ಮಧುಗಿರಿ: ‘ನಮ್ಮ ಊರಿನ ಯಾವ ದೇವಸ್ಥಾನಕ್ಕೂ ನೀವು ಹಣ ಕೊಡುವುದು ಬೇಡ. ಮೊದಲು ನಮ್ಮೂರಿನ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡಿ’ ಎಂದು ಗ್ರಾಮಸ್ಥರು ಮಧುಗಿರಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ವಿ.ವೀರಭದ್ರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಲ್ಲೂಕಿನ ನೀರಕಲ್ಲು ಗ್ರಾಮದಲ್ಲಿ ಮಂಗಳವಾರ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಿ ಹಿಂದಿರುಗುತ್ತಿದ್ದ ಶಾಸಕರನ್ನು ಅಡ್ಡಗಟ್ಟಿದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ವಿಡಿಯೊ ತುಣುಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಚುನಾವಣೆಯಲ್ಲಿ ನೀವು ಗೆದ್ದು ಹೋಗಿ ಐದು ವರ್ಷವಾಗಿದೆ. ಗೆದ್ದ ಬಳಿಕ ಈ ಕಡೆ ಮುಖವನ್ನೇ ಹಾಕಿಲ್ಲ. ಈಗ ಬಂದಿದ್ದೀರಿ. ಮಳೆ ಬಂದಾಗ ನೀರು ಶಾಲೆಗೆ ನುಗ್ಗಿ ಮಕ್ಕಳು ಕೊಳಚೆಯಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಪಾಠ ಕೇಳುವಂತಾಗಿದೆ. ನಮ್ಮೂರಿಗೆ ಯಾವ ಅಭಿವೃದ್ಧಿ ಕೆಲಸ ಮಾಡಿದ್ದೀರಾ’ ಎಂದು ಗ್ರಾಮಸ್ಥರು ಪ್ರಶ್ನೆ ಮೇಲೆ ಪ್ರಶ್ನೆ ಕೇಳಲು ಆರಂಭಿಸಿದರು.
ಇದರಿಂದ ಸಿಡಿಮಿಡಿಗೊಂಡ ಶಾಸಕ ಅಲ್ಲಿಂದ ತೆರಳಲು ಯತ್ನಿಸಿದಾಗ ತಡೆದು ನಿಲ್ಲಿಸಿದ ಗ್ರಾಮಸ್ಥರು, ‘ಹೀಗೆ ಹೋದರೆ ಹೇಗೆ? ನಿಮ್ಮ ಬಳಿ ಮಾತನಾಡಬೇಕು ಸ್ವಲ್ಪ ನಿಲ್ಲಿ’ ಎಂದು ಕೇಳಿದರು.
‘ಏನಪ್ಪ ಮಾತನಾಡಬೇಕು. ಆಗಿರುವ ಕೆಲಸವನ್ನು ಆಗಿಲ್ಲ ಎಂದು ಹೇಳುತ್ತಿದ್ದೀರಾ. ನಿಮ್ಮ ಗ್ರಾಮಕ್ಕೆ ನೀಡಿರುವ ಅನುದಾನವನ್ನು ತಾಲ್ಲೂಕಿನ ಬೇರೆ ಯಾವ ಗ್ರಾಮಕ್ಕೂ ನೀಡಿಲ್ಲ’ ಎಂದು ಶಾಸಕರು ಸಿಡುಕಿದರು.
‘ಹಾಗಾದರೆ ಐದು ವರ್ಷಗಳಲ್ಲಿ ನೀವು ನಮ್ಮ ಗ್ರಾಮಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ನೀಡಿ’ ಎಂದು ಗ್ರಾಮದ ಕೆಲವು ಯುವಕರು ಪಟ್ಟು ಹಿಡಿದರು. ಅವರನ್ನು ಸಮಾಧಾನಪಡಿಸಿ, ಸಮಜಾಯಿಷಿ ನೀಡಲು ಮುಂದಾದ ಶಾಸಕರು ಕೊನೆಗೆ ಕೋಪದಿಂದಲೇ ಗ್ರಾಮದಿಂದ ತೆರಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.