ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವಿಗೆ ಹಾಲೆರೆಯುತ್ತಿದ್ದೀರಿ, ನಂತರದ ಸರದಿ ನಿಮ್ಮದಿರಬಹುದು: ಸಿಎಂಗೆ ಕಾಂಗ್ರೆಸ್‌

Last Updated 19 ಆಗಸ್ಟ್ 2022, 11:37 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಘಟನೆ ರಾಜ್ಯ ರಾಜಕಾರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ.

ಈ ವಿಚಾರವಾಗಿ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಕ್ಷಣೆ ಸರ್ಕಾರದ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅತಿವೃಷ್ಟಿ ಹಾನಿ ವೀಕ್ಷಣೆಗೆ ತೆರಳಿದ್ದ ವಿಪಕ್ಷ ನಾಯಕರಿಗೆ ರಕ್ಷಣೆ ಇಲ್ಲ ಎಂದಾದರೆ ಜನಸಾಮಾನ್ಯರ ರಕ್ಷಣೆ ಈ ಸರ್ಕಾರದಿಂದ ಸಾಧ್ಯವೇ? ಗೃಹಸಚಿವರು ಇನ್ನೂ ಹುದ್ದೆಯಲ್ಲಿರಲು ಅರ್ಹರೇ? ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಸಿದ್ದರಾಮಯ್ಯ ಅವರ ಮೇಲೆ ನಿನ್ನೆಯಷ್ಟೇ ಅಲ್ಲ, ಇಂದೂ ಸಹ ಚಿಕ್ಕಮಗಳೂರಿನಲ್ಲಿ ದಾಳಿಗೆ ಯತ್ನಿಸಲಾಗಿದೆ. ಸರ್ಕಾರ ಏಕೆ ಎಚ್ಚೆತ್ತುಕೊಳ್ಳಲಿಲ್ಲ? ರಕ್ಷಣಾ ಕ್ರಮವನ್ನು ಏಕೆ ಬಿಗಿಗೊಳಿಸಲಿಲ್ಲ? ಸರ್ಕಾರ ಅನಾಹುತಗಳು ಸಂಭವಿಸಲಿ ಎಂದು ಬಯಸುತ್ತಿದೆಯೇ? ಕೊಡಗಿನಲ್ಲಾದ ಘಟನೆಯನ್ನು ಚಿಕ್ಕಮಗಳೂರಿನಲ್ಲೂ ಜರುಗಲು ಬಿಟ್ಟಿದ್ದೇಕೆ ಗೃಹಸಚಿವರೇ?’ ಎಂದು ಪ್ರಶ್ನಿಸಿದೆ.

'ಸಿದ್ದರಾಮಯ್ಯ ಸಾಗುವ ದಾರಿಯಲ್ಲಿ ಹಾಗೂ ಅವರ ಆಗಮಿಸುವ ಸ್ಥಳದಲ್ಲೇ ಬಿಜೆಪಿ ಗೂಂಡಾಗಳು ಜಾಮಾಯಿಸಿದ್ದರೂ, ಮುನ್ಸೂಚನೆ ಇದ್ದರೂ ಪೊಲೀಸರು ಅವರನ್ನು ವಶಕ್ಕೆ ಪಡೆಯದೆ ಅವರ ರಕ್ಷಣೆಗೇ ನಿಂತಿದ್ದರು. ಗೂಂಡಾಗಳಿಗೆ ರಕ್ಷಣೆ ನೀಡುವುದು ಸರ್ಕಾರದ ನಿರ್ದೇಶನವಾಗಿತ್ತೇ? ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ ಎಸ್‌ಪಿಯನ್ನು ಕೂಡಲೇ ಅಮಾನತುಗೊಳಿಸಿ’ ಎಂದು ಒತ್ತಾಯಿಸಿದೆ.

‘ಜನರ ಕಷ್ಟವನ್ನು ತಾವೂ ಕೇಳುವುದಿಲ್ಲ, ಬೆರೆಯವರೂ ಕೇಳಬಾರದು ಎಂಬ ಧೋರಣೆ ಬಿಜೆಪಿ ಸರ್ಕಾರದ್ದು. ಅತಿವೃಷ್ಟಿಗೆ ಕೈಗೊಂಡ ಕ್ರಮಗಳೇನು, ನೀಡಿದ ಪರಿಹಾರವೇನು? ಉತ್ತರಿಸುವ ಧೈರ್ಯ ಸರ್ಕಾರಕ್ಕಿದೆಯೇ?ಇದುವರೆಗೂ ನಷ್ಟದ ಸರ್ವೆ ನಡೆಸದೆ, ಪರಿಹಾರ ಘೋಷಿಸದೆ ಕುರ್ಚಿ ಕಸರತ್ತಿನಲ್ಲಿ ಮುಳುಗಿದ ಸರ್ಕಾರ ಈಗ ವಿಪಕ್ಷಗಳನ್ನು ತಡೆಯುತ್ತಿದೆ’ ಎಂದು ಹರಿಹಾಯ್ದಿದೆ.

‘ಬಿಜೆಪಿಯ ಗೂಂಡಾಪಡೆಯನ್ನು ಪೋಷಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರೇ, ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದದ್ದನ್ನು ತಾವು ಎಂಜಾಯ್ ಮಾಡುತ್ತಿರಬಹುದು. ಆದರೆ, ಅದೇ ಗೂಂಡಾಪಡೆ ನಳಿನ್‌ ಕುಮಾರ್‌ ಕಟೀಲ್‌ ಕಾರನ್ನು ಉರುಳಿಸಲು ಹೊರಟಿತ್ತು. ಮುಂದಿನ ಸರದಿ ನಿಮ್ಮದಿರಬಹುದು. ಹಾವಿಗೆ ಹಾಲೆರೆಯುತ್ತಿದ್ದೀರಿ, ಅದು ವಿಷವಲ್ಲದೆ ಅಮೃತ ಕಕ್ಕುವುದಿಲ್ಲ. ನೆನಪಿರಲಿ’ ಎಂದೂ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT