ಶನಿವಾರ, ಸೆಪ್ಟೆಂಬರ್ 25, 2021
29 °C
ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಹೊಸ ಅಧಿಸೂಚನೆ

ಜುಲೈ ಎರಡನೇ ವಾರ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ: ಸುರೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಜುಲೈ ಎರಡನೇ ವಾರದಲ್ಲಿ ಪ್ರಕಟಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

‘ಈ ಫಲಿತಾಂಶದಿಂದ ಸಮಾಧಾನ ಇಲ್ಲದೇ ಇದ್ದರೆ, ಅಂಥ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಪಡೆಯಲು ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು’ ಎಂದರು.

‘ಸ್ಥಗಿತಗೊಂಡಿದ್ದ 2020–21ನೇ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಹೊಸ ಅಧಿಸೂಚನೆ ಬುಧವಾರ (ಜೂನ್‌ 30) ಪ್ರಕಟವಾಗಲಿದೆ. ಅಂದೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದೂ ಅವರು ತಿಳಿಸಿದರು.

‘ಈ ಬಾರಿ ವಲಯ, ಹೆಚ್ಚುವರಿ ವರ್ಗಾವಣೆ ಇರುವುದಿಲ್ಲ. ಈಗಾಗಲೇ 75 ಸಾವಿರ ಅರ್ಜಿ ಸ್ವೀಕಾರ ಆಗಿದೆ. ಅವರಿಗೆ ಮೊದಲು ಕೌನ್ಸೆಲಿಂಗ್‌ ಪ್ರಕಿಯೆ ಆರಂಭವಾಗಲಿದೆ. ಹೊಸತಾಗಿ ಅರ್ಜಿ ಸಲ್ಲಿಸಿದವರಿಗೆ ಎರಡನೇ ಹಂತದಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದರು.

‘ಶಾಲಾ ಆರಂಭದ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಎರಡು ದಿನಗಳ ಒಳಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು. ಜುಲೈ 1ರಿಂದ ಎಲ್ಲ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ ಆರಂಭವಾಗಲಿದೆ’ ಎಂದರು.

‘ಈ ಉದ್ದೇಶದಿಂದ ವಿಷಯ ಪರಿಣತರು, ತಾಂತ್ರಿಕ ಸಲಹೆ ಸಮಿತಿಯ ಸದಸ್ಯರು, ಮಕ್ಕಳ ತಜ್ಞರನ್ನು ಒಳಗೊಂಡ ಟಾಸ್ಕ್‌ ಫೋರ್ಸ್‌ (ಕಾರ್ಯಪಡೆ) ರಚಿಸಲಾಗುವುದ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು’ ಎಂದೂ ಹೇಳಿದರು.

‘ದೇವಿ ಶೆಟ್ಟಿ ನೇತೃತ್ವದ ಸಮಿತಿಯಲ್ಲಿರುವ ಶಿಫಾರಸ್ಸಿನಂತೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಜಿಲ್ಲಾ ಮಟ್ಟದಲ್ಲಿ ಯಾವ ರೀತಿ ಶಾಲೆ ಆರಂಭಿಸಲು ಕ್ರಮ ತೆಗದುಕೊಳ್ಳಬಹುದು ಎಂದು ಚರ್ಚೆ ಮಾಡುತ್ತೇವೆ. ಆಗಾಗ ಮೌಲ್ಯಾಂಕನ ನಡೆಸುವ ಬಗ್ಗೆಯೂ ಈ ಕಾರ್ಯಪಡೆ ತೀರ್ಮಾನಿಸಲಿದೆ’ ಎಂದರು.

ಇದನ್ನೂ ಓದಿ: ಜುಲೈ 19, 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ: ಸುರೇಶ್ ಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು