮುಂದಾಳತ್ವ ವಹಿಸಿದ್ದ ದೊರೆಯ ಒಳಗೊಳ್ಳುವಿಕೆ. ಆದರ್ಶ ಪ್ರಭುತ್ವ. ಧರ್ಮದ ಮಹತ್ವಗಳನ್ನು ಅರ್ಥೈಸಿದ್ದಾರೆ. ಸಂಸ್ಕೃತ ಆಚೆಗೆ ಬಿಟ್ಟು ಕನ್ನಡ. ಪ್ರಾಕೃತಿಕದ ಕಡೆ ಹೋಗುವುದು ಸುಲಭವಾಗಿರಲಿಲ್ಲ. ಅಂದು ದೈವ ತತ್ವ, ಪಠ್ಯಗಳೂ ಚಲಿಸುತ್ತಿದ್ದವು ಎನ್ನುವ ವಾಸ್ತವದ ಮೇಲೆ ಚರಿತ್ರೆಯ ಸತ್ಯಗಳು ತುಂಬಾ ಸರಳವಲ್ಲ ಎಂಬುದನ್ನು ನಿರೂಪಿಸಿದ್ದಾರೆ. ದಕ್ಷಿಣ ಏಷ್ಯಾದ ಸಾಹಿತ್ಯ ಚರ್ಚೆಯಲ್ಲಿ ಕನ್ನಡ ಬರಿ ಅಡಿ ಟಿಪ್ಪಣಿಯಾಗಿ ಉಳಿಯಬಾರದು ಎನ್ನುವ ಅಭಿಲಾಷೆಯನ್ನು ಕೃತಿಯ ಮೂಲಕ ಸಾಕಾರಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ಸಂ‍ಪುಟ ಮೂರು ಕುರಿತು ಡಾ.ಓ.ಎಲ್‌.ನಾಗಭೂಷಣಸ್ವಾಮಿ, ಕನ್ನಡದ ಮುಂದಿನ ಪೀಳಿಕೆ ಇಂಗ್ಲಿಷ್‌ ಮೂಲಕ ಕನ್ನಡ ಸಾಹಿತ್ಯ ಚರಿತ್ರೆ ತಿಳಿದುಕೊಳ್ಳಲು ಈ ಕೃತಿಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಸಂಪುಟ ನಾಲ್ಕು ಕುರಿತು ಡಾ.ಎಚ್‌.ವಿ.ನಾಗರಾಜ ರಾವ್‌, ಸಂಪುಟ ಐದರ ಕುರಿತು ಎಂ.ಜಿ.ಮಂಜುನಾಥ್‌ ಮಾತನಾಡಿದರು. ಸಾಹಿತಿ ಡಾ.ಎಚ್‌.ಎಸ್‌.ಶಿವಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಹಂ.ಪ.ನಾಗಾರಾಜಯ್ಯ, ಸ್ವಪ್ನ ಬುಕ್‌ ಹೌಸ್‌ನ ದೀಪಕ್ ಶಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT