ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40ರಷ್ಟು ಲಂಚ ಆರೋಪ: ವಿಧಾನ ಪರಿಷತ್‌ನಲ್ಲಿ ಕೋಲಾಹಲ

Last Updated 23 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಶೇ 40ರಷ್ಟು ಮೊತ್ತ ಲಂಚದ ರೂಪದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೇಬು ಸೇರುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ ಆರೋಪ ಗುರುವಾರ ವಿಧಾನ ಪರಿಷತ್‌ನಲ್ಲಿ ಕೆಲಕಾಲ ಕೋಲಾಹಲಕ್ಕೆ ಕಾರಣವಾಯಿತು.

ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ, ‘ಸರ್ಕಾರದ ಇಲಾಖೆಗಳಲ್ಲಿ ಕಾಮಗಾರಿ ಕೈಗೊಳ್ಳಲು ಬಿಡುಗಡೆಯಾಗುವ ಮೊತ್ತದಲ್ಲಿ ಶೇ 40ರಷ್ಟು ಮೊತ್ತ ಲಂಚದ ರೂಪದಲ್ಲಿ ಸಂದಾಯ ಆಗುತ್ತಿದೆ ಎಂಬುದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ. ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಿಗೆ ದೂರು ನೀಡಿದ್ದಾರೆ. ಇದರಿಂದ ಎಲ್ಲರೂ ತಲೆ ತಗ್ಗಿಸುವಂತಾಗಿದೆ’ ಎಂದರು.

‘ವಿಧಾನಮಂಡಲದ ಎರಡೂ ಸದನಗಳ ಸದಸ್ಯರೂ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸಚಿವರು ಶೇ 5ರಷ್ಟು ಲಂಚ ಕೇಳುತ್ತಿದ್ದಾರೆ ಎಂಬ ಆರೋಪವಿದೆ. ಕೆಲವು ಸಂಸದರ ವಿರುದ್ಧವೂ ಲಂಚ ಪಡೆಯುತ್ತಿರುವ ಆರೋಪವಿದೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ ಎಲ್ಲರೂ ನಾಶವಾಗುತ್ತೇವೆ’ ಎಂದು ಹೇಳಿದರು.

ಲಂಚದ ಆರೋಪದ ಕುರಿತು ತನಿಖೆ ನಡೆಸಲೇಬೇಕು. ಪ್ರಧಾನಿ, ರಾಜ್ಯಪಾಲರು ಸೇರಿದಂತೆ ಹಲವರಿಗೆ ದೂರು ಸಲ್ಲಿಕೆಯಾಗಿದ್ದರೂ ಕ್ರಮವಾಗಿಲ್ಲ. ಈಗ ಜನರು ಎಲ್ಲ ಶಾಸಕರನ್ನೂ ಅನುಮಾನದಿಂದ ನೋಡುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಪ್ರಕರಣದ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿದರು.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಈ ಆರೋಪದಲ್ಲಿ ಹುರುಳಿಲ್ಲ ಎಂದು ವಿವರ ನೀಡಲು ಮುಂದಾದರು.

ಅಷ್ಟರಲ್ಲಿ ಎದ್ದು ನಿಂತ ಜೆಡಿಎಸ್‌ನ ಮರಿತಿಬ್ಬೇಗೌಡ ಮತ್ತು ಕಾಂಗ್ರೆಸ್‌ ಸದಸ್ಯರು ಲಿಖಿತ ಉತ್ತರಕ್ಕೆ ಪಟ್ಟು ಹಿಡಿದರು. ಆಡಳಿತ– ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ಆರಂಭವಾಯಿತು. ಕಾಂಗ್ರೆಸ್‌ ಸದಸ್ಯರು ಸಭಾಪತಿಯವರ ಪೀಠದ ಎದುರು ಧರಣಿ ಆರಂಭಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಕಲಾಪ ಮುಂದೂಡಿದರು.

ಮಧ್ಯಾಹ್ನ 3ಕ್ಕೆ ಮತ್ತೆ ಕಲಾಪ ಆರಂಭವಾದಾಗ ಧರಣಿ ಮುಂದುವರಿಸಿದ ಕಾಂಗ್ರೆಸ್‌ ಸದಸ್ಯರು ಲಿಖಿತ ಉತ್ತರಕ್ಕೆ ಪಟ್ಟು ಹಿಡಿದರು. ಜೆಡಿಎಸ್‌ ಸದಸ್ಯರೂ ಬೆಂಬಲಿಸಿದರು. ಸಭಾಪತಿಯವರು ಮನವೊಲಿಸಿದ ಬಳಿಕ ವಿಪಕ್ಷಗಳ ಸದಸ್ಯರು ಧರಣಿ ಹಿಂಪಡೆದರು.

ಸಾಕ್ಷ್ಯ ನೀಡಿಲ್ಲ: ಕಾರಜೋಳ
‘ವಿಧಾನಸೌಧವನ್ನು ನಿರ್ಮಿಸಿದ ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಸೇರಿದಂತೆ ಎಲ್ಲರ ಮೇಲೂ ಭ್ರಷ್ಟಾಚಾರದ ಆರೋಪ ಬಂದಿದೆ. ಕೆಂಪಣ್ಣ ಎಂಬುವವರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ 42,000 ಗುತ್ತಿಗೆದಾರರಿದ್ದಾರೆ. ಆದರೆ, ಆರೋಪ ಮಾಡಿದವರ ಸಂಘದಲ್ಲಿ ಇರುವುದು 800 ಸದಸ್ಯರು ಮಾತ್ರ. ಅವರು ಗಾಳಿಯಲ್ಲಿ ಗುಂಡು ಹೊಡೆದಂತೆ ಆರೋಪ ಮಾಡಿದ್ದಾರೆ. ಯಾರ ವಿರುದ್ಧವೂ ಸಾಕ್ಷ್ಯ ನೀಡಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT