ಮಂಗಳವಾರ, ಏಪ್ರಿಲ್ 20, 2021
32 °C

ನಾಳೆಯಿಂದ ಕೆಎಸ್‌ಆರ್‌ಟಿಸಿಯಿಂದ ಕಾರ್ಗೊ, ಪಾರ್ಸೆಲ್‌ ಸೇವೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಎಸ್‌ಆರ್‌ಟಿಸಿ ಬಸ್‌ಗಳು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಶುಕ್ರವಾರದಿಂದ ಕಾರ್ಗೋ, ಪಾರ್ಸೆಲ್‌ ಮತ್ತು ಹಗುರ ಪಾರ್ಸೆಲ್‌ಗಳ ಸೇವೆಗೆ ಚಾಲನೆ ನೀಡಲಿವೆ.

ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವ್ಯವಸ್ಥೆ ಜಾರಿ ಮಾಡುವುದರಿಂದ ಸಾರಿಗೆ ಸಂಸ್ಥೆಗೆ ವಾರ್ಷಿಕ ₹80 ರಿಂದ ₹100 ಕೋಟಿ ಆದಾಯ ಸಿಗಲಿದೆ. ಮೊದಲ ಹಂತದಲ್ಲಿ ರಾಜ್ಯದೊಳಗೆ 88 ಬಸ್‌ ನಿಲ್ದಾಣಗಳಲ್ಲಿ ಮತ್ತು ಅಂತರರಾಜ್ಯದ 21 ಬಸ್‌ ನಿಲ್ದಾಣಗಳಲ್ಲಿ 21 ಬಸ್‌ ನಿಲ್ದಾಣ ಸೇರಿ ಒಟ್ಟು 109 ಬಸ್‌ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಎರಡನೇ ಹಂತದಲ್ಲಿ ಉಳಿದ ಬಸ್‌ ನಿಲ್ದಾಣಗಳಲ್ಲೂ ಈ ಯೋಜನೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ಈಗ ಲಗೇಜ್‌ ಸಾಗಣೆಯಿಂದ ಮೂರು ಸಾರಿಗೆ ನಿಗಮಗಳು ಪ್ರತಿ ದಿನ ₹8.50 ಲಕ್ಷ ಆದಾಯಗಳಿಸುತ್ತಿದೆ. ಹೊಸ ವ್ಯವಸ್ಥೆ ಜಾರಿ ಆದ ಬಳಿಕ ಲಗೇಜ್ ಆದಾಯ ಎರಡು ಪಟ್ಟು ಹೆಚ್ಚಾಗಲಿದೆ ಎಂದರು.

ಈ ಯೋಜನೆಯ ಜಾರಿಗೆ ‘ಮೆಸ್ಟ್ರಾಟಜಿಕ್‌ ಔಟ್ ಸೋರ್ಸಿಂಗ್‌ ಪ್ರೈವೇಟ್‌ ಲಿಮಿಟೆಡ್‌’ ಅನ್ನು ಟೆಂಡರ್‌ ಮೂಲಕ ಐದು ವರ್ಷಗಳ ಅವಧಿಗೆ ನಿರ್ವಹಣಾ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ. ಅಗತ್ಯ ಮೂಲ ಸೌಕರ್ಯವನ್ನು ಈ ಕಂಪನಿಯವರೇ ಅಳವಡಿಸಿ ನಿರ್ವಹಿಸಲಿದ್ದಾರೆ. ಇವರಿಗೆ ನಿಗಮದ ಬಸ್ ನಿಲ್ದಾಣಗಳಲ್ಲಿ 10x10 ಅಳತೆಯ ಉಚಿತ ಸ್ಥಳಾವಕಾಶ ನೀಡಲಾಗುವುದು ಎಂದರು.

ಈ ಕಂಪನಿಯವರು ಕೌಂಟರ್‌ ನಿರ್ವಹಿಸಲು ಮಾನವ ಶಕ್ತಿ ನಿಯೋಜನೆ, ಲಗೇಜ್‌ ಸ್ವೀಕರಿಸುವುದು, ಬಸ್ಸಿಗೆ ಲೋಡಿಂಗ್– ಅನ್‌ ಲೋಡಿಂಗ್‌ ಮಾಡುವುದು. ತಲುಪಿದ ಬಸ್‌ ನಿಲ್ದಾಣದಲ್ಲಿ ಗ್ರಾಹಕರಿಗೆ ಲಗೇಜ್‌ ವಿಲೇವಾರಿ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು