ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ತಂಟೆ: ನಿಲ್ಲದ ಜಟಾಪಟಿ

865 ಗ್ರಾಮಗಳನ್ನು ಸೇರಿಸಿಕೊಳ್ಳಲು ಬದ್ಧ ಎಂಬ ನಿರ್ಣಯ ಅಂಗೀಕರಿಸಿದ ಮಹಾರಾಷ್ಟ್ರ
Last Updated 28 ಡಿಸೆಂಬರ್ 2022, 0:24 IST
ಅಕ್ಷರ ಗಾತ್ರ

ಮುಂಬೈ: ಗಡಿಗೆ ಸಂಬಂಧಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಜಟಾಪ‍ಟಿ ಇನ್ನಷ್ಟು ಬಿರುಸು ಪಡೆದುಕೊಂಡಿದೆ. ಕರ್ನಾಟಕದ ಗಡಿಯಲ್ಲಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್‌ ಮತ್ತು ಭಾಲ್ಕಿಯಲ್ಲಿರುವ ಮರಾಠಿ ಭಾಷಿಕರು ಹೆಚ್ಚಾಗಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಬದ್ಧತೆಯನ್ನು ತೋರುವ ನಿರ್ಣಯವನ್ನು ಅಲ್ಲಿನ ವಿಧಾನಮಂಡಲವು ಮಂಗಳವಾರ ಅಂಗೀಕರಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೆ ಬಲ ತುಂಬುವ ಪ್ರಸ್ತಾವವೂ ನಿರ್ಣಯದಲ್ಲಿ ಸೇರಿದೆ.

ಕರ್ನಾಟಕ ಸರ್ಕಾರದ ಮರಾಠಿ ವಿರೋಧಿ ನೀತಿಯ ಬಗೆಗೂ ನಿರ್ಣಯದಲ್ಲಿ ಅತೃಪ್ತಿ ಸೂಚಿಸಲಾಗಿದೆ. ಕರ್ನಾಟಕ ಸರ್ಕಾರವು ವಿವಾದಾತ್ಮಕ ಪ್ರದೇಶಗಳಲ್ಲಿ ದರ್ಪ ತೋರುತ್ತಿದೆ ಎಂದೂ ಕಳವಳ ವ್ಯಕ್ತಪಡಿಸಲಾಗಿದೆ. ‌

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಎರಡು ಪುಟಗಳ ನಿರ್ಣಯವನ್ನು ಮಂಡಿಸಿದರು. ಎರಡೂ ಸದನಗಳಲ್ಲಿಯೂ ನಿರ್ಣಯವು ಸರ್ವಾನುಮತದಿಂದ ಅಂಗೀಕಾರವಾಯಿತು. ನಾಗ್ಪುರದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಆಘಾಡಿ ಕೂಡ ನಿರ್ಣಯವನ್ನು ಬೆಂಬಲಿಸಿತು.

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದಕ್ಕೆ ಆರು ದಶಕಗಳ ಇತಿಹಾಸ ಇದೆ. ಕಳೆದ ಒಂದು ತಿಂಗಳಲ್ಲಿ ಜಟಾಪಟಿ ತೀವ್ರಗೊಂಡಿದೆ.

ಯಥಾಸ್ಥಿತಿಯ ನಿರ್ಧಾರಕ್ಕೆ ಬೆಲೆ ಇಲ್ಲ: ಶಿಂದೆ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಈ ತಿಂಗಳ ಆರಂಭದಲ್ಲಿ ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಭಾಗಿಯಾಗಿದ್ದರು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಈ ಸಭೆಯಲ್ಲಿ ಇದ್ದರು. ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಈ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಎರಡೂ ರಾಜ್ಯಗಳು ಗಡಿಯ ವಿಚಾರದಲ್ಲಿ ದಿನಕ್ಕೊಂದು ನಿರ್ಧಾರಕ್ಕೆ ಬರುತ್ತಿವೆ.

ಉದ್ಧವ್‌ ಸ್ವಾಗತ

ಮಹಾರಾಷ್ಟ್ರ ವಿಧಾನಮಂಡಲದ ಎರಡೂ ಸದನಗಳು ಗಡಿ ವಿವಾದದ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸಿದ್ದನ್ನು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸ್ವಾಗತಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಮುಂದಿರುವ ಗಡಿ ವಿವಾದವು ಇತ್ಯರ್ಥಗೊಳ್ಳುವವರೆಗೆ ಎಲ್ಲಾ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಬೇಕು, ಮಹಾರಾಷ್ಟ್ರ ಸರ್ಕಾರ ಇದಕ್ಕಾಗಿ ಹೊಸದಾಗಿ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಬೇಕು ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಮಹಾರಾಷ್ಟ್ರ ನಿರ್ಣಯ ಖಂಡನಾರ್ಹ’

ಬೆಳಗಾವಿ: ‘ಬೆಳಗಾವಿ, ಬೀದರ್‌, ಭಾಲ್ಕಿ, ನಿಪ್ಪಾಣಿ, ಕಾರವಾರ ನಗರ ಸೇರಿದಂತೆ ಮರಾಠಿ ಭಾಷಿಕ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯ ಖಂಡನಾರ್ಹ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಇಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಭಾಷಾವಾರು ರಾಜ್ಯಗಳ ಪುನರ್‌ ವಿಂಗಡಣಾ ಕಾಯ್ದೆಗೆ ನಾವು ಗೌರವ ಕೊಟ್ಟೆವು. 1956ರಲ್ಲಿ ಅದು ಜಾರಿಯಾಗಿದ್ದು ಜನ ನೆಮ್ಮದಿಯಿಂದ ಇದ್ದಾರೆ. ಮಹಾರಾಷ್ಟ್ರದ ರಾಜಕಾರಣಿಗಳ ಒತ್ತಡದ ಮೇರೆಗೆ ‘ಮಹಾಜನ್‌ ಆಯೋಗ’ ರಚನೆಯಾಯಿತು. ಆ ವರದಿಯನ್ನೂ ನಾವು ಒಪ್ಪಿಕೊಂಡೆವು. ಮಹಾರಾಷ್ಟ್ರದ ರಾಜಕಾರಣಿಗಳೇ ವಿವಾದವನ್ನು ಸುಪ್ರೀಂಕೋರ್ಟ್‌ಗೆ ತೆಗೆದುಕೊಂಡು ಹೋದರು. ನ್ಯಾಯಾಲಯಕ್ಕೂ ಗೌರವ ಕೊಟ್ಟೆವು. ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಸದನದಲ್ಲಿ ನಿರ್ಣಯ ಅಂಗೀಕಾರ ಮಾಡಿದ ಮಹಾರಾಷ್ಟ್ರದ ನಡೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ’ ಎಂದು ಆಕ್ಷೇಪಿಸಿದರು.

‘ನಮ್ಮ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದೇವೆಯೇ ಹೊರತು, ಅವರ ಭೂಮಿ ಕೇಳಿಲ್ಲ. ಆದರೆ, ಕರ್ನಾಟಕ ಗಡಿ ಭೂಮಿಯನ್ನೇ ಅವರು ಕೇಳುತ್ತಿದ್ದಾರೆ. ನಮ್ಮ ನಡೆಗೂ ಅವರ ನಡೆಗೂ ಇದೇ ವ್ಯತ್ಯಾಸ. ನ್ಯಾಯ ನಮ್ಮ ಪರವಾಗಿದೆ. ಮಹಾರಾಷ್ಟ್ರದವರು ರಾಜಕಾರಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಯಾರು ಏನೇ ಮಾಡಿದರೂ ಒಂದಿಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ’ ಎಂದರು.

‘ನೆಲ, ಜಲ ರಕ್ಷಣೆಯಲ್ಲಿ ರಾಜಿ ಇಲ್ಲ’

ಬೆಳಗಾವಿ: ರಾಜ್ಯಗಳ ಪುನರ್‌ ವಿಂಗಡಣಾ ಕಾಯ್ದೆಯಲ್ಲಿ ನಿಗದಿಯಾದಂತೆ ರಾಜ್ಯದ ಗಡಿ, ನೆಲ ಹಾಗೂ ಜಲವನ್ನು ರಕ್ಷಿಸಿಕೊಳ್ಳುವ ಸರ್ವಾನುಮತದ ನಿರ್ಣಯವನ್ನು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಅಂಗೀಕರಿಸಲಾಯಿತು.‌

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿ ಅಲ್ಲಿನ ಕೆಲವು ರಾಜಕಾರಣಿಗಳು ಹಾಗೂ ಕೆಲವು ಸಂಘಟನೆಗಳು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಹಾಗೂ ಗಡಿ ಭಾಗದಲ್ಲಿ ಉಂಟಾಗಿದ್ದ ತ್ವೇಷಮಯ ವಾತಾವರಣದ ಕುರಿತು ನಿಯಮ 68ರ ಅಡಿಯಲ್ಲಿ ಸದನದಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮೂರೂ ಪಕ್ಷಗಳ ಸದಸ್ಯರು, ಮಹಾರಾಷ್ಟ್ರದ ಕೆಲವು ರಾಜಕೀಯ ಮುಖಂಡರು ಹಾಗೂ ಕೆಲವು ಸಂಘಟನೆಗಳ ನಾಯಕರ ಪ್ರಚೋದನಕಾರಿ ಹೇಳಿಕೆಗಳನ್ನು ಒಕ್ಕೊರಲಿನಿಂದ ಖಂಡಿಸಿದರು.

ಚರ್ಚೆಗೆ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ರಾಜ್ಯಗಳ ಪುನರ್‌ವಿಂಗಡಣಾ ಕಾಯ್ದೆಯ ಪ್ರಕಾರ ನಿಗದಿಯಾಗಿರುವ ರಾಜ್ಯದ ಗಡಿಯೇ ನಮಗೆ ಅಂತಿಮ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಕಣ್ಣಿಟ್ಟು ಮಹಾರಾಷ್ಟ್ರದ ಕೆಲವರು ಈ ರೀತಿ ಕಿಡಿಗೇಡಿತನ ಮಾಡಿದ್ದಾರೆ. ಇಂತಹ ಅತಿರೇಕಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

‘ಮಹಾರಾಷ್ಟ್ರದ ನಾಯಕರು ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ಇಲ್ಲಿನ ನಾಯಕರ ವಿರುದ್ಧ ವೈಯಕ್ತಿಕವಾಗಿ ನಿಂದನೆಗೆ ಇಳಿದಿರುವುದು ಖಂಡನೀಯ. ಸುಪ್ರೀಂ ಕೋರ್ಟ್‌ ಕೂಡ ಅಂತರರಾಜ್ಯ ಗಡಿ ಕುರಿತು ವಿಚಾರಣೆ ನಡೆಸುವಂತಿಲ್ಲ. ಸಂಸತ್ತಿನ ನಿರ್ಣಯವೇ ಅಂತಿಮ’ ಎಂದು ಹೇಳಿದರು.

ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌, ಎಸ್‌. ರವಿ, ಪಿ.ಆರ್‌. ರಮೇಶ್‌, ನಾಗರಾಜ್‌ ಯಾದವ್‌, ಮೋಹನ್‌ ಕೊಂಡಜ್ಜಿ, ಜೆಡಿಎಸ್‌ನ ಟಿ.ಎ. ಶರವಣ, ಕೆ.ಎ. ತಿಪ್ಪೇಸ್ವಾಮಿ, ಬಿಜೆಪಿಯ ಎನ್‌. ರವಿಕುಮಾರ್‌, ಕೆ.ಎಸ್‌. ನವೀನ್‌, ತೇಜಸ್ವಿನಿ ಗೌಡ, ಸಾಬಣ್ಣ ತಳವಾರ, ಹಣಮಂತ ನಿರಾಣಿ ಅವರು ಮಹಾರಾಷ್ಟ್ರದ ರಾಜಕಾರಣಿಗಳು ಹಾಗೂ ಕೆಲವು ಸಂಘಟನೆಗಳ ಪುಂಡಾಟಿಕೆಯನ್ನು ವಿರೋಧಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT